ಗ್ರಾಮೀಣ ಕ್ರೀಡೆಗಳು ಅವನತಿಯತ್ತ
ಕನ್ನಡಪ್ರಭ ವಾರ್ತೆ, ಗದಗ, ಮಾ. 29
ಇಂದು ಗ್ರಾಮೀಣ ಕ್ರೀಡೆಗಳು ಅವನತಿಯ ಹಾದಿಯಲ್ಲಿದ್ದು, ಯುವಕರು ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವಂತೆ ಎಬಿವಿಪಿಯ ಬೆಂಗಳೂರಿನ ಸಂಘಟನಾ ಕಾರ್ಯದರ್ಶಿ ಎನ್. ರವಿಕುಮಾರ ಹೇಳಿದರು.
ಅವರು ಶುಕ್ರವಾರ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಗದಗ ವತಿಯಿಂದ ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕೆಸರು ಗದ್ದೆ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಕೆಸರು ಗದ್ದೆ ಪಂದ್ಯಾವಳಿಯು ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆ ಹೊರಹಾಕಲು ಸಹಕಾರಿಯಾಗಿದೆ. ಯಾವುದೇ ಕ್ರೀಡೆ ಇರಲಿ ಅದಕ್ಕೆ ಕಠಿಣ ಪರಿಶ್ರಮ ಅಗತ್ಯ. ಸತತ ಪರಿಶ್ರಮದಿಂದ ಏನನ್ನಾದರೂ ಸಾಧಿಸಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಕಠಿಣ ಅಧ್ಯಯನ ಹೊಂದುವುದು ಅತ್ಯವಶ್ಯಕವಾಗಿದೆ. ಸ್ವಾಮಿ ವಿವೇಕಾನಂದರು ಇಂದಿನ ಯುವ ಸಮೂಹಕ್ಕೆ ಆದರ್ಶ ಪ್ರಾಯರಾಗಿದ್ದು, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜ ಸುಧಾರಣೆಯಲ್ಲಿ ತೊಡಗಬೇಕಾಗಿದೆ.
ಅತಿಥಿಗಳಾಗಿ ಆಗಮಿಸಿದ್ದ ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಕಣ್ಣು ಮತ್ತು ಮನಸ್ಸಿಗೆ ಮುದ ನೀಡುವ ಕೆಸರು ಗದ್ದೆ ಸ್ಪರ್ಧೆಯನ್ನು ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ. ಜಿಲ್ಲೆಯು ಬಯಲು ಸೀಮೆಯಾಗಿದ್ದು, ಇಲ್ಲಿ ಇಂತಹ ಕೆಸರು ಗದ್ದೆಯ ಸ್ಪರ್ಧೆಗಳು ನಡೆಯುವುದು ವಿರಳ. ಎಬಿವಿಪಿ ಸಂಘಟನೆಯು ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾಗಿ ನಡೆಯುವ ಈ ಕೆಸರುಗದ್ದೆ ಕಬಡ್ಡಿ ಪಂದ್ಯಾವಳಿಯನ್ನು ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಪರಿಚಯಿಸಿದ ಕೀರ್ತಿ ಎಬಿವಿಪಿ ಸಂಘಟನೆಯ ಪದಾಧಿಕಾರಿಗಳಿಗೆ ಸಲ್ಲುತ್ತದೆ. ಕಳೆದ 2 ವರ್ಷಗಳ ಹಿಂದೆ ಎಬಿವಿಪಿಯ ಸಂಘಟನೆಯ ನೇತೃತ್ವದಲ್ಲಿ ಈ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈಗ ಮತ್ತೆ ಇದೇ ಸಂಘಟನೆಯ ನೇತೃತ್ವದಲ್ಲಿ ಈ ಕೆಸರುಗದ್ದೆ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು, ಯುವಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.
ಪಂದ್ಯಾವಳಿಯಲ್ಲಿ ಮುಂಡರಗಿ, ನರಗುಂದ, ಶಿರಹಟ್ಟಿ, ರೋಣ ಸೇರಿದಂತೆ 20ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳ ತಂಡಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಎಬಿವಿಪಿಯ ಜಿಲ್ಲಾ ಸಂಚಾಲಕ ಸುರೇಶ ಬಾಳಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎ.ಎಚ್.ಕೋರಿ, ವೈ.ಕೆ.ಚೌಡಾಪುರ, ಎಸ್.ಎಫ್. ಗಡದ, ಎಬಿವಿಪಿಯ ನಗರ ಕಾರ್ಯದರ್ಶಿ ಉಮೇಶ ಎಂ. ಮುಂತಾದವರು ಉಪಸ್ಥಿತರಿದ್ದರು. ಗವಿಸಿದ್ದಯ್ಯ ಹಳ್ಳಿಕೇರಿಮಠ ಪ್ರಾರ್ಥಿಸಿದರು. ಎಬಿವಿಪಿಯ ನಗರಾಧ್ಯಕ್ಷೆ ತಾರಾ ಬಿ.ಎನ್. ಸ್ವಾಗತಿಸಿದರು. ರಫೀಕ ನಿರೂಪಿಸಿದರು. ಶಿಲ್ಪಾ ಬಂಡಿಹಾಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

