ಅಂಬ್ಯುಲೆನ್ಸ್ಗಳೇ ಐಸಿಯುನಲ್ಲಿ..!
ಕನ್ನಡಪ್ರಭ ವಾರ್ತೆ, ಗದಗ, ಜು. 23
ಜಿಲ್ಲೆಯಲ್ಲಿರುವ 108 ಆರೋಗ್ಯ ಕವಚ ವಾಹನಗಳೇ ರೋಗಕ್ಕೆ ಒಳಗಾಗಿ ಗ್ಯಾರೇಜ್ ಸೇರಿವೆ.
ಇದರಿಂದ ಗ್ರಾಮೀಣ ಪ್ರದೇಶದಲ್ಲಿನ ಬಡ ಜನರಿಗೆ ಸಾಕಷ್ಟು ಸಮಸ್ಯೆಯಾಗಿದ್ದು, ಸರ್ಕಾರ ಮತ್ತು ಯೋಜನೆ ಅನುಷ್ಠಾನಗೊಳಿಸುತ್ತಿರುವ ಸಂಸ್ಥೆಗಳ ನಿರ್ಲಕ್ಷ್ಯ ಇಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿದೆ.
ಯಾರೋ ಮಾಡಿದ ತಪ್ಪಿಗೆ ಜಿಲ್ಲೆಯ ಬಡವರು ತೊಂದರೆ ಅನುಭವಿಸುವಂತಾಗಿದೆ. ಮೊನ್ನೆಯಷ್ಟೇ ಇದೇ 108 ವಾಹನದಲ್ಲಿ ನಿಯಮ ಬಾಹಿರವಾಗಿ ಆಕ್ಸಿಜನ್ ಸಿಲೆಂಡರ್ಗಳನ್ನು ಹುಬ್ಬಳ್ಳಿಯಿಂದ ಸಾಗಿಸುವ ವೇಳೆಯಲ್ಲಿ ಸಿಕ್ಕು ವರದಿಯೂ ಆಗಿತ್ತು. ಆ ತಪ್ಪನ್ನೇ ಸರಿಪಡಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಅಷ್ಟರಲ್ಲೇ ಈ ವಾಹನಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಸಮಸ್ಯೆ ಶುರುವಾಗಿದೆ.
4 ವಾಹನ ಕೆಟ್ಟಿವೆ: ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿನ ವಿವಿಧ ಆಸ್ಪತ್ರೆಗಳು ಸೇರಿದಂತೆ ಒಟ್ಟು 10 ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಕಳೆದ ಒಂದು ತಿಂಗಳಿಂದ 4 ವಾಹನಗಳು ಕೆಟ್ಟು ನಿಂತಿವೆ. ಅದರಲ್ಲಿಯೂ ಗದಗ ನಗರದ 108 ವಾಹನದ ಸ್ಟೇರಿಂಗ್ ರಾಡ್ ಕಟ್ಟಾಗಿ 12 ದಿನಗಳೇ ಕಳೆದಿದೆ. ಇದೇ ರೀತಿ ವಿವಿಧ ಸಮಸ್ಯೆಗಳಿಂದ ಜಿಲ್ಲೆಯ ನರಗುಂದ, ಬೆಳ್ಳಟ್ಟಿ ಹಾಗೂ ರೋಣದ ವಾಹನಗಳೂ ಕೆಟ್ಟಿವೆ. ಇದರಿಂದ ಬಡವರಿಗೆ ಹಾಗೂ ಅಪಾಯದಲ್ಲಿರುವವರಿಗೆ ತುರ್ತು ಸೌಲಭ್ಯ ಸಿಗುತ್ತಿಲ್ಲ. ಅಪಘಾತದಂತಹ ಘಟನೆಗಳು ನಡೆದರೆ ತಮ್ಮ ವ್ಯಾಪ್ತಿಯ ಹೊರಗಿನ ವಾಹನವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ವ್ಯವಸ್ಥೆಯಲ್ಲಿ ಲೋಪ: ಪದೇಪದೇ ಆರೋಗ್ಯ ಕವಚ ವಾಹನಗಳು ತೊಂದರೆಗೊಳಗಾಗುತ್ತಿರುವುದಕ್ಕೆ ಅಲ್ಲಿನ ನಿರ್ವಹಣಾ ವ್ಯವಸ್ಥೆಯಲ್ಲಿನ ಲೋಪವೇ ಕಾರಣ ಎನ್ನುವುದು ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಅಭಿಪ್ರಾಯವಾಗಿದೆ. ಅಂಬ್ಯುಲೆನ್ಸ್ ಸೇವೆಯನ್ನು ಜಿವಿಕೆ, ಇಎಂಆರ್ಐ ಕಂಪನಿಯವರು ನಿರ್ವಹಣೆ ಮಾಡುತ್ತಿದ್ದು, ಸಂಸ್ಥೆಯಲ್ಲಿ ಕೆಲಸ ಮಾಡುವ ಕೆಲ ಅಧಿಕಾರಿಗಳು ವಿಫಲರಾಗಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಇನ್ನು ಕೆಲವರು ಸಣ್ಣ ಸಿಬ್ಬಂದಿಯನ್ನು ಸಹ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅವರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ಕೇಳಿ ಬರುತ್ತಿದೆ.
ಹೊಸ ವಾಹನದ ಅವಶ್ಯಕತೆ: ಗದಗ ಜಿಲ್ಲೆಗೆ ನೀಡಿರುವ ಎಲ್ಲ ವಾಹನಗಳೂ ಈಗಾಗಲೇ ಸುಮಾರು 2 ಲಕ್ಷಕ್ಕೂ ಅಧಿಕ ಕಿ.ಮೀ. ಓಡಿವೆ. ಸರ್ಕಾರದ ನಿಯಮದ ಪ್ರಕಾರವೇ ಅಂಬ್ಯುಲೆನ್ಸ್ಗಳು ಇಷ್ಟೊಂದು ಕಿ.ಮೀ. ಸಂಚರಿಸಿದ ನಂತರ ಅವುಗಳನ್ನು ತೆಗೆದು ಹೊಸ ವಾಹನಗಳನ್ನು ಹಾಕಬೇಕು. ಆದರೆ, ಇದಕ್ಕೆ ಸರ್ಕಾರವಾಗಲಿ, ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿರುವ ಸಂಸ್ಥೆಯ ಅಧಿಕಾರಿಗಳಾಗಲಿ ಮುಂದಾಗದೇ ಇರುವುದು ಸಮಸ್ಯೆಯನ್ನು ಮತ್ತಷ್ಟು ಇಂಬುಗೊಳಿಸಿದೆ. ಸಂಚರಿಸಿರುವ ವಾಹನಗಳು ಹಲವಾರು ರೀತಿಯ ದುರಸ್ತಿಗೆ ಬಂದಿದ್ದು, ಈಚೆಗೆ ಗದಗ ತಾಲೂಕಿನ ಗ್ರಾಮವೊಂದರಿಂದ ವೃದ್ಧನೋರ್ವನನ್ನು ಚಿಕಿತ್ಸೆಗಾಗಿ ಸಾಗಿಸುತ್ತಿರುವ ಮಾರ್ಗ ಮಧ್ಯೆಯೇ ತೊಂದರೆ ಉಂಟಾದ ಘಟನೆಯೂ ನಡೆದಿದೆ.
ಸಾರ್ವಜನಿಕರಿಗೆ ಅನುಕೂಲಕ್ಕಾಗಿ ರೂಪಿಸಿರುವ ಯೋಜನೆ ಕಳೆದ ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದು, ಇದರಿಂದ ಹಲವಾರು ರೀತಿಯ ಸಮಸ್ಯೆ ಸೃಷ್ಟಿಯಾಗುತ್ತಿವೆ. ಒಂದೆಡೆ ಇರುವ ವಾಹನವನ್ನು, ಮತ್ತೊಂದೆಡೆ ತುರ್ತು ಸಂದರ್ಭದಲ್ಲಿ ಕಳುಹಿಸಲು ಸಾಧ್ಯವಾಗದೇ ತೊಂದರೆಯಲ್ಲಿರುವವರಿಗೆ ಈ ಸಮಸ್ಯೆ ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು.
ಚಂದ್ರಕಾಂತ ಚವ್ಹಾಣ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

