ಸಿದ್ಧಾಂತ ಶಿಖಾಮಣಿ, ಭಗವದ್ಗೀತೆ ಅಪೂರ್ವ ಗ್ರಂಥ
ಕನ್ನಡಪ್ರಭ ವಾರ್ತೆ, ಗದಗ, ಜು. 19
ಸಿದ್ಧಾಂತ ಶಿಖಾಮಣಿ ಮತ್ತು ಶ್ರೀಮದ್ ಭಗವದ್ಗೀತೆಗಳು ಮನುಕುಲಕ್ಕೆ ದಿವ್ಯದೃಷ್ಟಿಯನ್ನು ಅನುಗ್ರಹಿಸುವ ಅಪೂರ್ವ ಗ್ರಂಥಗಳು ಎಂದು ಕಾಶಿಯ ಜ. ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಅವರು ಗುರುವಾರ ರಾತ್ರಿ ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಜ. ಪಂಚಾಚಾರ್ಯ ಸೇವಾ ಸಂಘದ ನೇತೃತ್ವದಲ್ಲಿ ಆಷಾಢ ಮಾಸದ ಗುರುಪೂರ್ಣಿಮೆಯ ನಿಮಿತ್ತ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪರಮಾತ್ಮನನ್ನು ನೋಡಲಿಕ್ಕೆ ದಿವ್ಯದೃಷ್ಟಿ ಅತ್ಯವಶ್ಯಕ. ಆ ದೃಷ್ಟಿಯನ್ನು ಅನುಗ್ರಹಿಸುವ ದಿವ್ಯಗ್ರಂಥಗಳೇ ಈ ಸಿದ್ಧಾಂತ ಶಿಖಾಮಣಿ ಹಾಗೂ ಭಗವದ್ಗೀತೆಗಳು. ಜಗತ್ತಿನ ಜನರಿಗೆ ದಿವ್ಯಜ್ಞಾನವನ್ನು ಕೊಡುವುದಾಗಿ ಶಿವನು ತನ್ನ ಸದ್ಯೋಜಾತ, ವಾಮದೇವ, ಅಘೋರ ಮತ್ತು ತತ್ಪುರುಷ ಮುಖಗಳಿಂದ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದಗಳನ್ನು ಸೃಷ್ಟಿ ಮಾಡಿದನು. ಅದರಂತೆ 28 ಶಿವಾಗಮಗಳನ್ನು ಉಪದೇಶಿಸಿದ್ದಾನೆ. 4 ವೇದಗಳ ಕೊನೆಯ ಭಾಗವಾದ ಉಪನಿಷತ್ತುಗಳನ್ನು ಆಧಾರವಾಗಿ ಇಟ್ಟುಕೊಂಡು ವ್ಯಾಸ ಮಹರ್ಷಿಯು ಶ್ರೀಮದ್ ಭಗವದ್ಗೀತೆ ರಚಿಸಿದ್ದಾನೆ. ಅದರಂತೆ 28 ಶಿವಾಗಮಗಳನ್ನು ಆಧಾರವಾಗಿ ಇಟ್ಟುಕೊಂಡು ಶಿವಯೋಗಿ ಶಿವಾಚಾರ್ಯರು ಈ ಸಿದ್ಧಾಂತ ಶಿಖಾಮಣಿ ರಚಿಸಿದ್ದಾರೆ. ಗೀತೆಯಲ್ಲಿ ಶ್ರೀಕೃಷ್ಣ-ಅರ್ಜುನ ಸಂವಾದವಿದೆ. ಸಿದ್ಧಾಂತ ಶಿಖಾಮಣಿಯಲ್ಲಿ ಶ್ರೀರೇಣುಕ, ಅಗಸ್ತಮಹರ್ಷಿಯರ ಸಂವಾದವಿದೆ. ಈ ಎರಡೂ ಗ್ರಂಥಗಳ ಮೂಲಗಳು ವೇದಾಗಮಗಳೇ ಆಗಿವೆ. ಆದ್ದರಿಂದ ಜಗತ್ತಿನ ಪ್ರತಿಯೊಬ್ಬ ಮಾನವರು ಈ ಗ್ರಂಥಗಳ ಪಾರಾಯಣ ಸ್ವಾಧ್ಯಾಯ ಮಾಡುವುದರ ಜತೆಗೆ ಅವುಗಳ ಮೇಲಿನ ಪ್ರವಚನಗಳನ್ನು ಆಲಿಸುವುದರಿಂದ ಪ್ರತಿಯೊಬ್ಬರೂ ಪರಮಾತ್ಮನನ್ನು ಕಾಣುವ ದಿವ್ಯದೃಷ್ಟಿಯನ್ನು ಪಡೆದುಕೊಳ್ಳಬಹುದು ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಯುವಪೀಳಿಗೆಯಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಸಲು ಆಧ್ಯಾತ್ಮ ಪ್ರವಚನ ಹಾಗೂ ಸತ್ಸಂಗ ಸಹಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹಣದ ಪ್ರಭಾವ ಮತ್ತು ಮತ್ತು ಜಾತಿ ವೈಷ್ಯಮದ ಕಾರಣ ಯುವಪೀಳಿಗೆ ಸಂಸ್ಕೃತಿಯುತ ಸಮಾಜದಿಂದ ದೂರವಾಗುತ್ತಿದ್ದು, 12 ವರ್ಷಗಳಿಂದ ನಿರಂತರವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ 1 ವಾರಗಳ ಕಾಲ ಆಧ್ಯಾತ್ಮಕ ಪ್ರವಚನ ನೀಡಿ ಸರ್ವರಿಗೆ ಮಾರ್ಗದರ್ಶನ ದೊರಕಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಜ. ಸಿದ್ಧಲಿಂಗ ಶಿವಾಚಾರ್ಯಕು ಆಶೀರ್ವಚನ ನೀಡಿ, ಧರ್ಮಗ್ರಂಥಗಳ ಅಧ್ಯಯನ ಮತ್ತು ಶ್ರವಣದಿಂದ ಭೋಗ ಮೋಕ್ಷಗಳನ್ನು ಪಡೆದುಕೊಳ್ಳಬಹುದು ಎಂದರು.
ಮಂಜುನಾಥ ಅಬ್ಬಿಗೇರಿ, ರಾಜಶೇಖರ ಶಿರೂರ, ವಿ.ಆರ್. ಮಾಳೆಕೊಪ್ಪಮಠ, ಬಸವರಾಜ ಶಾಬಾದಿಮಠ, ಸೋಮಣ್ಣ ಮಲ್ಲಾಡದ, ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ, ಸುರೇಶ ಅಬ್ಬಿಗೇರಿ, ಬಾಬಣ್ಣ ಶಾಬಾದಿಮಠ, ಬಸವಣ್ಣೆಪ್ಪ ಪುರದ ಮುಂತಾದವರು ಇದ್ದರು. ಇದೇ ಸಂದರ್ಭದಲ್ಲಿ ಹಲವು ಮಹನಿಯರಿಗೆ ಗುರುರಕ್ಷೆ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

