ಗದಗ

ಮುಂಡರಗಿ: 23 ವಾರ್ಡ್‌ಗೆ ಚುನಾವಣೆ

Published On :

ಮುಂಡರಗಿ: ಕಳೆದ ಹಲವು ದಿನಗಳಿಂದ ಪ್ರಾರಂಭವಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮುಂಡರಗಿ ಪುರಸಭೆಯ 23 ವಾರ್ಡ್‌ಗಳಿಗೆ 105 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಮಾ. 7ರಂದು ಮತದಾರರು ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಮತ ಚಲಾಯಿಸಿ ಅವರ ಭವಿಷ್ಯ ನಿರ್ಧರಿಸಲಿದ್ದಾರೆ.
ಒಟ್ಟು 23 ವಾರ್ಡ್‌ಗಳ ಚುನಾವಣೆಗಾಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಸಕರ ಮಾದರಿ ಕೇಂದ್ರ ಶಾಲೆ, ಎಸ್.ಎಂ. ಭೂಮರಡ್ಡಿ, ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಎಪಿಎಂಸಿ ಸಭಾಭವನ, ಪುರಸಭೆ ಸೇರಿದಂತೆ 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 100 ಜನರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಆಕಾಂಕ್ಷಿಗಳಿಗೆ ಪ್ರತಿಷ್ಠೆ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ವಿಧಾನಸಭೆ ಚುನಾವಣೆಯ ನಂತರವೇ ಆಗಬೇಕು ಎನ್ನುವುದು ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ಹಿಡಿದು ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಿಲುವಾಗಿತ್ತು. ಆದರೆ, ಈ ವಿಷಯದಲ್ಲಿ ಚುನಾವಣಾ ಆಯೋಗದ ನಿರ್ಣಯವೇ ಅಂತಿಮವಾಯಿತು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರದ ಶಿರಹಟ್ಟಿ ಮತಕ್ಷೇತ್ರದ ಜೆಡಿಎಸ್, ಬಿಎಸ್‌ಆರ್, ಕೆಜೆಪಿ ಪಕ್ಷಗಳ ನಿಯೋಜಿತ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾದವರು ಮುಂಡರಗಿ ಪುರಸಭೆ ಚುನಾವಣೆಯ ನೇತೃತ್ವವಹಿಸಿಕೊಂಡು ಸ್ಥಳೀಯವಾಗಿ ತಮ್ಮ ಬಲಾಬಲ ಪ್ರದರ್ಶಿಸುತ್ತಿದ್ದಾರೆ. ಇಲ್ಲಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಆಯಾ ಪಕ್ಷಗಳ ಆಕಾಂಕ್ಷಿಗಳು ಅಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಲ್ಲಿ ಪ್ರಯತ್ನಿಸುತ್ತಿದ್ದಾರೆ.
ಮತದಾರರ ನಿರ್ಣಯವೇ ಅಂತಿಮ: ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಆಕಾಂಕ್ಷಿಗಳು ತಾವು ಸ್ಪರ್ಧಿಸುವ ವಾರ್ಡಿಗೆ ಭೇಟಿ ನೀಡಿ, ಅಲ್ಲಿನ ಮತದಾರರ ಅಭಿಪ್ರಾಯ ಸಂಗ್ರಹಿಸಿದರು. ನಂತರ ಚುನಾವಣೆಗೆ ಸ್ಪರ್ಧಿಸಿದ ಮೇಲೆ ತಮ್ಮ ತಮ್ಮ ಪಕ್ಷಗಳ ಮುಖಂಡರನ್ನು ಕರೆತರುವ ಮೂಲಕ ತಮ್ಮ ಪರ ಪ್ರಚಾರ ಕೈಗೊಂಡರು. ಬಹಿರಂಗ ಪ್ರಚಾರ ಮುಗಿದ ನಂತರ ಸದ್ದಿಲ್ಲದೆ ಮನೆ ಮನೆಗೆ ತೆರಳಿಯೂ ಪ್ರಚಾರ ಮಾಡಿದರು. ಇದೀಗ ಮತದಾನದ ದಿನ ಬಂದಿದ್ದು, ಅಳೆದೂ ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಪುರಸಭೆಯ 16,449 ಮತದಾರರ ನಿರ್ಣಯವೇ ಅಂತಿಮವಾಗಲಿದೆ.
ಸೂಕ್ತ ಬಂದೋಬಸ್ತ್: ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸಿಪಿಐ ಸುನಿಲ ಸವದಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. 1 ಸಿಪಿಐ, 1 ಪಿಎಸ್‌ಐ, 3 ಎಎಸ್‌ಐ, 7 ಜನ ಹೆಡ್ ಕಾನ್‌ಸ್ಟೇಬಲ್, 26 ಪೊಲೀಸ್, 3 ಮಹಿಳಾ ಪೊಲೀಸ್, 20 ಹೋಂಗಾರ್ಡ್‌ಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪುರಸಭೆಯ 10 ವಾರ್ಡ್‌ಗಳನ್ನು ಅತಿ ಸೂಕ್ಷ್ಮ, 4 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ತಾಲೂಕು ತಹಸೀಲ್ದಾರ್ ಎ.ಟಿ. ನರೇಗಲ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.