ಗದಗ

ನಾಲ್ಕೂ ಸ್ಥಾನ ಗೆದ್ದು ಸೇಡು ತೀರಿಸಿಕೊಂಡ ಕಾಂಗ್ರೆಸ್

Published On :

ಗದಗ: ಕಳೆದ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ಬಿಜೆಪಿ, ಆಂತರಿಕ ಕಚ್ಚಾಟ, ಅಧಿಕಾರದಲ್ಲಿದ್ದವರ ವರ್ತನೆ, ಅವರು ಸಾರ್ವಜನಿಕರೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ, ನಾವು ಮಾಡಿದ್ದೇ ಸರಿ ಎನ್ನುವ ಮನೋಭಾವ, ಸಾರ್ವಜನಿಕರಿಂದ ದೂರವಾದದ್ದು ಬಿಜೆಪಿ ಮುಳುವಾಯಿತು.
ಬುಧವಾರ ಮತ ಎಣಿಕಾ ಕೇಂದ್ರಕ್ಕೆ ಬಂದಿದ್ದ ಹಲವಾರು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳೇ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಹೀನಾಯವಾಗಿ ಸೋಲುಂಡ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಈ ಮಟ್ಟದ ಸೋಲು ಅನುಭವಿಸಲು ಕ್ಷೇತ್ರದ ಪ್ರತಿನಿಧಿಗಳೇ ಕಾರಣ. ಅವರು ಅಧಿಕಾರದಲ್ಲಿದ್ದಾಗ ಆನೆ ನಡೆದಿದ್ದೇ ಹಾದಿ ಎಂಬಂತೆ ವರ್ತಿಸಿದರು. ಜನತೆ ನಮಗೆ ಅಧಿಕಾರ ಕೊಟ್ಟು ನೋಡಿದ್ದರು. ನಾವು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ, ನಾಯಕರ ವರ್ತನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕಾರ್ಯಕರ್ತನೋರ್ವ 'ಕನ್ನಡಪ್ರಭ'ಕ್ಕೆ ಹೇಳಿದ್ದಾನೆ.
ಸಚಿವದ್ವಯರಿಗೆ ಸೋಲು: ಕಳಕಪ್ಪ ಬಂಡಿ 18,165 ಸಾವಿರ ಮತಗಳ ಅಂತರದಿಂದ ಹೀನಾಯವಾಗಿ ಸೋಲುಂಡಿದ್ದು, ಜಿಲ್ಲೆಯಲ್ಲಿ ಬಿಜೆಪಿ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಸಿ.ಸಿ. ಪಾಟೀಲ್ ಕೂಡ 8,585 ಮತಗಳ ಅಂತರದಿಂದ ಸೋಲುಂಡಿದ್ದಾರೆ. ಗದಗ ಕ್ಷೇತ್ರದಲ್ಲಿ ಶ್ರೀಶೈಲಪ್ಪ ಬಿದರೂರ ಹಾಗೂ ಶಿರಹಟ್ಟಿಯಲ್ಲಿ ರಾಮಣ್ಣ ಲಮಾಣಿ ಈ ಮೂವರು ಮೊದಲು ಕೆಜೆಪಿ, ಬಳಿಕ ಬಿಜೆಪಿ ಎಂದು ಜಪ ಮಾಡಿದರು. ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಸಿದರು. ಹೀಗೆ ಪದೇ ಪದೇ ನಿಲುವು ಬದಲಿಸಿದ್ದೇ ಇವರ ಸೋಲಿಗೆ ಕಾರಣವಾಗಿದೆ.
ಮುದುಡಿದ ಕಮಲ: 2008ರ ಕ್ಷೇತ್ರ ಮರುವಿಂಗಡಣೆಯ ಅನಂತರ ನಡೆದ ಮೊದಲ ಚುನಾವಣೆಯಲ್ಲಿ ನಾಲ್ಕೂ ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿ, ಅನಂತರ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಉತ್ತಮ ಸಾಧನೆಯನ್ನೇ ಮಾಡಿತ್ತು. ಜಿಪಂ, ತಾಪಂ, ಗ್ರಾಪಂ, ವಿಧಾನ ಪರಿಷತ್ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಉತ್ತಮ ಸಾಧನೆ ಮಾಡಿತ್ತು. ಆದರೆ ಅನಂತರ ಬಿಜೆಪಿಯಲ್ಲಿ ನಡೆದ ಬೆಳವಣಿಗೆಗಳು ಜಿಲ್ಲೆಯ ಮತದಾರರ ಮೇಲೆ  ಪರಿಣಾಮ ಬೀರಿತು. ಈ ಬಾರಿ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿಸಂಪೂರ್ಣ ನೆಲಕಚ್ಚಿದೆ.
-ಅಜೀಜಅಹ್ಮದ ಬಳಗಾನೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.