ಎಚ್ಕೆ ಪಾಟೀಲರೇ, ನಿಮ್ಮ ಬುದ್ಧಿವಾದ ನಮಗೆ ಬೇಡ: ಕಳಕಪ್ಪ ತಿರುಗೇಟು
ಗದಗ: ಎಚ್ಕೆ ಪಾಟೀಲರೇ, ನಿಮ್ಮ ಬುದ್ಧಿವಾದ ನಮಗೆ ಬೇಡ. ಹಿಂದಿನ ಸರ್ಕಾರದ ಅವಧಿಯಲ್ಲಿ ಆಡಳಿತ ಕುಸಿದು ಹೋಗಿತ್ತು. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದು ನೀವು ಕೆಡಿಪಿ ಸಭೆಯಲ್ಲಿ ಹೇಳಿದ್ದೀರಿ...ನೀವು ಅಧಿಕಾರಕ್ಕೆ ಬಂದ 3 ತಿಂಗಳಲ್ಲಿ ಏನಾಗಿದೆ ಎನ್ನುವುದನ್ನು ಮೊದಲು ಗಮನಿಸಿ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಎಚ್.ಕೆ. ಪಾಟೀಲ್ರಿಗೆ ತಿರುಗೇಟು ನೀಡಿದರು.
ಸೋಮವಾರ ಸಂಜೆ ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ನೂತನ ಜಿಲ್ಲಾಧ್ಯಕ್ಷರ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು. ನಾವು ಗದುಗಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು, ಪಶು ವೈದ್ಯಕೀಯ ಕಾಲೇಜು ಸ್ಥಾಪನೆ, ಅವಳಿ ನಗರದ ಶಾಶ್ವತ ಕುಡಿವ ನೀರಿಗಾಗಿ 2ನೇ ಹಂತದ ಕುಡಿವ ನೀರು ಯೋಜನೆಗೆ ರು. 90 ಕೋಟಿ...ಹೀಗೆ ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಸಾಲು ಸಾಲು ಇವೆ. ಇವೆಲ್ಲ ನಿಮಗೆ ಕಾಣಲಿಲ್ಲವೇ ?
ಹೆರಿಗೆ ಆಸ್ಪತ್ರೆಯ ಮೇಲಾದ ಗಲಾಟೆಯ ನಂತರ ತಪ್ಪಿತಸ್ಥರ ಮೇಲೆ ನಿಮ್ಮ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ. ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಕಾರ್ಯಕರ್ತರು, ಜೆಡಿಎಸ್ ಮತ್ತು ಬಿಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದನ್ನು ಮರೆತಿದ್ದೀರಾ ? ಇದೆಲ್ಲಕ್ಕಿಂತ ಮುಖ್ಯವಾಗಿ ಗದಗ ನಗರದಲ್ಲಿ ದಿ. ಕೆ.ಎಚ್. ಪಾಟೀಲರ ಮೂರ್ತಿ ಸ್ಥಾಪನೆ ಮಾಡಿದ್ದು ನಮ್ಮ ಸರ್ಕಾರ ಎನ್ನುವುದನ್ನ ಪ್ರತಿಯೊಬ್ಬರು ಮರೆಯಬಾರದು ಎಂದರು.
ಮೊದಲು ನಿಮ್ಮ ಶಾಸಕರಿಗೆ ಹೇಳಿ: ಬಂದ ಸಾರ್ವಜನಿಕರಿಗೆ ಮೊದಲು ಸೌಜನ್ಯದಿಂದ ನಿಮ್ಮ ಮುಂದೆ ಇರುವ ಕುರ್ಚಿಗಳಲ್ಲಿ ಕೂಡ್ರಿಸಿ ಮಾತನಾಡಿ ಎಂದು ನೀವು ಅಧಿಕಾರಿಗಳಿಗೆ ಸೂಚನೆ ನೀಡಿದ್ದೀರಿ. ಇದನ್ನು ನಾನು ಸ್ವಾಗತಿಸುತ್ತೇನೆ. ಆದ್ರೆ ಇದೇ ವಿಷಯವನ್ನು ನಿಮ್ಮ ಪಕ್ಷದ ಇನ್ನುಳಿದ ಶಾಸಕರಿಗೆ ಮೊದಲು ಹೇಳಿ. ಅವರು ಮೊದಲು ಜನರನ್ನು ಕುಳಿತು ಮಾತನಾಡಿಸುವ ರೂಢಿ ಬೆಳೆಸಿಕೊಳ್ಳಲಿ. ಅಧಿಕಾರಿಗಳು ಸಹಜವಾಗಿಯೇ ಅದನ್ನು ಅನುಸರಿಸುತ್ತಾರೆ. ಆಡಳಿತ ವ್ಯವಸ್ಥೆ ಕುಸಿದಿರುವ ಬಗ್ಗೆ ಹೇಳುವ ನೀವು ನಿಮ್ಮ 3 ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಏನೆಲ್ಲಾ ನಡೆದಿವೆ ಅದನ್ನು ಅವಲೋಕಿಸಿ ಮಾತನಾಡಿ ಎಂದರು.
ವಸೂಲಿಗೆ ನಿಂತಿದ್ದಾರೆ: ನಿಮ್ಮ ಪಕ್ಷದ ಹಲವಾರು ಮುಖಂಡರು ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ವಸೂಲಿಗೆ ನಿಂತಿದ್ದಾರೆ. ಇದೆಲ್ಲ ನಿಮ್ಮ ಗಮನಕ್ಕೆ ಬಂದಿಲ್ಲವೇ ? ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಇನ್ನುಳಿದ ವಿಷಯಗಳಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ನೋಡಿ ಇನ್ನೊಬ್ಬರನ್ನು ಟೀಕಿಸಿ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ವೇಳೆಯಲ್ಲಿ ಕೇವಲ ನಾವು ಅಭಿವೃದ್ಧಿ ಕಾರ್ಯಗಳ ಮೂಲಕವೇ ಮಾತನಾಡಿದ್ದೇವೆ ಹಾಗೆಯೇ ನಿಮ್ಮಿಂದಲೂ ಗದಗ ಜಿಲ್ಲೆಗೆ ಹೊಸ ಹೊಸ ಯೋಜನೆಗಳು ಬರಲಿ ಎಂದು ಛೇಡಿಸಿದರು.
ಒಂದೇ ವೇದಿಕೆಯಲ್ಲಿ ಚರ್ಚೆಯಾಗಲಿ: 5 ವರ್ಷದಲ್ಲಿ ಬಿಜೆಪಿ ಸರ್ಕಾರ ಗದಗ ಜಿಲ್ಲೆಗೆ ಏನು ಕೊಡುಗೆ ನೀಡಿದೆ, ನಿಮ್ಮ ಪಕ್ಷ ಏನು ಕೊಡುಗೆ ನೀಡಿದೆ ಎನ್ನುವ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆಯಾಗಲಿ. ಹಿಂದಿನ ಸರ್ಕಾರದಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಸಮಗ್ರ ಮತ್ತು ಶಾಶ್ವತ ಯೋಜನೆಗಳನ್ನು ಉಳಿಸುವಲ್ಲಿ ವಿಫಲರಾಗಿರುವ ನೀವು ಬಿಜೆಪಿಯವರನ್ನು ಯಾವ ಮಾನದಂಡದ ಮೇಲೆ ಟೀಕಿಸುತ್ತೀರಿ ಎಂದು ಲೇವಡಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

