ಗದಗ

ರೇಲ್ವೆ ಕೆಳಸೇತುವೆ, ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 31
ಬೆಟಗೇರಿ-ಗದಗ ರಸ್ತೆಗೆ ಸಂಪರ್ಕ ಕಲ್ಪಿಸುವ ಬಳ್ಳಾರಿಗೇಟ್ ರಸ್ತೆ ಹಾಗೂ ಬಳ್ಳಾರಿಗೇಟ್ ಕೆಳಗೆ ಕಳೆದ ಒಂದುವರೆ ತಿಂಗಳಿಂದ ಮಳೆನೀರು ಹಾಗೂ ಸುತ್ತಮುತ್ತಲಿನ ಚರಂಡಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಈ ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಬುಧವಾರ ಬೆಟಗೇರಿಯ ಕುರಹಟ್ಟಿಪೇಟೆ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲಾ ಕೇಂದ್ರದ ಅವಳಿ ನಗರದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಗದಗ-ಬೆಟಗೇರಿ ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿಗೇಟ್ ರಸ್ತೆ ಸಂಪೂರ್ಣವಾಗಿ ಹದಗೆಟ್ಟು 4 ವರ್ಷ ಗತಿಸಿವೆ. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಬೇಜವಾಬ್ದಾರಿತನ ಪ್ರದರ್ಶಿಸುತ್ತಲೇ ಬಂದಿದ್ದಾರೆ.
ಈ ರಸ್ತೆಯು ನಗರಕ್ಕೆ ಸಂಪರ್ಕ ಕಲ್ಪಿಸುವುದರಿಂದ ಇಲ್ಲಿ ನಿತ್ಯ ರೈತರು ಎಪಿಎಂಸಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ, ರಸ್ತೆಯ ತುಂಬೆಲ್ಲ ತಗ್ಗುಗುಂಡಿಗಳು ನಿರ್ಮಾಣಗೊಂಡು ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇನ್ನು ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳಲು ಪ್ರಯಾಸ ಪಡುತ್ತಿದ್ದಾರೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ ವಿದ್ಯಾರ್ಥಿಗಳು ರೇಲ್ವೆ ಕಂಬಿಗಳನ್ನು ದಾಟಿಕೊಂಡು ಹೋಗಬೇಕು. ಹೀಗೆ ರೇಲ್ವೆ ಕಂಬಿಗಳನ್ನು ದಾಟಿಕೊಂಡು ಹೋಗುವ ಸಂದರ್ಭದಲ್ಲಿ ಹಲವು ಅವಘಡಗಳು ಸಂಭವಿಸಿವೆ.
ಈ ರಸ್ತೆಯ ನಡುವೆ ಬರುವ ಬಳ್ಳಾರಿಗೇಟ್‌ನಲ್ಲಿ ಮಳೆಯಾದರೆ 4 ರಿಂದ 5 ಅಡಿಗಳ ವರೆಗೆ ೆನೀರು ನಿಲ್ಲುತ್ತಿದ್ದು, ಇದರಿಂದ ಸಾರ್ವಜನಿಕರು ಸಂಚರಿಸಲು ತೊಂದರೆಯಾಗುತ್ತಿದೆ.
ಈ ಹಿಂದೆ ಈ ರಸ್ತೆ ದುರಸ್ತಿಗಾಗಿ ರಸ್ತೆ ಪಕ್ಕದಲ್ಲಿ ಕಲ್ಲು, ಮಣ್ಣು ಸುರಿಯಲಾಗಿತ್ತು. ಆದರೆ, ಯಾವುದೇ ರಸ್ತೆಯ ಅಭಿವೃದ್ಧಿ ಆಗಲಿಲ್ಲ. 2 ತಿಂಗಳ ಹಿಂದೆ ಈ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಈ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು, ಕೆಳಸೇತುವೆಯಲ್ಲಿ 3 ಅಡಿಯಷ್ಟು ಚರಂಡಿ ನೀರು ನಿತ್ಯ ಜಮಾವಣೆಗೊಳ್ಳುತ್ತಿದೆ. ಈ ನೀರಿನಲ್ಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಗಸ್ಟ್ 14 ರೊಳಗೆ ಈ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಕಾಂಕ್ರಿಟ್ ರಸ್ತೆ ನಿರ್ಮಿಸಿ ಕೆಳಸೇತುವೆಯಲ್ಲಿ ನೀರು ಜಮಾವಣೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು. ಹಾಗೂ ಈ ರಸ್ತೆಯಲ್ಲಿ ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಇಲ್ಲದೇ ಹೊದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮಹೇಶ ಕರಿಬಿಷ್ಟಿ, ಮಂಜುನಾಥ ಮ್ಯಾಗೇರಿ, ಮಂಜು ಗದುಗಿನ, ಮಂಜು ವಾಸನದ, ಮಲ್ಲಿಕಾರ್ಜುನ ಕಲ್ಮನಿ, ಅಜ್ಜನಗೌಡ ಹಿರೇಮನಿಪಾಟೀಲ, ಮನೋಹರ ಮೇರವಾಡೆ, ಕಲ್ಯಾಣಪ್ಪ ಹೂಡಿ, ಅಡಿವೆಪ್ಪ ಚಿಕ್ಕಣ್ಣವರ, ಬಸವರಾಜ ಗದುಗಿನ, ಶಫಿ ನವಲಗುಂದ ಸೇರಿದಂತೆ ಕುರಹಟ್ಟಿಪೇಟೆಯ ನಿವಾಸಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.