ಗದಗ

ಟಿಕೆಟ್ ಸಿಗುವ ಮೊದಲೇ ಪ್ರಚಾರಕ್ಕಿಳಿದ ಲಮಾಣಿ

Published On :

ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 28
ಈ ಬಾರಿಯ ವಿಧಾನಸಭಾ ಚುನಾವಣೆ ಎಷ್ಟೊಂದು ತುರುಸಿನಿಂದ ಕೂಡಿದೆ ಎನ್ನುವುದಕ್ಕೆ ಗುರುವಾರ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ತಮ್ಮ ಪರ ಪ್ರಚಾರ ಕಾರ್ಯ ಪ್ರಾರಂಭಿಸಿದ್ದು, ಟಿಕೆಟ್ ಘೋಷಣೆಯಾಗುವ ಪೂರ್ವದಲ್ಲಿಯೇ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ನೇರವಾಗಿ ಇಳಿಯುವ ಮೂಲಕ ಹಲವು ಕುತೂಹಲಕ್ಕೆ ಕಾರಣರಾಗಿದ್ದಾರೆ.
ಜಿಲ್ಲೆಯಲ್ಲಿಯೇ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹಲವಾರು ಬಾರಿ ತಮ್ಮ ವಿಶೇಷ ನಡೆಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬಳ್ಳಾರಿ ರೆಡ್ಡಿ ಸಹೋದರರು ಯಡಿಯೂರಪ್ಪನವರ ವಿರುದ್ಧ ಸಿಡಿದೆದ್ದು ಕೆಲ ಶಾಸಕರನ್ನು ಹೈದ್ರಾಬಾದ್ಗೆ ಕರೆದೊಯ್ದ ವೇಳೆಯಲ್ಲಿ ಅವರೊಂದಿಗೆ ಗುರುತಿಸಿಕೊಂಡರು. ನಂತರ ಮತ್ತೆ ಯಡಿಯೂರಪ್ಪನವರ ಪಾಳೆಯದಲ್ಲಿ ಪ್ರತ್ಯಕ್ಷವಾಗಿ, ಜಗದೀಶ ಶೆಟ್ಟರ್ ಸಿಎಂ ಆಗುವ ವೇಳೆಯಲ್ಲಿ ಮತ್ತೆ ಯಡಿಯೂರಪ್ಪನವರ ಹಿಂಬಾಲಕ ಎಂದು ತೋರಿಸಿಕೊಂಡರು. ಯಡಿಯೂರಪ್ಪನವರು ಕೆಜೆಪಿ ಸ್ಥಾಪನೆ ಮಾಡಿದ ವೇಳೆಯಲ್ಲೂ ಬಹಿರಂಗವಾಗಿಯೇ ಹಾವೇರಿ ಸಮಾವೇಶದಲ್ಲಿ ಗುರುತಿಸಿಕೊಂಡಿದ್ದರು. ಈ ಎಲ್ಲ ಬೆಳವಣಿಗೆಯ ನಂತರ ದಿಢೀರನೇ
ಯು ಟರ್ನ್ ಹೊಡೆದು ನಾನು ಬಿಜೆಪಿಯಲ್ಲಿಯೇ ಉಳಿಯುತ್ತೇನೆಂದು ಹೇಳಿ ವಿದೇಶಿ ಪ್ರವಾಸಕ್ಕೆ ಹಾರಿದ್ದರು. ಇವರ ವರ್ತನೆಯಿಂದ ತೀವ್ರ ಬೇಸರಗೊಂಡಿರುವ ಶಿರಹಟ್ಟಿ ಕ್ಷೇತ್ರದ ಬಿಜೆಪಿಯ ಕೆಲ ಮುಖಂಡರು ಯಾವುದೇ ಕಾರಣಕ್ಕೂ ಹಾಲಿ ಶಾಸಕ ರಾಮಣ್ಣ ಲಮಾಣಿಗೆ ಟಿಕೆಟ್ ನೀಡಬಾರದು ಎಂದು ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ.
ಈ ಎಲ್ಲ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ರಾಮಣ್ಣ ಲಮಾಣಿ ಅವರಿಗೆ ಕ್ಷೇತ್ರದಲ್ಲಿ ಅವರ ಪಕ್ಷದವರಿಂದಲೇ ವಿರೋಧವಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಟಿಕೆಟ್ ವಿಳಂಬ: ಈ ಎಲ್ಲ ಬೆಳವಣಿಗೆಯಿಂದ ರಾಜ್ಯ ಬಿಜೆಪಿ ನಾಯಕರು ಗದಗ ಜಿಲ್ಲೆಯ 3 ಕ್ಷೇತ್ರಗಳ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ವಿಳಂಭ ಧೋರಣೆ ಅನುಸರಿಸುತ್ತಿದ್ದು, ಇಂದಿಗೂ ಟಿಕೆಟ್ ಅಂತಿಮವಾಗಿರುವ ಬಗ್ಗೆ ಪಕ್ಷ ಸ್ಪಷ್ಟಣೆ ನೀಡಿಲ್ಲ. ಆದರೆ ಇದೆಲ್ಲರ ಮಧ್ಯೆಯೇ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಗುರುವಾರ ಮುಂಡರಗಿ ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚರಿಸಿ, ಬಿಜೆಪಿ ಟಿಕೆಟ್ ನನಗೆ ಸಿಗುವುದು ಖಂಡಿತ ಎಂದು ಹೇಳಿ ಪ್ರಚಾರ ಕಾರ್ಯ ಪ್ರಾರಂಭಿಸಿರುವುದನ್ನು ಗಮನಿಸಿದಲ್ಲಿ ಶಾಸಕರು ಪಕ್ಷದ ವರಿಷ್ಠರಿಂದ ಅಧಿಕೃತ ಸೂಚನೆ ಬರುವವರೆಗೂ ಕಾಯದೇ ಪ್ರಚಾರಕ್ಕೆ ಮುಂದಾಗಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.