ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ನೀಡಿ: ಎಚ್ಕೆ
ಕನ್ನಡಪ್ರಭ ವಾರ್ತೆ, ಗದಗ, ಮೇ 26
ಬಡವರಿಗೆ ಮತ್ತು ಕೆಳವರ್ಗದ ಜನಕ್ಕೆ ಆಧುನಿಕ ಆಸ್ಪತ್ರೆಗಳ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಹಣಕಾಸಿನ ತೊಂದರೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳೂ ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ನೀಡುವಂತಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಭಾನುವಾರ ನಗರದ ಸಮನ್ವಯ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್ ಆಶ್ರಯದಲ್ಲಿ ಮಹಾತ್ಮ ಗಾಂಧಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾ ಡಿದರು.
ಸರ್ಕಾರವು ಬಡವರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವಂತೆ ಯಶಸ್ವಿನಿ ಯೋಜನೆ ಜಾರಿಗೆ ತಂದಿದೆ ಅದು ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಸೇರಿದಂತೆ ಅನೇಕ ರೋಗಗಳಿಗೆ ಶಸ್ತ್ರ ಚಿಕಿತ್ಸೆ ಸಲುವಾಗಿ ಇರುವಂತಹ ಯೋಜನೆಯಾಗಿದೆ. ಈಗಾಗಲೇ ಜನತೆ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ನೂತನ ವಿಧಾನಗಳ ಜತೆಗೆ ಉತ್ತಮ ಸೌಲಭ್ಯ ಇರುವ ಆಸ್ಪತ್ರೆಗಳ ಖರ್ಚುಗಳು ಕಡಿಮೆ ಇದ್ದರೆ ಬಡ ರೋಗಿಗಳಿಗೆ ಅನುಕೂಲವಾಗಲಿದೆ. ವಿದೇಶಗಳಲ್ಲಿರುವ ಮೆಡಿಕಲ್ ಇನ್‌ಶ್ಯೂರನ್ಸ್ ಯೋಜನೆವು ನಮ್ಮ ರಾಜ್ಯದಲ್ಲಿಯೂ ಜಾರಿಯಾಗಬೇಕು. ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಆವಶ್ಯವಾಗಿದೆ. ವೈದ್ಯ ವೃತ್ತಿಯು ಬಹಳ ಗೌರವಯುತವಾದದ್ದು. ವೈದ್ಯರು ರೋಗಿಗಳಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡುವುದು ಆವಶ್ಯವಾಗಿದೆ. ಅದಕ್ಕಾಗಿ ಗದಗ ಜಿಲ್ಲೆಯಲ್ಲಿ ಎಲ್ಲ ವೈದ್ಯಕೀಯ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ಸಿಗುವಂತೆ ಮಾಡಿದ ಮಹಾತ್ಮ ಗಾಂಧಿ ಆಸ್ಪತ್ರೆಯ ವೈದ್ಯರಿಗೆ ಅಭಿನಂದನೆ. ಈ ಆಸ್ಪತ್ರೆಯಲ್ಲಿನ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಶೇಖರ ಪಾಟೀಲ ಮಾತನಾಡಿ, ಜೀವನದಲ್ಲಿ ದುಶ್ಚಟ ಕಲಿಯಬಾರದು. ನಾವುಗಳು ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಅಂದಾಗ ಮನುಷ್ಯನು ಜೀವನದಲ್ಲಿ ಹೆಚ್ಚು ದಿನ ಬಾಳಲು ಸಾಧ್ಯ. ಈಗ ಬದಲಾಗುತ್ತಿರುವ ಜೀವನ ಶೈಲಿಯಿಂದ, ಪರಿಸರ ಮಾಲಿನ್ಯದಿಂದ, ತಂಬಾಕು, ಗುಟ್ಕಾ ಸೇವನೆ, ಮದ್ಯ ಸೇವನೆಯಿಂದ ವಿವಿಧ ರೀತಿಯ ರೋಗಗಳು ಬರುತ್ತಿವೆ. ಇದಕ್ಕಾಗಿ ಎಚ್ಚರಿಕೆಯಿಂದ ನಮ್ಮ ಜೀವನ ಶೈಲಿ ರೂಢಿಸಿಕೊಂಡು ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡು ಜೀವನ ನಡೆಸಬೇಕು ಎಂದರು.
ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ರೋಗಗಳನ್ನು ಕಂಡು ಹಿಡಿಯುವ ಯಂತ್ರೋಪಕರಣಗಳು ಲಭ್ಯವಾಗಿದ್ದರಿಂದ ಗ್ರಾಮೀಣ ಪ್ರದೇಶಗಳ ರೋಗಿಗಳು ಯಂತ್ರಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಡಾ. ಪ್ರಕಾಶ ಸಂಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಶಾಸಕ ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಸಿಂಡಿಕೇಟ್ ಬ್ಯಾಂಕಿನ ಉಪ ಮಹಾಪ್ರಬಂಧಕ ಸ್ಟೀವನ್ ವಾಸ್, ಮಾಜಿ ಶಾಸಕ ಡಿ.ಆರ್. ಪಾಟೀಲ, ಡಾ. ಗಣೇಶರಾವ್.ಕೆ, ಡಾ. ವಿಜಯ ನೀಲಗುಂದ, ಅನಿತಾ ಧರಣಾ, ಪೂರ್ಣಿಮಾ ಗಣೇಶ, ಶ್ವೇತಾ ಸಂಕನೂರ, ಜ್ಯೋತಿ ನೀಲಗುಂದ ಸೇರಿದಂತೆ ಆಸ್ಪತ್ರೆಯ ಎಲ್ಲ ತಜ್ಞ ವೈದ್ಯರು ಇದ್ದರು.
ಡಾ. ಪ್ರಕಾಶ ಧರಣಾ ಸ್ವಾಗತಿಸಿದರು. ದತ್ತುಪ್ರಸನ್ನ ಪಾಟೀಲ ನಿರೂಪಿಸಿದರು. ಡಾ. ಗಣೇಶರಾವ್ ಕುಂದಾಪುರ ವಂದಿಸಿದರು.
ಸರ್ಕಾರವು ಬಡವರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವಂತೆ ಯಶಸ್ವಿನಿ ಯೋಜನೆ ಜಾರಿಗೆ ತಂದಿದೆ ಅದು ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಸೇರಿದಂತೆ ಅನೇಕ ರೋಗಗಳಿಗೆ ಶಸ್ತ್ರ ಚಿಕಿತ್ಸೆ ಸಲುವಾಗಿ ಇರುವಂತಹ ಯೋಜನೆಯಾಗಿದೆ. ಈಗಾಗಲೇ ಜನತೆ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
- ಎಚ್.ಕೆ. ಪಾಟೀಲ, ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

