ಜನಪರ ಕಾರ್ಯಗಳೇ ಶ್ರೀರಕ್ಷೆ: ಲಮಾಣಿ
ಲಕ್ಷ್ಮೇಶ್ವರ: ಜನಸಾಮಾನ್ಯರಿಗೆ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ನಾನು ಮಾಡಿದ ಜನಪರ ಕಾರ್ಯಗಳು ನನಗೆ ಶ್ರೀರಕ್ಷೆಯಾಗಲಿವೆ ಎಂದು ಶಾಸಕ ರಾಮಣ್ಣ ಲಮಾಣಿ ಅಭಿಪ್ರಾಯಪಟ್ಟರು.
ಅವರು ಭಾನುವಾರ ಬೆಳಗ್ಗೆ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪ್ರವಾಸಿ ಮಂದಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
5 ವರ್ಷಗಳ ಅವಧಿಯಲ್ಲಿ ಶಿರಹಟ್ಟಿ ಮತಕ್ಷೇತ್ರದಲ್ಲಿ 60 ವರ್ಷಗಳಿಂದ ಆಗದ ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿದ್ದೇವೆ. ಜನಸಾಮಾನ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದರು. ಅವರ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಡೆದುಕೊಂಡಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿರಹಟ್ಟಿ ಮತಕ್ಷೇತ್ರದ ಜನತೆ ನನ್ನನ್ನು ಮತ್ತೆ ಆಯ್ಕೆ ಮಾಡಿದ್ದೇ ಆದಲ್ಲಿ ಮುಂದಿನ ನಮ್ಮ ಸರ್ಕಾರದಲ್ಲಿ ಸಚಿವನಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಶ್ರಮವಹಿಸಿ ದುಡಿಯುವುದಾಗಿ ಹೇಳಿದರು.
ನನ್ನ ರಾಜಕೀಯ ವಿರೋಧಿಗಳು ಕುತಂತ್ರದಿಂದ ಲಕ್ಷ್ಮೇಶ್ವರ ಪ್ರವಾಸಿ ಮಂದಿರ ಉದ್ಘಾಟನೆಯ ಕಾರ್ಯಕ್ರಮಕ್ಕೆ ತೊಂದರೆ ಮಾಡಿ ಅಡ್ಡಿಪಡಿಸಿದ್ದು ಸರಿಯಾದ ನಡವಳಿಕೆಯಲ್ಲ. ನನಗೆ ಎಷ್ಟು ಅವಮಾನ ಹಾಗೂ ನಿಂದನೆ ಮಾಡುತ್ತಾರೋ ಅಷ್ಟರ ಮಟ್ಟಿಗೆ ದೊಡ್ಡವನಾಗುತ್ತೇನೆ ಹೊರತು ನಾನು ಸಣ್ಣವನಾಗುವುದಿಲ್ಲ, ಬದಲಿಗೆ ನಾನು ಇನ್ನಷ್ಟು ಬಲಿಷ್ಠನಾಗಿ ಕ್ಷೇತ್ರದ ಜನರ ಹಿತ ಕಾಯುತ್ತೇನೆ ಎಂದು ಹೇಳಿದರು. ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ದೊಡ್ಡಗೌಡರ ಮಾತನಾಡಿದರು. ನೂತನವಾಗಿ ಪ್ರವಾಸಿ ಮಂದಿರ ಉದ್ಘಾಟನೆಯಲ್ಲಿ ಶಾಸಕರು ಪಟ್ಟಣದಲ್ಲಿರುವ ಮಾಜಿ ಶಾಸಕರು ಹಾಗೂ ಗಣ್ಯರನ್ನು ಕರೆಯದೇ ಕೇವಲ ತಮಗೆ ಬೇಕಾದ ಹಾಗೂ ತಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಉದ್ಘಾಟನೆ ಮಾಡಿದ್ದು ಸರಿಯಾದ ಕ್ರಮವಲ್ಲವೆಂದು ಕೆಲ ಕಾಂಗ್ರೆಸ್ ಹಾಗೂ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಾಪಂ ಸದಸ್ಯ ಚೆನ್ನಪ್ಪ ಜಗಲಿ, ನಾಗೇಶ ಅಮರಾಪುರ ಹಾಗೂ ಇತರರು ಸೇರಿ ಶಾಸಕರೊಂದಿಗೆ ವಾಗ್ವಾದಕ್ಕಿಳಿದಿದ್ದರಿಂದ ನೂಕಾಟ ತಳ್ಳಾಟ ನಡೆದು ಕೆಲಕಾಲ ಗೊಂದಲಗೂಡಾಗಿತ್ತು. ಸೋಮಣ್ಣ ಮುಳಗುಂದ, ಚೆಂಬಣ್ಣ ಬಾಳಿಕಾಯಿ, ಇಬ್ರಾಹಿಂಸಾಬ ರಿತ್ತಿ, ನಾಗರಾಜ ಚಿಂಚಲಿ ಸತೀಶ ಮೆಕ್ಕಿ, ಜಗದೀಶ ಪುರಾಣಿಕಮಠ, ಮಂಜುನಾಥ ಮಾಗಡಿ, ಪುರಸಭೆಯ ಸದಸ್ಯರಾದ ರಾಮಣ್ಣ ರಿತ್ತಿ, ಗಣೇಶ ಬೇವಿನಮರದ, ರಾಮಣ್ಣ ಉಳ್ಳಟ್ಟಿ, ನಿಂಗಪ್ಪ ಬನ್ನಿ, ನೀಲಪ್ಪ ಕರ್ಜಕ್ಕಣ್ಣವರ, ಸಿದ್ದನಗೌಡ ಬೊಳ್ಳಳ್ಳಿ, ರಾಮಣ್ಣ ಅಕ್ಕಿಗುಂದ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

