ಗದಗ

ಶುದ್ಧ ನೀರಿನ ಘಟಕ ತೆರೆಯಲು ಸಂಕಲ್ಪ

Published On :




ಶಿರಹಟ್ಟಿ: ಕೇವಲ # 2ರಲ್ಲಿ 20 ಲೀಟರ್ ಶುದ್ಧ ಕುಡಿವ ನೀರು ಪೂರೈಸುವುದರ ಮೂಲಕ ರೈತರಿಗೆ ಹಾಗೂ ಗ್ರಾಮೀಣ ಜನರಿಗೆ ಶುದ್ಧ ಕುಡಿವ ನೀರು ಒದಗಿಸುವುದರ ಜತೆಗೆ ಜನರ ಆರೋಗ್ಯ ಸುಧಾರಿಸಲು ಮುಂದಾಗಿರುವ ಕೆ.ಎಚ್. ಪಾಟೀಲ ಪ್ರತಿಷ್ಠಾನ ಮುಂದಿನ ದಿನಗಳಲ್ಲಿ ಕೆರೆ ಆಶ್ರಿತ ಕುಡಿಯುವ ನೀರಿನ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ತೆರೆಯಲಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಕೆ.ಎಚ್. ಪಾಟೀಲ್ ಪ್ರತಿಷ್ಠಾನ ಹಾಗೂ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಯಿಟಿ, ಪಟ್ಟಣ ಪಂಚಾಯತಿ ಶಿರಹಟ್ಟಿ ಇವರುಗಳ ಆಶ್ರಯದಲ್ಲಿ ಬುಧವಾರ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟಿಸಿ ಮಾತನಾಡಿದರು. ಬಡವರು ಸಹ ಶುದ್ಧ ನೀರು ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶುದ್ಧ ಕುಡಿವ ನೀರಿನ ಘಟಕ ತೆರೆಯಲಾಗುತ್ತಿದೆ ಎಂದರು.
ಉತ್ತರ ಕರ್ನಾಟಕದ 150 ಗ್ರಾಮಳಗಲ್ಲಿ ಕುಡಿವ ನೀರಿಗಾಗಿ ಜನತೆ ಕೆರೆಗಳನ್ನೇ ಅವಲಂಬಿಸಿದ್ದು, ಮುಂಬರುವ ದಿನಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ತೆರೆಯಲು ಸಂಕಲ್ಪ ಮಾಡಿರುವುದಾಗಿ ತಿಳಿಸಿದರು. ಈಗಾಗಲೇ ಸ್ಥಾಪಿಸಲಾದ ಶುದ್ಧ ಕುಡಿವ ನೀರಿನ ಘಟಕದ ಬಗ್ಗೆ ಜನತೆಯಲ್ಲಿ ಜಾಗೃತಿ ಉಂಟು ಮಾಡಲಾಗಿದೆ. ಆದ್ದರಿಂದ ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು. ಕೇಂದ್ರದ ಮುಖಂಡರಾದ ಕೆ.ಜಿ. ಶರ್ಮಾ ಮಾತನಾಡಿ, ದೇಶದಲ್ಲಿ ಬಹುತೇಕ ಬಡ ಜನತೆ ಅಶುದ್ಧ ನೀರನ್ನೇ ಇಂದಿಗೂ ಸೇವನೆ ಮಾಡುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ಒಳ್ಳೆಯ ಕಾರ್ಯಮಾಡುತ್ತಿದ್ದು, ಸೋನಿಯಾ ಗಾಂಧಿ ಅವರ ಗಮನಕ್ಕೆ ತಂದು ಇದನ್ನು ರಾಷ್ಟ್ರೀಯ ಯೋಜನೆಯಾಗಿ ಜಾರಿಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಲಿದೆ. ರಾಜ್ಯದ ಬಡ ಹಾಗೂ ಹಿಂದುಳಿದ ವರ್ಗದ ಜನರ ಬಗ್ಗೆ ಚಿಂತನೆ ನಡೆಸುವ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಹುಮಾಯೂನ ಮಾಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎಂ. ಹಿಂಡಸಗೇರಿ, ಜಿಲ್ಲಾ ಕಾಂಗೈ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಮಾತನಾಡಿದರು. ವೈ.ಎಸ್. ಪಾಟೀಲ, ಕೆ.ಎನ್. ಸ್ವಾಮಿ, ಪಿ.ವಿ. ಪರಬ, ಎಚ್.ಆರ್. ನಾಯಕ, ಎಲ್.ಡಿ. ಪಾಟೀಲ, ದೀಪಕ ಲಮಾಣಿ, ರಾಮಣ್ಣ ಲಮಾಣಿ, ಮಂಜುನಾಥ ಘಂಟಿ, ಜಯಕ್ಕ ಕಳ್ಳಿ, ಯಲ್ಲಪ್ಪ ಇಂಗಳಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.