ಸಂಸ್ಕಾರಕ್ಕೆ ಜಾಲಿಕಂಟಿ ಅಡ್ಡಿ
ಮುಂಡರಗಿ: ಪುರಸಭೆ ವ್ಯಾಪ್ತಿಯ ಇಲ್ಲಿನ ಗದಗ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಜಾಲಿಮುಳ್ಳಿನ ಕಂಟಿ, ಗಿಡಗಳು, ವಿವಿಧ ಕಸದ ಗಿಡಗಳು ಬೆಳೆದಿದ್ದು, ಶವ ಸಂಸ್ಕಾರಕ್ಕೆ ರುದ್ರಭೂಮಿ (ಸ್ಮಶಾನ) ಯೊಳಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪುರಸಭೆ ಅಧಿಕಾರಿಗಳು ಇದರ ಸ್ವಚ್ಛತೆ ಕುರಿತು ನಿರ್ಲಕ್ಷ್ಯವಹಿಸಿದ್ದು, ಅಂತ್ಯ ಸಂಸ್ಕಾರಕ್ಕೆ ಬರುವ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಈ ಸ್ಮಶಾನವನ್ನು ಒಮ್ಮೆಯೂ ಸಂಪೂರ್ಣವಾಗಿ ಸ್ವಚ್ಛಗೊಳಿಸಿಲ್ಲ. ಈ ಹಿಂದಿನ ಆಡಳಿತ ಮಂಡಳಿ ಅಧಿಕಾರಾವಧಿಯಲ್ಲಿ ಅನ್ನಪೂರ್ಣಾ ರಜನೀಕಾಂತ ದೇಸಾಯಿ ಅಧ್ಯಕ್ಷರಾಗಿದ್ದಾಗ ಒಂದೆರೆಡು ಬಾರಿ ಹಾಗೂ ಪಟ್ಟಣದಲ್ಲಿರುವ ಗುತ್ತಿಗೆದಾರರು ಮತ್ತು ಬಾರ್ಬೆಂಡರ್ ಸಂಘಟನೆಯ ಕಾರ್ಯಕರ್ತರು ಒಂದೆರೆಡು ಬಾರಿ ಸ್ವಚ್ಛಗೊಳಿಸಿದ್ದಾರೆ.
ಪಟ್ಟಣದಲ್ಲಿ ಯಾರಾದರೂ ಗಣ್ಯವ್ಯಕ್ತಿಗಳು ಅಥವಾ ಜನಪ್ರತಿನಿಧಿಗಳು ನಿಧನರಾದಾಗೊಮ್ಮೆ ಸ್ವಲ್ಪಮಟ್ಟಿಗೆ ಜನ ಬಂದು ನಿಲ್ಲಲು ಬೇಕಾದಷ್ಟು ಜಾಗೆ ಮಾತ್ರ ಸ್ವಚ್ಛಗೊಳಿಸಿ, ಇನ್ನುಳಿದದ್ದನ್ನು ಹಾಗೆಯೇ ಬಿಟ್ಟಿರುವುದರಿಂದ ಅವ್ಯವಸ್ಥೆ ಹೆಚ್ಚಿದೆ.
ಶೌಚಾಲಯವಾಗಿ ಮಾರ್ಪಾಡು: ಈ ರುದ್ರಭೂಮಿ ಇದೀಗ ಪುರುಷರ ಶೌಚಾಲಯವಾಗಿ ಮಾರ್ಪಟ್ಟಿದೆ. ಪ್ರತಿದಿನ ಸಾರ್ವಜನಿಕರು ಇಲ್ಲಿಯೇ ಶೌಚಕ್ಕಾಗಿ ಬರುತ್ತಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸ್ಮಶಾನದ ತುಂಬ ಎಲ್ಲೆಂದರಲ್ಲಿ ಮೃತಪಟ್ಟವರ ಹಾಸಿಗೆ, ಬಟ್ಟೆಗಳು, ವಿಭೂತಿ, ಊದಿನಕಡ್ಡಿ, ಪ್ಲಾಸ್ಟಿಕ್ ಚೀಲಗಳು ಬಿದ್ದು ಅಲ್ಲಿ ನಿಲ್ಲಲು ಆಗದಷ್ಟು ಗಬ್ಬು ವಾಸನೆ ಬೀರುತ್ತಿದೆ. ಇಲ್ಲಿದ್ದ ನೀರಿನ ಮೋಟರ್ ಕೆಟ್ಟಿದೆ.
ಸ್ವ-ಖರ್ಚಿನಿಂದಲೇ ಸ್ವಚ್ಛತೆ: ಶವ ಸಂಸ್ಕಾರಕ್ಕೆ ರುದ್ರಭೂಮಿಗೆ ಬಂದುಹೋಗುವ ಸಾರ್ವಜನಿಕರಿಗೆ ಆಗುವ ತೊಂದರೆ ಅರಿತು ಇಲ್ಲಿನ ಪ್ರಥಮದರ್ಜೆ ಗುತ್ತಿಗೆದಾರ ಹಾಗೂ ಸಾಮಾಜಿಕ ಕಳಕಳಿ ಉಳ್ಳವರಾಗಿರುವ ಆನಂದಗೌಡ ಪಾಟೀಲ ಇದೀಗ ತಮ್ಮ ಸ್ವಂತ ಖರ್ಚಿನಿಂದ ಜೆಸಿಬಿ ಮೂಲಕ ಇದನ್ನು ಸ್ವಚ್ಛಗೊಳಿಸಲು ಮುಂದಾಗಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಸ್ವಚ್ಛ ಮಾಡಿಸಿದ್ದಾರೆ. ಈ ಕುರಿತು ಅವರನ್ನು ಮಾತನಾಡಿಸಿದಾಗ, ಇದು ಇಡೀ ಪಟ್ಟಣಕ್ಕೆ ಸಂಬಂಧಿಸಿದ್ದು, ಆದ್ದರಿಂದ ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸುವ ಉದ್ದೇಶದಿಂದ ಸ್ವಚ್ಛಗೊಳಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಲ್ಲೊಂದು ಉದ್ಯಾನವನ ನಿರ್ಮಿಸಿ, ಸುಂದರವಾದ ಗಿಡಮರಗಳನ್ನು ಬೆಳೆಸುವ ಯೋಜನೆ ಹಾಕಿಕೊಂಡಿದ್ದಾಗಿ ತಿಳಿಸಿದರು.
ಸ್ಮಶಾನಕ್ಕೆ ಜಾಗೆ ಕೊಡುವುದು ಮಾತ್ರ ಕಂದಾಯ ಇಲಾಖೆ ಜವಾಬ್ದಾರಿ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛಗೊಳಿಸುವ ಜವಾಬ್ದಾರಿ ಇರುತ್ತದೆ. ಪಟ್ಟಣಗಳಲ್ಲಿ ಪುರಸಭೆಯವರು ಸ್ವಚ್ಛಗೊಳಿಸುವ ಜವಾಬ್ದಾರಿ ಹೊಂದಿರುತ್ತಾರೆ.
- ಎಸ್.ಆರ್. ಶಿರಕೋಳ
ತಹಸೀಲ್ದಾರ್
ಸ್ಮಶಾನವನ್ನು ಟೆಂಡರ್ಮೂಲಕ ಸ್ವಚ್ಛಗೊಳಿಸಬೇಕಾಗಿದ್ದು, ಅದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿಯೇ ಸ್ಮಶಾನದ ಸ್ವಚ್ಛತೆ ಕೆಲಸ ಪ್ರಾರಂಭವಾಗಲಿದೆ.
- ಆರ್.ಎಂ. ಪಾಟೀಲ
ಪುರಸಭೆಯ ಮುಖ್ಯಾಧಿಕಾರಿ
ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

