ಗದಗ

ಕನ್ನಡ ಅಧ್ಯಾಪಕರ ಪರಿಷತ್ತಿನ ಸಭೆ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 25
ಗದಗ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ತಿನ ಪದಾಧಿಕಾರಿಗಳ ಪೂರ್ವಭಾವಿ ಪ್ರಥಮ ಸಭೆ ಗದಗ ನಗರದ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಸಂಜೆ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್‌ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಪದವಿ ಹಂತದಲ್ಲಿ ಕನ್ನಡ ವಿಷಯವನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿರಿಸಿಕೊಂಡು ಅವರಲ್ಲಿ ಭಾಷಾ ಕೌಶಲ್ಯ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಜತೆಗೆ ಬರವಣಿಗೆ ಶುದ್ಧತೆ, ಪತ್ರವ್ಯವಹಾರ ಜ್ಞಾನವನ್ನೂ ಕಲಿಸಬೇಕಾಗಿದೆ. ಅದಕ್ಕಾಗಿ ಕನ್ನಡ ಅಧ್ಯಾಪಕ ಪರಿಷತ್‌ನಿಂದ ಅಂತಹ ಕಾರ್ಯಕ್ಕೆ ಚಾಲನೆ ನೀಡಿ ಪ್ರತಿ ಪದವಿ ಮಹಾವಿದ್ಯಾಲಯದಲ್ಲಿ ಭಾಷಾ ಕೌಶಲ್ಯ ಕಾರ್ಯಾಗಾರ ಆಯಾ ಕಾಲೇಜಿನ ಸಿಬ್ಬಂದಿ ಮತ್ತು ಪ್ರಾಚಾರ್ಯರ ಸಹಕಾರದೊಂದಿಗೆ ಮಾಡೋಣ ಎಂದರು.
ಸಭೆಯಲ್ಲಿ ಹಲವಾರು ವಿಷಯಗಳ ಚರ್ಚೆಯ ನಂತರ ಮೊದಲ ಸೆಮಿಸ್ಟರ್ ಅವಧಿಯಲ್ಲಿ ಆಗಸ್ಟ್ ತಿಂಗಳಲ್ಲಿ ಹೊಳೆಆಲೂರಿನ ಕಲ್ಮೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಕಾಲೇಜಿನ ಸಹಯೋಗದಲ್ಲಿ ಭಾಷಾಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಮತ್ತು ಬರವಣಿಗೆ ಕಲೆ ಕುರಿತು ವಿಶೇಷ ಉಪನ್ಯಾಸ, ಸೆಪ್ಟೆಂಬರ್ ತಿಂಗಳಲ್ಲಿ ಮುಂಡರಗಿಯ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದಲ್ಲಿ ಮಾತನಾಡುವ ಕಲೆ ಕುರಿತು ಕಾರ್ಯಾಗಾರ, ಅಕ್ಟೋಬರ್ ತಿಂಗಳಲ್ಲಿ ಗದಗಿನ ಎಚ್‌ಸಿಇಎಸ್ ಕಾಲೇಜಿನಲ್ಲಿ ಭಾಷಾಕಲೆ ಕುರಿತ ಕಾರ್ಯಾಗಾರ ಮತ್ತು ಮೊದಲ ಸೆಮಿಸ್ಟರ್ ಕೊನೆಗೆ ಗದಗ ಜಿಲ್ಲಾ ಅಂತರ್ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಸ್ವರಚಿತ ಕವನ ವಾಚನ ಸ್ಪರ್ಧೆ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ನಡೆಸಲು ನಿರ್ಧರಿಸಲಾಯಿತು. ವರ್ಷದ ಕೊನೆಯಲ್ಲಿ ಕನ್ನಡ ಅಧ್ಯಯನ ಪುಸ್ತಕ ಹೊರತರುವ ಕುರಿತು ತೀರ್ಮಾನಿಸಲಾಯಿತು.
ಪದಾಧಿಕಾರಿಗಳಾದ ಚನ್ನಪ್ಪ ಹುಡೇದಗಡ್ಡಿ, ಎಂ.ಎಸ್. ಪಾಟೀಲ, ಪ್ರೊ. ಶಕುಂತಲಾ ಸಿಂಧೂರ, ಆರ್.ಎಂ. ಕಲ್ಲನಗೌಡರ, ಡಾ. ಪ್ರಭು ಗಂಜಿಹಾಳ, ಡಾ. ರಿಯಾಜ ಭಾಷಾ, ಡಾ. ರಾಜಶೇಖರ ದಾನರಡ್ಡಿ, ಎಫ್.ಎನ್. ಕುರುಬರ, ಬಿ.ಎಚ್. ಗೌಡರ, ಸಿ.ಎಂ. ಕಾಳಣ್ಣವರ, ಎಚ್.ಆರ್. ಕಲ್ಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.