ಗದಗ

ಸಸಿ ನೆಡದೆ ರು. 8.85 ಲಕ್ಷ ಖರ್ಚು!

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 24
ಗ್ರಾಮದಲ್ಲಿ ಎಲ್ಲಿಯೂ ಸಸಿ ನೆಡದೇ ರು. 8.85 ಲಕ್ಷ ಖರ್ಚು ಹಾಕಲಾಗಿದ್ದು, ಇದಕ್ಕೆ ಸಮರ್ಪಕ ಕಾರಣ ನೀಡುವಂತೆ ಗ್ರಾಮಸ್ಥರು ನೋಡಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಜರುಗಿದ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಜರುಗಿದೆ.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಮಾತನಾಡಿ, ಕೋಟುಮಚಗಿ ಗ್ರಾಮದಲ್ಲಿ ಸಸಿ ನೆಡಲು ಜಿಪಂನಿಂದ ರು. 8.85 ಲಕ್ಷ ಖರ್ಚು ಹಾಕಲಾಗಿದೆ. ವಾಸ್ತವವಾಗಿ ಗ್ರಾಮದಲ್ಲಿ ಯಾವುದೇ ರೀತಿಯಲ್ಲಿ ಅರಣ್ಯ ಇಲಾಖೆಯಿಂದ ಸಸಿಗಳನ್ನು ಇಲ್ಲಿಯವರೆಗೂ ನೆಡೆಲಾಗಿಲ್ಲ. ಹಾಗೂ ಗ್ರಾಮದಲ್ಲಿ ಚಿಗರೆ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ ಎಂಬುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುವಂತೆ ನೂಡಲ್ ಅಧಿಕಾರಿ ಡಾ. ವಿ.ಜಿ. ಬಂಡಿ ಅವರನ್ನು ಒತ್ತಾಯಸಿದರು. ಆದರೆ, ಸಭೆಗೆ ಅರಣ್ಯ ಇಲಾಖೆಯ ಅಧಿಕಾರಿಯು ಬಾರದೇ ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿ ಮಾತ್ರ ಬಂದಿದ್ದರು. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಯವರನ್ನು ಪ್ರಶ್ನಿಸಿದರು. ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು ಸರಿಯಾದ ವೇಳೆಗೆ ಬರುತ್ತಿಲ್ಲ. ಹಾಗೂ ಶಿಕ್ಷಕರ ಶಿಕ್ಷಕರ ನಡುವೆ ನಿತ್ಯ ಜಗಳವಾಡುತ್ತಿರುವ ಕುರಿತು ಪ್ರಕರಣಗಳು ಕಂಡುಬರುತ್ತಿದ್ದು, ಈ ಕುರಿತು 2 ವರ್ಷಗಳ ಹಿಂದೆಯೇ ಮನವಿ ಸಲ್ಲಿಸಲಾಗಿದೆ. ಈ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಕಮ್ಮಾರ ಅವರನ್ನು ಗ್ರಾಮಸ್ಥರು ಕೇಳಿದರು.
ಗ್ರಾಪಂ ಸದಸ್ಯ ಪ್ರಕಾಶ ಕುಲಕರ್ಣಿ ಮಾತನಾಡಿ, ಪಡಿತರ ಫೋಟೊ ತೆಗೆಯುವ ಕಾರ್ಯವನ್ನು ಗ್ರಾಪಂಗೆ ವಹಿಸಿದ್ದು, ಇದರಿಂದ ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗುತ್ತಿದೆ. ಪಡಿತರ ಅರ್ಜಿ ಕಾರ್ಯವನ್ನು ಕಂದಾಯ ಇಲಾಖೆಗೆ, ಇಲ್ಲವೇ ಖಾಸಗಿ ಸಂಸ್ಥೆಯವರಿಗೆ ಒಪ್ಪಿಸುವಂತೆ ಸೂಚಿಸಿದರು. ಅಲ್ಲದೇ ಅನರ್ಹರಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪಡಿತರ ಅರ್ಜಿ ಹಾಕಲು ವಿದ್ಯುತ್ ಸಮಸ್ಯೆಯಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು. ನಂತರ ಮಾತನಾಡಿದ ಪಿಡಿಓ ಚಂದುಸ್ವಾಮಿ ದೊಡ್ಡಮನಿ, ನಾಳೆಯಿಂದಲೇ 1 ಜನರೇಟರ್ ಬಾಡಿಗೆ ಪಡೆದು ದಿನದ 24 ಗಂಟೆಗಳ ಕಾಲ ಪಡಿತರ ಅರ್ಜಿ ಹಾಕುವ ಪ್ರಕ್ರಿಯೆ ನಡೆಸಿ, ಜು. 30 ರೊಳಗೆ ಅರ್ಜಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾಪಂ ಸದಸ್ಯೆ ಲಲಿತಾ ಅಣ್ಣಿಗೇರಿ, ಗ್ರಾಪಂ ಉಪಾಧ್ಯಕ್ಷೆ ಶಾಂತವ್ವ ಹರ್ಲಾಪುರ, ಸದಸ್ಯ ಪಾಲಾಕ್ಷಯ್ಯ ಬಳಿಗೇರಮಠ, ಯಲ್ಲಪ್ಪ ಗೆಜ್ಜಿ, ಎಂ.ಆರ್. ಬೂದಿಹಾಳ, ಮುಡಿಯಪ್ಪ ಶಿಂಗ್ಟಾಲಕೇರಿ, ಮಹೇಶ ನೀರಲಗಿ, ಕಸ್ತೂರಬಾಯಿ ನೀರಲಗಿ, ಮಲ್ಲಪ್ಪ ಕಿತ್ತೂರ, ದೇವಪ್ಪ ಬಡಿಗೇರ, ಸಹಾಯಕ ಕೃಷಿ ಅಧಿಕಾರಿ ಎ.ಜಿ. ಪಲ್ಲೇದ, ಗ್ರಾಪಂ ಸಿಬ್ಬಂದಿ, ಶಿವಪ್ಪ ಗಂಗಪ್ಪನವರ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.