ರನ್ನನ ಗದಾಯುದ್ಧ ಕನ್ನಡದ ಶ್ರೇಷ್ಠ ಕಾವ್ಯ: ಡಾ. ದಾನರಡ್ಡಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 25
10ನೇ ಶತಮಾನ ಕನ್ನಡ ಸಾಹಿತ್ಯದ ಸುವರ್ಣಯುಗ. ಈ ಯುಗದಲ್ಲಿ ರನ್ನ ಕವಿಯಿಂದ ರಚಿತವಾದ ಗದಾಯುದ್ಧ ಕಾವ್ಯವು ವೀರರಸ ಪ್ರಧಾನವಾದ ಕನ್ನಡದ ಶೇಷ್ಠ ಕೃತಿಯಂದು ಗದುಗಿನ ಪಿಪಿಜಿ ಕಲಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ದಾನರಡ್ಡಿ ಹೇಳಿದರು.
ಅವರು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲಾ ಕಸಾಪ ಕಚೇರಿಯಲ್ಲಿ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ರನ್ನನ ಗದಾಯುದ್ಧ ಕಾವ್ಯ ಕುರಿತು ಮಾತನಾಡಿದರು. ಸಾಹಿತ್ಯ ಮತ್ತು ಯುಗಧರ್ಮದ ಮೌಲ್ಯಗಳನ್ನು ಅರ್ಥಗರ್ಭಿತವಾಗಿ ಬಿಂಬಿಸುವ ಅನುಪಮವಾದ ಕೃತಿಯಾಗಿದೆ. ರನ್ನ ಕನ್ನಡ ಸಾಹಿತ್ಯದಲ್ಲಿ ಸಿಂಹಾವಲೋಕನ ಕ್ರಮದಿಂದ ಇಡೀ ಮಹಾಭಾರತವನ್ನು ಅರ್ಥ ಕೆಡದಂತೆ ನಿರೂಪಿಸಿದ್ದಾನೆ. ಸಾಹಸ ಭೀಮ ವಿಜಯವೆಂದು ಕರೆಸಿಕೊಳ್ಳುವ ಈ ಕಾವ್ಯಕ್ಕೆ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನವಿದೆ. ಈ ಕಾವ್ಯದಲ್ಲಿ ಬರುವ ಪಾತ್ರಗಳಿಗೆ ಜೀವತುಂಬಿ ಸಹೃದಯರ ಮನದ ಮೇಲೆ ಪ್ರಭಾವ ಬೀರಿ ದುರ್ಯೋಧನನ ಪಾತ್ರಕ್ಕೆ ವೈಶಿಷ್ಟ್ಯ ತುಂಬಿದ್ದಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ರನ್ನನು ಗದಾಯುದ್ಧ ಕೃತಿಯಲ್ಲಿ ಜೀವನ ಮೌಲ್ಯಗಳನ್ನು ಎತ್ತಿ ಹಿಡಿದು ಆ ಯುಗದಲ್ಲಿ ವೀರರ ಬಗ್ಗೆ ಇರುವ ಗೌರವವನ್ನು ರಣರಂಗದಲ್ಲಿ ಬರುವಾಗ ವೈರಿಯ ಮಗ ಅಭಿಮನ್ಯುವಿನ ಶವಕ್ಕೆ ಹೇಳುವ ದುರ್ಯೋಧನನ ಮಾತು ಮಹಾನುಭಾವ ನಾಯಕನಲ್ಲಿ ಮಾತ್ರ ಕಾಣಬಹುದು ಎಂಬುದನ್ನು ಮನಕ್ಕೆ ಮುದ ನೀಡುವಂತೆ ಚಿತ್ರಿಸಿದ್ದಾನೆ ಎಂದರು.
ಕಾರ್ಯಕ್ರಮದಲ್ಲಿ ಉದಯೋನ್ಮುಖ ಕವಿ ಬರಹಗಾರರ ಪರಿಚಯದ ಹಿನ್ನೆಲೆಯಲ್ಲಿ ಕೆ.ಎಸ್.ಎಸ್. ಮಹಾವಿದ್ಯಾಲಯದ ಹಿಂದಿ ಸಹ ಪ್ರಾಧ್ಯಾಪಕ ಪ್ರೊ. ಮಲ್ಲಣ್ಣ ರಾಟಿ ಅವರಿಂದ ಕವನ ವಾಚನ ನಡೆಯಿತು. ಸಭೆಯಲ್ಲಿ ಕಸಾಪ ಗೌರವ ಕೋಶಾಧ್ಯಕ್ಷ ಡಿ.ಎಚ್. ಮಲ್ಲೇಶ, ಜಿಲ್ಲಾ ಸಲಹಾ ಮಂಡಳಿಯ ಸದಸ್ಯ ಅಂದಾನಪ್ಪ ವಿಭೂತಿ, ತಾಲೂಕು ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ, ಸಾಹಿತಿ ಎಂ.ಎಲ್. ಗೌಡಪ್ಪಗೌಡರ, ಮುತ್ತಣ್ಣ ಬದ್ನಿಕಾಯಿ, ಪ್ರೊ. ಆರ್.ಜಿ. ಚಿಕ್ಕಮಠ, ಜಿ.ಎಸ್. ಯತ್ನಟ್ಟಿ, ಬಿ.ಎಸ್. ಹಿಂಡಿ, ಅಶೋಕ ಸಾವಂತ, ಪ್ರಕಾಶ ಗಿಡ್ಡಣ್ಣವರ, ಮಲ್ಲಿಕಾರ್ಜುನ ಪೂಜಾರ, ಮಹಾಂತೇಶ ಮದ್ನೂರ, ಎಸ್.ಎಫ್. ಹಡಪದ ವಿ.ಬಿ. ಪುಠಾಣಿ, ಆರ್.ಯು. ಕಮತದ, ಈ.ಎಂ. ಗುಳೆದಗುಡ್ಡ, ಪ್ರೊ. ಮುರಳೀಧರ ಸಂಕನೂರ, ಬಸಯ್ಯ ನಂದಿಕೋಲಮಠ, ವಿನಾಯಕ ಕಮತದ, ಆರ್.ಬಿ. ಹಡಪದ, ವಿಶ್ವನಾಥ ಧನ್ನೂರ ಉಪಸ್ಥಿತರಿದ್ದರು. ವಾಸುದೇವ ಟಿಕಣದಾರ ಪ್ರಾರ್ಥಿಸಿದರು. ನಿವೃತ್ತ ಪ್ರಾಚಾರ್ಯ ಕೆ.ವಿ. ಕನ್ನೂರ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಾ. ಸಂಗಮೇಶ ತಮ್ಮನಗೌಡ್ರ ನಿರೂಪಿಸಿದರು. ಬಿ.ಎಸ್. ಹಿಂಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

