ಗದಗ

ಅಕ್ಷರ ದಾಸೋಹ ಖಾಸಗೀಕರಣ: ಧರಣಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 25
ರಾಜ್ಯದಲ್ಲಿ ಅಕ್ಷರ ದಾಸೋಹ ಯೋಜನೆ ಖಾಸಗೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಸರ್ಕಾರ ಇದನ್ನು ಕೂಡಲೇ ಕೈಬಿಡಬೇಕು ಎಂದು ಗುರುವಾರ ಜಿಲ್ಲಾ ಅಕ್ಷರ ದಾಸೋಹ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಾಂಕೇತಿಕ ಧರಣಿ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಮುಖಂಡ ವಿಠಲ ನಾಯಕ, ದೇಶದ ಅಭಿವೃದ್ಧಿಗೆ ಪೂರಕವಾಗಿ ಪ್ರತಿಯೊಂದು ಮಗು ಶಿಕ್ಷಣ ಪಡೆಯಬೇಕು. ಮಗು ಶಿಕ್ಷಣದತ್ತ ಆಕರ್ಷಿತವಾಗಲು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜ್ಯದ 54,793 ಶಾಲೆಗಳಲ್ಲಿ 90 ಸಾವಿರ ಮಹಿಳೆಯರು ಅಡುಗೆ ಮಾಡಿ ಜೀವನ ನಡೆಸುತ್ತಿದ್ದಾರೆ.
ಬೆಂಕಿಯ ಮುಂದೆ ಕೆಲಸ ಮಾಡುವ ಈ ಮಹಿಳೆಯರಿಗೆ ಯಾವುದೇ ರೀತಿಯ ಭದ್ರತೆ, ಕನಿಷ್ಠ ಕೂಲಿ ಇಲ್ಲದಿರುವುದು ವಿಷಾದನೀಯ. ಕೇಂದ್ರ ಮತ್ತು ರಾಜ್ಯ ಸರ್ಕಾರದಡಿ ಕೆಲಸ ಮಾಡುವ ಇವರನ್ನು ಸರ್ಕಾರ ಯೋಜನೆಯಡಿ ಆಯ್ಕೆ ಮಾಡಿ ಅವಕಾಶ ನೀಡಿದೆ. ಕೆಲಸ ಮಾಡಲು ಪ್ರಾರಂಭಿಸಿ 10 ವರ್ಷವಾದರೂ ತೀವ್ರ ಶೋಷಣೆ ಎದುರಿಸಬೇಕಾಗಿದೆ. ಒಬ್ಬರೇ ಇವರ ಮೇಲ್ವಿಚಾರಣೆ ಮಾಡದಿರುವುದರಿಂದ ಎಸ್‌ಡಿಎಂಸಿ ಶಾಲೆ ಮುಖ್ಯಸ್ಥರು, ಗ್ರಾಪಂ ಸದಸ್ಯರು, ಯೋಜನೆ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಎಲ್ಲರ ಪ್ರಶ್ನೆಗಳಿಗೂ ಉತ್ತರಿಸಬೇಕಾದ ಪರಿಸ್ಥಿತಿ ಇದೆ.
ಇದೆಲ್ಲದರ ಮಧ್ಯೆ ಈ ಯೋಜನೆಯನ್ನು ಖಾಸಗೀಕರಣ ಮಾಡುತ್ತಿರುವುದರಿಂದ ಸುಮಾರು 30 ಸಾವಿರ ಮಹಿಳೆಯರು ಇಲ್ಲಿವರೆಗೆ ಕೆಲಸ ಕಳೆದುಕೊಂಡಿದ್ದಾರೆ. ಇಸ್ಕಾನ್‌ನಂತಹ ಸಂಸ್ಥೆಗಳು ಇದರಿಂದ ಹೆಚ್ಚಿನ ಲಾಭ ಪಡೆಯುತ್ತಿವೆ. ಕೇಂದ್ರ ಸರ್ಕಾರ 2009 ಡಿಸೆಂಬರ್‌ನಲ್ಲಿ ರು. 600 ಸಂಬಳ ಹೆಚ್ಚಳ ಮಾಡಿ ಮತ್ತೊಂದೆಡೆ ಅಡುಗೆ ಕೆಲಸದವರನ್ನು ಕಡಿಮೆ ಮಾಡುತ್ತಿದೆ. 26ರಿಂದ 70, 71ರ ಮೇಲೆ ಮಕ್ಕಳ ಹಾಜರಾತಿ ಇರುವ ಶಾಲೆಗಳಲ್ಲಿ 2ರಿಂದ 3 ಜನ ಅಡುಗೆಯವರಿದ್ದರು. ಈಗ 26ರಿಂದ 100ರ ವರೆಗೆ ಒಬ್ಬರೇ ಅಡುಗೆಯವರು ಸಾಕು ಎಂದು ಸರ್ಕಾರ ಅವೈಜ್ಞಾನಿಕವಾಗಿ ಚಿಂತಿಸಿ ಸುತ್ತೋಲೆ ಕಳುಹಿಸಿ ಸುಮಾರು 5ರಿಂದ 6 ಸಾವಿರ ಅಡುಗೆಯವರನ್ನು ಕೆಲಸದಿಂದ ತೆಗೆದಿದೆ.
ಸರ್ಕಾರ ಈ ನೀತಿ ಅನುಸರಿಸುತ್ತಿರುವುದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ಬಿಸಿಯೂಟ ಯೋಜನೆ ಖಾಸಗೀಕರಣ ಕೈಬಿಡಬೇಕು. ಅಕ್ಷರ ದಾಸೋಹ ಕಾರ್ಯಕರ್ತರಿಗೆ ಕನಿಷ್ಠ ಕೂಲಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಹಲವಾರು ಮುಖಂಡರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಯಶೋದಾ ಬೆಟಗೇರಿ, ಶೋಭಾ ನರಗುಂದ, ನಾಗರತ್ನಾ ಬಡಿಗಣ್ಣವರ, ಪುಷ್ಪಾ ಚೌಹಾನ್, ಮಲ್ಲಮ್ಮ ತಡಹಾಳ, ಅಕ್ಷರ ದಾಸೋಹದ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.