ಮಹಿಳೆ-ಪುರುಷರೆಂಬ ಭೇದ ಬೇಡ: ಶಿಲ್ಪಾ ಶೆಟ್ಟರ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 31
ಸಮಾಜದಲ್ಲಿ ಮಹಿಳೆ- ಪುರುಷರೆಂಬ ಭೇದ ತೊರೆದು ಎಲ್ಲರೂ ಸಮಾನರೆಂಬ ಮನೋಭಾವ ಹೊಂದಿ ಪುರುಷರು ಮಹಿಳೆಯರ ಸಾಧನೆ ಗುರುತಿಸಿದಾಗ ಮಾತ್ರ ಮಹಿಳಾ ಸಬಲೀಕರಣ ಸಾರ್ಥಕ ಪಡೆದುಕೊಳ್ಳುತ್ತದೆ ಎಂದು ಶಿಲ್ಪಾ ಶೆಟ್ಟರ್ ಹೇಳಿದರು.
ಸ್ಥಳೀಯ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ಭಾನುವಾರ ಗಜೇಂದ್ರಗಡ ಉಣಚಗೇರಿಯ ಸಮಸ್ತ ಮಹಿಳಾ ಮಂಡಳ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾಲ ಬದಲಾಗಿದೆ, ಮಹಿಳೆಯರ ಸಾಧನೆಗೆ ಇಂದು ಸಾಕಷ್ಟು ಅವಕಾಶಗಳಿವೆ. ಎಲ್ಲ ಪುರುಷರ ಶ್ರಮದ ಹಿಂದೆ ಪರಿಶ್ರಮದ ಸಾಕಾರಮೂರ್ತಿ ಎನಿಸಿಕೊಂಡು ತಾಳ್ಮೆಯ ಪ್ರತೀಕವಾಗಿರುವ ಮಹಿಳೆ ಇಂದು ಎಲ್ಲ ರಂಗಗಳಲ್ಲಿಯೂ ಮುಂದುವರಿಯುತ್ತಿದ್ದಾಳೆ. ಮಹಿಳೆ ಟಿ.ವಿ. ಸಂಸ್ಕೃತಿಯಿಂದ ಹೊರಬಂದ ಸ್ವಾವಲಂಬನೆಯಿಂದ ಸಹಬಾಳ್ವೆ ನಡೆಸಲು ಮುಂದಾಗಿ ಎಂದರು.
ಪಾರ್ವತಿ ಚೊಳಚಗುಡ್ಡ ಮಾತನಾಡಿ, ಸ್ತ್ರೀಯನ್ನು ಶರಣರ ಕಾಲದಿಂದಲೂ ಪೂಜ್ಯ ಭಾವನೆಯಿಂದ ಕಾಣಲಾಗುತ್ತಿದೆ. ಹೆಣ್ಣಿಗೆ ಅಗೌರವ ತೋರಿದರೆ ಗಂಡಿಗೆ ಕೇಡು ಕಟ್ಟಿಟ್ಟ ಬುತ್ತಿ. ಈ ದೆಸೆಯಲ್ಲಿ ಮಹಿಳೆಗೂ ಸಮಾನತೆ ಕಲ್ಪಿಸಿ ಸಮಾಜದಲ್ಲಿ ಗೌರವವಿತವಾಗಿ ಬಾಳಲು ಅವಕಾಶ ನೀಡಿ ಎಂದರು. ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಸರೋಜಿನಿ ಭಾರದ್ವಾಜ ಮಾತನಾಡಿ, ಮಹಿಳೆ ಕುಟುಂಬದ ಆಧಾರ ಸ್ತಂಭ ಸ್ವಾತಂತ್ರ್ಯ ಲಭಿಸಿ 6 ದಶಕ ಕಳೆದರೂ ಮಹಿಳಾ ಸಮುದಾಯ ಅಭಿವೃದ್ಧಿ ಮರೀಚಿಕೆಯಾಗಿದೆ. ರಾಜ್ಯ ಸರ್ಕಾರ ಕಳೆದ ನಾಲ್ಕುವರೆ ವರ್ಷದಲ್ಲಿ ಸಮಾಜದ ಪಿಡುಗಾಗಿ ಪರಿಣಮಿಸಿದ್ದ ದೇವದಾಸಿ ಪದ್ಧತಿ ನಿರ್ಮೂಲನೆ ಜತೆಗೆ ಅವರ ಕಲ್ಯಾಣಕ್ಕಾಗಿ ರು. 48 ಕೋಟಿ ಬಿಡುಗಡೆ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ನೇಹಾ ಮಹಿಳಾ ಮಂಡಳ ಅಧ್ಯಕ್ಷೆ ಸಂಯುಕ್ತಾ ಬಂಡಿ ಮಾತನಾಡಿ, ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹತ್ತು ಹಲವು ಯೋಜನೆ ರೂಪಿಸಿದೆ. ಯೋಜನೆಯ ಸದುಪಯೋಗ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬನ್ನಿ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹುಲಿಕಲ್ ನಟರಾಜ ಹಲವಾರು ಪವಾಡ ರಹಸ್ಯ ಬಯಲು ಮಾಡಿ ನೆರೆದ ಜನಸ್ತೋಮ ಅಚ್ಚರಿಗೊಳ್ಳುವಂತೆ ಮಾಡಿದರು. ನಂತರ ವಿವಿಧ ಮಹಿಳಾ ಮಂಡಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಿ.ಪಂ.ನ ಮಾಜಿ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ, ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ದೀಪಾ ಪಾಟೀಲ, ಡಾ. ಪಾರ್ವತಿ ಚವಡಿ, ರೇಶ್ಮಾ ಕೋಲಕಾರ, ಕವಿತಾ ಜಾಲಿಹಾಳ, ಬಸಮ್ಮ ಸಾಲಿಮಠ, ನಸ್ರೀನ್ ಒಂಟಿ ಮುಂತಾದವರು ಪಾಲ್ಗೊಂಡಿದ್ದರು. ದೀಪಾ ಗೋಯಲ್ ಸ್ವಾಗತಿಸಿದರು. ಅಕ್ಕಮ್ಮ ನೀರಲಗಿ ನಿರೂಪಿಸಿದರು. ಗಾಯತ್ರಿ ಕುಲಕರ್ಣಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

