ಇಂದು ಗುರುಪೌರ್ಣಿಮೆ ಮಹೋತ್ಸವ
ಗದಗ: ನಗರದ ಹಳೇ ಸರಾಫ ಬಜಾರನಲ್ಲಿನ ಜಗದಂಬಾ ದೇವಸ್ಥಾನದ ಆವರಣದಲ್ಲಿ ಜು. 22 ರಂದು ಎಸ್.ಎಸ್.ಕೆ. ನವನಾಥಗುರುಭಕ್ತ ಮಂಡಳಿ ಗದಗ ವತಿಯಿಂದ ಗುರುಪೌರ್ಣಿಮೆಯ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 6 ಗಂಟೆಗೆ ಜಗದಂಬಾ ದೇವಿಗೆ ವಿಶೇಷ ಅಭಿಷೇಕ, ಸರ್ವಾಲಂಕಾರ ವಿಶೇಷ ಪೂಜೆ, ಬೆಳಗ್ಗೆ 9 ಗಂಟೆಗೆ ನವನಾಥ ಗುರುಗಳ ಅಭಿಷೇಕ ಹಾಗೂ ಅಲಂಕಾರ ವಿಶೇಷ ಪೂಜಾ ಕಾರ್ಯಕ್ರಮ, ಬೆಳಗ್ಗೆ 11 ಗಂಟೆಗೆ ಸತ್ಯನಾರಾಯಣ ಪೂಜೆ, 12 ಗಂಟೆಗೆ ಅನ್ನಸಂತರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾತ್ರಿ 8 ಗಂಟೆಗೆ ನಗರದ ಗಂಗಾಪುರ ಪೇಟೆಯ ದುರ್ಗಾದೇವಿ ಭಜನಾ ಮಂಡಳಿಯವರಿಂದ ಹಾಗೂ 12.30 ಗಂಟೆಗೆ ಭಜನಾ ಕಾರ್ಯಕ್ರಮ ಜರುಗುವುದು. ನಂತರ ಮಹಾಮಂಗಳಾರತಿ ಜರುಗಲಿದ್ದು, ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಂಡಳಿಯ ಅಧ್ಯಕ್ಷ ಪರಶುರಾಮಸಾ ಬದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಕ್ಷ್ಮೇಶ್ವರ: ಮನೆಕೀಲಿ ಮುರಿದು ಕಳ್ಳತನ
ಲಕ್ಷ್ಮೇಶ್ವರ: ಪಟ್ಟಣದ ಪೇಠೆ ಬಣದ ಬಸಾಪುರ ಓಣಿಯ ಶಿವಶಂಕರಪ್ಪ ಯಳಮಲಿ ಇವರಿಗೆ ಸೇರಿದ ಮನೆಯಲ್ಲಿ ಶುಕ್ರವಾರ ರಾತ್ರಿ ಮನೆಯ ಕೀಲಿ ಮುರಿದು ಕಳ್ಳತನ ಮಾಡಿದ್ದಾರೆ. ಸುಮಾರು ರು. 20 ಸಾವಿರ ನಗದು, 8 ತೊಲೆ ಬಂಗಾರ ಮತ್ತು ಅರ್ಧ ಕೆಜಿ ಬೆಳ್ಳಿಯ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದು, ಈ ಘಟನೆಯು ಶನಿವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಮನೆಯ ಮಾಲೀಕರು ಊರಿಗೆ ಹೋಗಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು ಶುಕ್ರವಾರ ರಾತ್ರಿ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಸದಾ ಜನರು ಸಂಚರಿಸುವ ಮುಖ್ಯ ರಸ್ತೆಯಲ್ಲಿಯೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಪಟ್ಟಣದಲ್ಲಿ ಕಳ್ಳತನದ ಪ್ರಕರಣಗಳು 10-15 ದಿನಗಳಲ್ಲಿ ಹೆಚ್ಚಾಗುತ್ತಿರುವುದು ನಾಗರಿಕರಲ್ಲಿ ಕಳವಳ ಉಂಟುಮಾಡಿದೆ. ಘಟನಾ ಸ್ಥಳಕ್ಕೆ ಸಿಪಿಐ ಪಿ.ಪಿ. ನಾಯ್ಡು ಭೇಟಿ ನೀಡಿ ಪರಿಶೀಲನೆ ಮಾಡಿದರು. ಸ್ಥಳೀಯ ಪಿಎಸ್ಐ ಶಿವಕುಮಾರ ಮುಚ್ಚಂಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಆಐ ನಾಯ್ಡು ಸಾರ್ವಜನಿಕರು 2-3 ದಿನಗಳಿಗಿಂತ ಹೆಚ್ಚು ದಿನ ಊರಿಗೆ ಹೋಗುವ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಹೋಗಬೇಕು. ಹೀಗಾದಾಗ ನಾವುಗಳು ಆ ಬಗ್ಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಕ್ಕಳು ಸಂವಿಧಾನದ ಜ್ಞಾನ ಹೊಂದಲಿ: ಶಾಸಕ ದೊಡ್ಡಮನಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 21
ಮಕ್ಕಳು ನಮ್ಮ ಸಂವಿಧಾನದ ಬಗ್ಗೆ ತಿಳಿವಳಿಕೆ ಹೊಂದುವುದು ಅವಶ್ಯಕವಾಗಿದೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಶನಿವಾರ ಸಮೀಪದ ಗೊಜನೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ ಉದ್ಘಾಟನೆ ಮತ್ತು ನೂತನ ಶಾಲಾ ಕೊಠಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಭಾರತವು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ನಮ್ಮ ಹಕ್ಕು ಮತ್ತು ಕರ್ತವ್ಯ, ಸಂವಿಧಾನ, ಸಂಸತ್ತು, ವಿಧಾನಸಭೆ, ವಿಧಾನ ಪರಿಷತ್ತು ಇವುಗಳ ಕಾರ್ಯಚಟುವಟಿಕೆ, ದೇಶದ ಕಾನೂನು ಹಾಗೂ ಇನ್ನಿತರ ಕಾರ್ಯಚಟುವಟಿಕೆ ಬಗ್ಗೆ ತಿಳಿವಳಿಕೆ ನೀಡುವುದರ ಜತೆಗೆ ಮಕ್ಕಳಲ್ಲಿ ನಾಯಕತ್ವ ಮತ್ತು ಸ್ವಾವಲಂಬನೆ ಬದುಕಿನ ಗುಣಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು.
ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಹರಳಕ್ಕ ಕರೆಣ್ಣವರ ವಹಿಸಿದ್ದರು. ಅತಿಥಿಗಳಾಗಿ ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಪಿ. ಪಾಟೀಲ, ಉಪಾಧ್ಯಕ್ಷೆ ದೇವಕ್ಕ ಯಳವತ್ತಿ, ನಾಗಪ್ಪ ವಡಕಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಡಿ.ಪಾಟೀಲ, ವೀರಣ್ಣ ಅಂಗಡಿ, ಪರಮೇಶ ಲಮಾಣಿ, ಶಂಕ್ರಗೌಡ ದೊಡ್ಡಗೌಡರ ಮತ್ತಿತರರು ಹಾಜರಿದ್ದರು. ಎಂ.ಡಿ. ತಳ್ಳಳ್ಳಿ ನಿರೂಪಿಸಿದರು. ಎಸ್.ಎಸ್. ಯಾಳಗಿ ಸ್ವಾಗತಿಸಿದರು. ರವಿ ಬೆಂಚಳ್ಳಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

