ಗದಗ

ರಾಷ್ಟ್ರ ನಿರ್ಮಾಣಕ್ಕೆ ಸದೃಢ ಯುವಶಕ್ತಿ ಅವಶ್ಯ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 17
ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಸದೃಢ ಯುವಶಕ್ತಿ ಅತ್ಯವಶ್ಯಕ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು.
ಬುಧವಾರ ಬೆಟಗೇರಿಯ ಲೋಯೊಲಾ ಸ್ಕೂಲ್‌ನಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ ಇವುಗಳ ಆಶ್ರಯದಲ್ಲಿ 2013-14ನೇ ಸಾಲಿನಲ್ಲಿ ಹದಿಹರೆಯದವರಿಗೆ ಕಬ್ಬಿಣಾಂಶ ಮಾತ್ರೆ ನೀಡುವ (ಗಿಐಋಖ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಯುವಶಕ್ತಿಯ ಸದೃಢತೆ ಹಾಗೂ ಸದ್ಬಳಕೆಗೆ ಹಲವಾರು ಜನಪರ ಯೋಜನೆಗಳನ್ನು ಹಾಕಿಕೊಂಡಿದ್ದು, ಉಚಿತವಾಗಿ ವಿತರಿಸುವ ಮಾತ್ರೆಗಳ ಕುರಿತು ಪಾಲಕರು ಹಾಗೂ ವಿದ್ಯಾರ್ಥಿಗಳು ನಿರ್ಲಕ್ಷ್ಯ ಮಾಡದೇ ತೆಗೆದುಕೊಳ್ಳಬೇಕು. ದೇಶದ ಉಜ್ವಲ ಭವಿಷ್ಯ ರೂಪಿಸುವ ಪರಿಣಾಮಕಾರಿ ಯೋಜನೆಯು ಫಲಪ್ರದವಾಗಲು ಶಿಕ್ಷಕರೊಂದಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿ ಡಾ. ಪಿ.ಎಚ್. ಕಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಯೋಜನೆಗೆ ದೇಶಾದ್ಯಂತ ಇಂದು ಚಾಲನೆ ನೀಡಲಾಗುತ್ತಿದ್ದು, ರಾಜ್ಯದ 27 ಸಾವಿರ ಸರ್ಕಾರಿ ಪ್ರೌಢಶಾಲೆಗಳು, 8 ಸಾವಿರ ಅನುದಾನಿತ ಪ್ರೌಢಶಾಲೆಗಳು ಸೇರಿದಂತೆ ಒಟ್ಟು ರಾಜ್ಯದ 34 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಅಡಿ ಬರಲಿದ್ದಾರೆ. ಗದಗ ಜಿಲ್ಲೆಯಲ್ಲಿ 6 ರಿಂದ 10ನೇ ತರಗತಿಯ ವರೆಗೆ ವ್ಯಾಸಂಗ ಮಾಡುತ್ತಿರುವ 1,84,500 ಮಕ್ಕಳು ಈ ಯೋಜನೆಯ ಅಡಿ ಬರಲಿದ್ದು, ಇವರಲ್ಲಿ 90,854 ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಈ ಮಾತ್ರೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮಗಳಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಈ ಮಾತ್ರೆ ಒದಗಿಸಿ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ನೀಡುವಂತೆ ಸೂಚಿಸಲಾಗಿದೆ. ಈ ಕುರಿತು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಈ ಮಾತ್ರೆಯ ಬಳಕೆಯಿಂದ ಕಬ್ಬಿಣಾಂಶದ ಕೊರತೆಯಿಂದ ಕೆಂಪು ರಕ್ತ ಕಣಗಳ ಕೊರತೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಮಾನಸಿಕ ಮತ್ತು ದೈಹಿಕ ಬಲವರ್ಧನೆಗೆ ಉತ್ತೇಜನ ದೊರೆಯಲಿದೆ. ಲೋಯೊಲಾ ಪ್ರೌಢಶಾಲೆಯಲ್ಲಿನ 697 ವಿದ್ಯಾರ್ಥಿಗಳಿಗೆ ಪ್ರತಿವಾರ ಒಮ್ಮೆ ನೀಡಬೇಕಾದ ಮಾತ್ರೆಗಳನ್ನು ಬುಧವಾರ ವಿತರಿಸಲಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ್ ನಾಯಕ ಮಾತನಾಡಿ, ಶೇ. 55 ರಷ್ಟು ವಿದ್ಯಾರ್ಥಿಗಳು ರಕ್ತಹೀನತೆಯಿಂದ ಬಳಲುತ್ತಿರುವ ಕುರಿತು ಆರೋಗ್ಯ ಇಲಾಖೆಯ ವರದಿ ಆಧರಿಸಿ ಸರ್ಕಾರ ಪ್ರಾರಂಭಿಸಿರುವ ಈ ಯೋಜನೆಯ ಲಾಭ ಪ್ರತಿ ಯುವ ಶಕ್ತಿಗೆ ಮುಟ್ಟಬೇಕಿದೆ. ಜಿಲ್ಲಾದ್ಯಂತ ಇಂದಿನಿಂದ ಜಾರಿಯಾದ ಈ ಯೋಜನೆ ಬಗ್ಗೆ ಶಿಕ್ಷಕ ಸಮುದಾಯಕ್ಕೆ ನಿರ್ದೇಶನ ನೀಡಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ, ಎ.ಎಂ. ವಡಗೇರಿ ಮುಂತಾದವರು ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗೀತಾಂಜಲಿ ಮೆಣಸಿನಕಾಯಿ ನಿರೂಪಿಸಿದರು. ಎಚ್.ಬಿ. ಗುಡ್ಲಾನೂರ ವಂದಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.