ಗದಗ

ಬಗರ್‌ಹುಕುಂ: ಬಡವರ ಬದುಕು ಅತಂತ್ರ

Published On :





ಟ ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜ. 28
ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದಿರುವ ಹಲವಾರು (ಲಂಬಾಣಿಗಳು) ಬಡ ಕುಟುಂಬಗಳು ಇಂದಿಗೂ ನಿಕೃಷ್ಟವಾದ ರೀತಿಯಲ್ಲಿಯೇ ಜೀವನ ಸಾಗಿಸುತ್ತಿವೆ. ಅದರಲ್ಲಿಯೂ ಯಾವುದೇ ಆದಾಯದ ಮೂಲವಿಲ್ಲದೇ ಸರ್ಕಾರದ ಭೂಮಿಯನ್ನೇ ಇಲ್ಲಿಯವರೆಗೂ ಉಳುಮೆ ಮಾಡಿಕೊಂಡು ಅದರಿಂದಲೇ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಇಂದಿಗೂ ಹಕ್ಕುಪತ್ರ ಲಭ್ಯವಾಗದೇ ಇರುವುದರಿಂದ ಅವರೆಲ್ಲರ ಬದುಕು ಅತಂತ್ರ ಸ್ಥಿತಿಯಲ್ಲಿದೆ.
ಜಿಲ್ಲೆಯ ರೋಣ ತಾಲೂಕಿನ ಸರ್ಜಾಪುರ, ಬೊಮ್ಮಸಾಗರ, ಶಾಂತಗೇರಿ, ನೆಲ್ಲೂರ, ದಿಂಡೂರ, ಕಲ್ಲಿಗನೂರ, ನಾಗೇಂದ್ರಗಡ, ಲಕ್ಕಲಕಟ್ಟಿ, ಅಮರಗಟ್ಟಿ, ಭೈರಾಪುರ, ಭೈರಾಪುರ ತಾಂಡಾ, ರಾಜೂರ, ಕಾಲಕಾಲೇಶ್ವರ, ಜಿಗೇರಿ, ವದೇಗೋಳ, ಕುಂಟೋಜಿ, ಉಣಚಗೇರಿ, ಗದಗ ತಾಲೂಕಿನ ಪಾಪನಾಶಿ, ಅಡವಿಸೋಮಾಪುರ, ಸಣ್ಣ ತಾಂಡಾ, ದೊಡ್ಡ ತಾಂಡಾ, ಕಳಸಾಪುರ, ಬೆಳದಡಿ ನಾಗಾವಿ, ಮಹಾಲಿಂಗಪುರ, ಮುಂಡರಗಿ ತಾಲೂಕಿನ ಡೋಣಿ, ದಿಂಡೂರ, ಶಿಂಗಟಾರಾಯನಕೆರೆ, ಅತ್ತಿಕಟ್ಟಿ, ಶಿರಹಟ್ಟಿ ತಾಲೂಕಿನ ಯಲ್ಲಾಪುರ, ಮಜ್ಜೂರ, ಕೆರಳ್ಳಿ, ಜಲ್ಲಿಗೇರಿ ಈ ಎಲ್ಲ (ಗ್ರಾಮ) ತಾಂಡಾಗಳಲ್ಲಿ ವಾಸಿಸುವ ಬಡ ಮತ್ತು ಹಿಂದುಳಿದ ವರ್ಗಗಳಿಗೆ ದುಡಿಯಲು ಜಮೀನುಗಳಿಲ್ಲದೇ ಇರುವುದರಿಂದ ಸರ್ಕಾರಿ ಭೂಮಿಯನ್ನು (ಒತ್ತುವರಿ) ಸ್ವಚ್ಛಗೊಳಿಸಿ ಸಾಗುವಳಿ ಮಾಡಿಕೊಂಡು ಹಲವಾರು ವರ್ಷಗಳಿಂದ ಜೀವನ ಸಾಗಿಸುತ್ತಾ ಬಂದಿದ್ದಾರೆ. ಅವರೆಲ್ಲಾ ಇಂದು ಭೂಮಿಯನ್ನು ಹೊಂದಿದ್ದರೂ ಅದಕ್ಕೆ ಬೇಕಾಗುವ ದಾಖಲೆಗಳನ್ನು ಹೊಂದಿಲ್ಲ.
ಸಕ್ರಮಗೊಳಿಸುವಂತೆ ಅರ್ಜಿ: 5 ತಾಲೂಕುಗಳ ವ್ಯಾಪ್ತಿಯಲ್ಲಿನ 35 (ಗ್ರಾಮ) ತಾಂಡಾಗಳಲ್ಲಿ ವಾಸಿಸುವ 219 ಕುಟುಂಬಗಳು ಅವರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸುವಂತೆ 1992 ರಲ್ಲಿಯೇ ಅರ್ಜಿ ಸಲ್ಲಿಸಿದ್ದರೂ ಇಲ್ಲಿಯವರೆಗೂ ಈ ಕುಟುಂಬಗಳಿಗೆ ನ್ಯಾಯ ದೊರೆತಿಲ್ಲ. ಇದು ಕೇವಲ ಭೂಮಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ ಕುಟುಂಬಗಳ ವ್ಯಥೆಯಾದರೆ, ಇದೇ ಗ್ರಾಮಗಳಲ್ಲಿ ವಾಸಿಸುವ 618ಕ್ಕೂ ಹೆಚ್ಚು ಲಂಬಾಣಿ ಕುಟುಂಬಗಳು ಇಂದಿಗೂ ಸಕ್ರಮಕ್ಕಾಗಿ ಅರ್ಜಿಯನ್ನೇ ಸಲ್ಲಿಸಿಲ್ಲ. ಯಾಥಾ ಸ್ಥಿತಿಯಲ್ಲಿಯೇ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿದ್ದು, ಇಂದಲ್ಲ ನಾಳೆ ಸಾಗುವಳಿ ಮಾಡುತ್ತಿರುವ ಭೂಮಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಸೌಲಭ್ಯ ಸಿಗುತ್ತಿಲ್ಲ: ಈಗ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಕುಟುಂಬಗಳು ತೀರಾ ಬಡತನದಲ್ಲಿರುವ ಲಂಬಾಣಿ ಹಾಗೂ ಹಿಂದುಳಿದ ವರ್ಗದವರಾಗಿದ್ದಾರೆ. ಸರ್ಕಾರ ಇಂದು ಸಣ್ಣ ರೈತರಿಗಾಗಿ ಹಲವಾರು ಸೌಲಭ್ಯ ನೀಡುತ್ತಿದೆ. ಆದರೆ ಇವರಿಗೆ ಸಾಗುವಳಿ ಭೂಮಿ ಇದ್ದು, ಅದರ ಮೇಲೆ ಯಾವುದೇ ರೀತಿಯ ಹಕ್ಕಿಲ್ಲ. ಹಾಗಾಗಿ ಅವರಿಗೆ ಸರ್ಕಾರದಿಂದ ಸಿಗಬೇಕಾದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದಿರುವುದು ಈ ಜನರ ನೋವಿಗೆ ಕಾರಣವಾಗಿದೆ.
ಜನರಲ್ಲಿ ಆತಂಕ: ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಹಲವಾರು ಕುಟುಂಬಗಳು ತಮ್ಮ ಜಮೀನುಗಳನ್ನು ಹೊಂದಿರುವುದು ಗುಡ್ಡದ ಭಾಗದಲ್ಲಿ, 4-5 ವರ್ಷಗಳಿಂದ ಜಿಲ್ಲೆಗೆ ಲಗ್ಗೆ ಇಟ್ಟಿರುವ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು, ಈ ರೀತಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವವರನ್ನು ನಿರಂತರವಾಗಿ ಶೋಷಣೆ ಮಾಡುತ್ತಿದ್ದು, ಈ ಶೋಷಣೆಯ ವಿರುದ್ಧ ಧ್ವನಿ ಎತ್ತಲು ಇವರ ಬಳಿ ಸೂಕ್ತವಾದ ದಾಖಲೆಗಳ ಕೊರತೆ ಇದೆ. ಇದೇ ಜಮೀನನ್ನೇ ನಂಬಿ ಬದುಕುತ್ತಿರುವ ಕುಟುಂಬಗಳೀಗ ಆತಂಕ ಎದುರಿಸುವಂತಾಗಿದೆ.



ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಕುಟುಂಬಗಳಿಗೆ ತಕ್ಷಣವೇ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ನಿರ್ಧರಿಸಿ ಅವರಿಗೆ ಅಗತ್ಯ ದಾಖಲೆಗಳನ್ನು ನೀಡಬೇಕು. ಈಗಾಗಲೇ ಹಲವಾರು ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಇದಕ್ಕೆ ಅವಕಾಶ ನೀಡಬಾರದು. ಇನ್ನು ನೂರಾರು ಕುಟುಂಬಗಳು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಅದಕ್ಕಾಗಿ ಈ ಅವಧಿಯನ್ನು ವಿಸ್ತರಿಸಬೇಕು. ದುಡಿವ, ಬಡ ವರ್ಗಕ್ಕೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು.
ಟ ಚಂದ್ರಕಾಂತ ಚವಾಣ
ಹಿಂದುಳಿದ ವರ್ಗದ ಮುಖಂಡ, ಬಗರ್ ಹುಕುಂ ಸಾಗುವಳಿ ಹೋರಾಟಗಾರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.