ಗದಗ

ಅಭಿವೃದ್ಧಿಗೆ ಶ್ರಮಿಸಿದ್ದೇನೆ: ಸಚಿವ ಕಳಕಪ್ಪ ಬಂಡಿ

Published On :

ಗಜೇಂದ್ರಗಡ: ಸರ್ಕಾರದ ಮೂಲ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವುದರ ಜತೆಗೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ, ಜನತೆಗೆ ನೀಡಿದ ಭರವಸೆಗೆ ತಕ್ಕಂತೆ ನಡೆದುಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು.  ಅವರು ಸೋಮವಾರ ಸ್ಥಳೀಯ ಹಿಂದುಳಿದ ಸಮುದಾಯ ವಾಸಿಸುವ ಬಡಾವಣೆಯಲ್ಲಿ ಪಕ್ಷದ ಅಭ್ಯರ್ಥಿಪರ ಮತಯಾಚಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ರೋಣ ಮತಕ್ಷೇತ್ರದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗಿವೆ. ಜತೆಗೆ ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿ ಸರ್ಕಾರದ ವಿಶೇಷ ಯೋಜನೆ ಅಡಿಯಲ್ಲಿ ಅನುದಾನ ಒದಗಿಸಿ ಸಮುದಾಯದ ಉನ್ನತಿಗೆ ಶ್ರಮಿಸಿದ್ದೇನೆ ಎಂದರು. ತಾಲೂಕಿನ ಕೃಷಿ ಕ್ಷೇತ್ರವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಯೋಜನೆಗಳು ಪ್ರಗತಿಯಲ್ಲಿವೆ. ಅಲ್ಲದೇ ಪಟ್ಟಣ ಸೇರಿ ಗ್ರಾಮೀಣ ರಸ್ತೆ ಸಾರಿಗೆ, ಸೂಕ್ತ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ತೃಪ್ತಿ ನನಗಿದೆ. ಇಂಥಹ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಮಾ. 7ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿವೆ ಎಂದರು.   ಪುರಸಭೆ ಮಾಜಿ ಉಪಾಧ್ಯಕ್ಷ ಭಾಸ್ಕರ ರಾಯಬಾಗಿ, ಬುಡ್ಡಪ್ಪ ಮೂಲಿಮನಿ, ಸ್ಥಾಯಿ ಸಮಿತಿ ಮಾಜಿ ಚೇರಮನ್ ಸಿದ್ದಪ್ಪ ಚಲವಾದಿ, ಅಂಬರೇಶ ಬಳಿಗೇರ, ಎಚ್.ಎಸ್. ಸೋಂಪುರ, ಅಶೋಕ ಸಂದಿಮನಿ ಮುಂತಾದವರು ಉಪಸ್ಥಿತರಿದ್ದರು.
ಇಂದು ಉದ್ಘಾಟನೆ
ಗದಗ: ಸ್ಥಳೀಯ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಂಚಕರ್ಮ ವಿಭಾಗದ ನೂತನ ಫಿಸಿಯೋಥೆರಪಿ ಚಿಕಿತ್ಸಾ ಘಟಕ ಮಾ. 5ರ ಬೆಳಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಬಿಜಾಪುರ ಜ್ಞಾನಯೋಗಾಶ್ರವುದ ಸಿದ್ಧೇಶ್ವರ ಶ್ರೀಗಳು ಉದ್ಘಾಟನೆ ನೆರವೇರಿಸುವರು. ಸಂಸ್ಥೆಯ ಚೇರಮನ್ ಎಸ್.ಬಿ. ಸಂಶಿ  ಅಧ್ಯಕ್ಷತೆ ವಹಿಸುವರು.  ಆಯುರ್ವೇದ ವೈಜ್ಞಾನಿಕತೆ ಕುರಿತು ಶ್ರೀಗಳ ಸಮ್ಮುಖದಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಜರುಗಲಿದೆ ಎಂದು ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಕುಷ್ಟಗಿ ಚಾಳ, ಹೆಲ್ತ್‌ಕ್ಯಾಂಪ್, ಸೆಟ್ಲಮೆಂಟ್‌ನಿಂದ ಲೈಲಾಕಾನ್ವೆಂಟ್ ವರೆಗೆ ಮಂಗಳವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.