ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ: ಪ್ರತಿಭಟನೆ
ಗದಗ: ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಪರ ಚುನಾವಣಾ ಪರಚಾರಕ್ಕೆ ತೆರಳಿದ್ದ ಮಹಿಳೆಯರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದೌರ್ಜನ್ಯ ಎಸಗಿ, ಕಲ್ಲು ತೂರಿದ ಘಟನೆ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಬುಧವಾರ ಸಂಜೆ ಜರುಗಿದೆ.
ಬಿಂಕದಕಟ್ಟಿ ಗ್ರಾಮವನ್ನು ಪ್ರವೇಶಿಸುವ ಹೊತ್ತಲ್ಲೇ 60ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿಎಸ್ಸಾರ್ ಪಕ್ಷದ ಮಹಿಳಾ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾದರು. ಈ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಮಾತ್ರ ಮಾಡಬೇಕು, ಅನ್ಯ ಪಕ್ಷಗಳು ಮಾಡುವಂತಿಲ್ಲ ಎಂದು ತಡೆಯೊಡ್ಡಿದ್ದಲ್ಲದೆ, ಕಲ್ಲು ತೂರಿದ್ದಾರೆ.
ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕಲ್ಲುತೂರಾಟ ಜರುಗಿದೆ. ಆನಂತರ ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರು ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಬಿಂಕದಕಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಚುನಾವಣಾಧಿಕಾರಿ ಇಸಾಯುದ್ದೀನ ಗದ್ಯಾಳ ಹಾಗೂ ಉಪಚುನಾವಣಾಧಿಕಾರಿ ಜಯಶ್ರಿ ಶಿಂತ್ರೆ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಚರ್ಚಿಸಿದರು.
ನಮ್ಮ ಕಾರ್ಯಕರ್ತರ ಮೇಲೆ ಗದಗ-ಬೆಟಗೇರಿ ಅವಳಿ ನಗರ ಹಾಗೂ ತಾಲೂಕಿನ ಹಲವು ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ತಪ್ಪಿತಸ್ಥರ ವಿರುದ್ಧ ಇಲ್ಲಿಯ ವರೆಗೂ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಗೂಂಡಾ ವರ್ತನೆ ದಿನೇ ದಿನೇ ಹೆಚ್ಚಾಗಿದೆ. ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ಚುನಾವಣಾ ಆಯೋಗ ಪಾರದರ್ಶಕ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಕೂಡಲೇ ನಗರದ ಮಂಜುನಾಥ ನಗರ, ಗಾಂಧಿನಗರ, ಕನ್ಯಾಳ ಅಗಸಿ, ಡಿ.ಸಿ. ಮಿಲ್ ರಸ್ತೆ, ಖಾನತೋಟ, ಒಕ್ಕಲಗೇರಿ, ವಡ್ಡರಗೇರಿ ಹಾಗೂ ತಾಲೂಕಿನ ಬಿಂಕದಕಟ್ಟಿ, ಹುಲಕೋಟಿ, ಅಂತೂರು-ಬೆಂತೂರು, ಕುರ್ತಕೋಟಿ, ಅಸುಂಡಿ ಮುಂತಾದ ಗ್ರಾಮಗಳನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ, ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ಗೂಂಡಾಗಿರಿ ಮಾಡಿದವರನ್ನು ಬಂಧಿಸಬೇಕು ಅಂದು ಮನವಿ ಮಾಡಿದರು. ತಡರಾತ್ರಿಯ ವರೆಗೂ ಪ್ರತಿಭಟನೆ ಜರುಗಿತು.
ಅನಿಲ ಮೆಣಸಿನಕಾಯಿ, ವೆಂಕಟೇಶ ದಾಸರ, ರವಿ ಲಕ್ಕುಂಡಿ, ಸುರೇಶ ಬೆಳಂಕರ, ಬಾಬಾಜಾನ ಬಳಗಾನೂರ, ಬಸವರಾಜ ಬೆಳದಡಿ, ಮಂಜುನಾಥ ಅಗಸಿಮನಿ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

