ಶುಕ್ರದೆಸೆ
-ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 1
ಶಿರಹಟ್ಟಿ ಪಟ್ಟಣ ಪಂಚಾಯಿತಿ ಮತ್ತು ಲಕ್ಷ್ಮೇಶ್ವರ ಪುರಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಬೇಸಿಗೆಯ ಕಡು ಬಿಸಿಲಿನಂತೆ ಹೆಚ್ಚುತ್ತಿದೆ. ಅದೇ ರೀತಿ ಪಟ್ಟಣದ ಪ್ರಿಂಟಿಂಗ್ ಪ್ರೆಸ್ಗಳಲ್ಲಿ ಕರ ಪತ್ರ ಮುದ್ರಣ ಕಾರ್ಯವು ಭರದಿಂದಲೇ ಸಾಗಿದೆ. ಇದರಿಂದ ಮುದ್ರಣ ಕೇಂದ್ರಗಳ ಮಾಲೀಕರಿಗೆ ಕೈ ತುಂಬಾ ಕೆಲಸ ಹಾಗೂ ಲಾಭವೂ ಆಗುತ್ತಿದೆ.
ಆಯ್ಕೆ ಆಗಬಯಸುವ ಅಭ್ಯರ್ಥಿಗಳು ಮತದಾರರ ಮನವೊಲಿಕೆಯ ತಂತ್ರ ಹೆಣೆಯುವಲ್ಲಿ ಗಾಢವಾಗಿ ಮಗ್ನರಾಗಿದ್ದಾರಲ್ಲದೇ ಜಾತಿ, ಹಣ ಬಲ ಮೇಲುಗೈ ಪಡೆಯುತ್ತಿರುವುದು ಕಂಡುಬರುತ್ತಿದೆ.
ಚುನಾವಣೆಗೆ ನಿಂತ ಅಭ್ಯರ್ಥಿಗಳಿಗೆ ಫ್ಯಾನ್, ಕೊಳಾಯಿ, ತೆಂಗಿನಕಾಯಿ, ಆಟೋರಿಕ್ಷಾ, ಹೊಲಿಗೆ ಯಂತ್ರ, ಬ್ಯಾಟ್ ಇಂತಹ ವಿವಿಧ ನಮೂನೆಯ ಚಿತ್ರಗಳನ್ನು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಗುರುತಿಗಾಗಿ ನೀಡಲಾಗಿದ್ದು, ಈ ಚಿತ್ರಗಳನ್ನು ಗುರುತಿಸಿ ಮತ ಹಾಕಲು ಮಾದರಿ ಕರ ಪತ್ರಗಳನ್ನು ಅಚ್ಚು ಹಾಕಿಸಲು ಪಟ್ಟಣದ ಪ್ರಿಂಟಿಂಗ್ ಪ್ರೆಸ್ಗಳಲ್ಲಿ ಅಭ್ಯರ್ಥಿಗಳ ಹಾಗೂ ಅವರ ಹಿಂಬಾಲಕರ ನೂಕುನುಗ್ಗಲು ಹೇಳ ತೀರದಾಗಿದೆ.
ಜಾತಿ ಲೆಕ್ಕಾಚಾರ
ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ನೋಡಿ ಮತ ಹಾಕಿ, ಆರಿಸಿ ತರುವ ಕಾಲವೊಂದಿತ್ತು. ಆದರೆ, ಇತ್ತೀಚೆಗೆ ಇದು ಕಡಿಮೆಯಾಗಿ ಜಾತಿಯ ಪ್ರಭಾವ ಹೆಚ್ಚಾಗಿದೆ. ಗೆಲುವಿಗೆ ಜಾತಿಯೇ ಪ್ರಮುಖ ಎನ್ನುವಂತಾಗಿದೆ. ಪಟ್ಟಣದ ಪಟ್ಟಣ ಪಂಚಾಯಿತಿಯ 16 ವಾರ್ಡ್ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರದ ಆಧಾರದ ಮೇಲೆಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಸಾಮಾನ್ಯವಾಗಿ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ, ಶೌಚಾಲಯ, ರಸ್ತೆ ಅಭಿವೃದ್ಧಿಗಳ ಬಗ್ಗೆ ಭರವಸೆ ನೀಡುವುದು ಕನಸಿನ ಮಾತಾಗಿದ್ದು, ವ್ಯಕ್ತಿಗತ ವರ್ಚಸ್ಸು ಮತ್ತು ಹಣಬಲ ಜತೆಗೆ ತೋಳ್ಬಲ ಆಯ್ಕೆಯಲ್ಲಿ ನಿರ್ಣಾಯಕ ಅಂಶಗಳಾಗಿ ಕಂಡುಬರುತ್ತಿವೆ. ಮಾದರಿ ಪಟ್ಟಣ ಪಂಚಾಯಿತಿ ಮಾಡಬೇಕೆಂದು ಸ್ಪಷ್ಟ, ದೂರ ದೃಷ್ಟಿಯುಳ್ಳ, ಸಮುದಾಯದ ಅಭ್ಯುದಯದಕ್ಕೆ ಶ್ರಮಿಸಲು ಕನಸು ಹೊತ್ತ ಅಭ್ಯರ್ಥಿಗಳ ಆವಶ್ಯಕತೆ ಇದೆ. ಆದರೆ ಇದನ್ನು ಗಮನಿಸಿದಲ್ಲಿ ಅಂಥವರು ಕಾಣಸಿಗುವುದು ವಿರಳ.
ಆದರೆ, ಜನರು ಮಾತ್ರ ಅಭಿವೃದ್ಧಿಯ ಕಣಸು ಕಾಣುತ್ತ ಅಭ್ಯರ್ಥಿಗಳ ಪರ ಮತಯಾಚಿಸಲು ಆಗಮಿಸುತ್ತಿರುವ ನಾಯಕರುಗಳಿಗೆ ಕೆಲ ಕಡೆಗಳಲ್ಲಿ ಬಡಾವಣೆಯ ವಾಸ್ತವ ಚಿತ್ರಣವನ್ನು ತೋರಿಸಿ, ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಪಟ್ಟಣದಲ್ಲಿ ಮತದಾರರ ಓಲೈಕೆಯ ಕಸರತ್ತು ಮಾತ್ರ ತೀವ್ರಗೊಂಡಿದ್ದು, ಕಳೆದ ಚುನಾವಣೆಗೆ ಹೋಲಿಸಿದಾಗ ಈ ಚುನಾವಣೆ ಪ್ರಚಾರದ ಭರಾಟೆ ಎರಡರಷ್ಟು ಹೆಚ್ಚಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷ ಹುಮಾಯೂನ ಮಾಗಡಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಇವರು ಸ್ಪರ್ಧಿಸಿರುವ ಎಂಟನೇ ವಾರ್ಡ್ನಲ್ಲಿ ಜೆಡಿಎಸ್, ಬಿಜೆಪಿ, ಪಕ್ಷೇತರರು ಮಧ್ಯರಾತ್ರಿವರೆಗೂ ಪ್ರಚಾರದ ಕಸರತ್ತು ಜೋರಾಗಿಯೇ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

