ಗದಗ

ಕೈಗಾರಿಕೆ ಬೆಳವಣಿಗೆಯಿಂದ ಕೈಮಗ್ಗಕ್ಕೆ ಹಿನ್ನಡೆ

Published On :

ಕನ್ನಡಪ್ರಭ ವಾರ್ತೆ, ಗದಗ, ನ. 7
ಕೈಗಾರಿಕೆಗಳು ಹೆಚ್ಚು ಬೆಳವಣಿಗೆ ಹೊಂದಿದಂತೆಲ್ಲ ಕೈಮಗ್ಗದ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಕೈಮಗ್ಗ ನೇಕಾರರು ಸಂಕಷ್ಟ ಅನುಭವಿಸುವಂತಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ನರಸಾಪುರದಲ್ಲಿನ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ ಭಾರತ ಸರ್ಕಾರದ ಜವಳಿ ಮಂತ್ರಾಲಯ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಗುರುವಾರ ಜರುಗಿದ ಕೈಮಗ್ಗ ನೇಕಾರರಿಗೆ ಕ್ರೆಡಿಟ್ ಕಾರ್ಡ್ ಯೋಜನೆಯ ಕುರಿತು ಹಮ್ಮಿಕೊಂಡ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮುಖ್ಯವಾಹಿನಿಯಲ್ಲಿದ್ದ ಕೈಮಗ್ಗ ಉದ್ಯಮ, ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆ ಬೆಳವಣಿಗೆಯಿಂದಾಗಿ ಹಿನ್ನಡೆ ಅನುಭವಿಸುವಂತಾಗಿದೆ. ಹಾಗಾಗಿ ಉದ್ಯಮದ ಪುನಶ್ಚೇತನದ ಅವಶ್ಯಕತೆಯಿದೆ. ಉದ್ಯಮಕ್ಕಾಗಿ ಬಂಡವಾಳವಿಲ್ಲದೇ ಎಷ್ಟೋ ಕುಟುಂಬಗಳು ಕೈಮಗ್ಗ ಉದ್ಯಮದಿಂದ ಹಿಂದೆ ಸರಿಯುವಂತಾಗಿದೆ ಎಂದರು. ಗುಡಿ ಕೈಗಾರಿಕೆಗಳನ್ನು ಪೋಷಿಸುವ ನಿಟ್ಟಿನಲ್ಲಿ ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗವನ್ನು ಪ್ರತಿಯೊಬ್ಬರೂ ಮಾಡಿಕೊಳ್ಳಬೇಕು. ಸರ್ಕಾರದಿಂದ ಉದ್ಯಮ ಪ್ರಾರಂಭಿಸಲು ರಿಯಾಯ್ತಿ ದರದಲ್ಲಿ ನೀಡುವ ಸಾಲ ಸೌಲಭ್ಯವನ್ನು ಅಗತ್ಯಕ್ಕೆ ತಕ್ಕಂತೆ ಪಡೆದುಕೊಳ್ಳಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಗುಣ ಬೆಳೆಸಿಕೊಳ್ಳಬೇಕು. ಇದರಿಂದಾಗಿ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯವಾಗುತ್ತದೆ.
ಸೌಲಭ್ಯಗಳು ಹೆಚ್ಚಾದಂತೆ ಇಂದು ಜನಸಾಮಾನ್ಯರಲ್ಲಿ ಶ್ರಮ ಸಂಸ್ಕೃತಿ ಕಡಿಮೆಯಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಕಾಯಕದಲ್ಲಿ ಪರಿಶ್ರಮ ರೂಢಿಸಿಕೊಳ್ಳಬೇಕು. ಬ್ಯಾಂಕ್‌ಗಳಲ್ಲಿ ಇಂದು ನೇಕಾರರು ಸಾಲಸೌಲಭ್ಯ ಪಡೆದುಕೊಳ್ಳುಲು ಹರಸಾಹಸ ಪಡಬೇಕಾಗಿದೆ. ಹಾಗಾಗಿ ಬ್ಯಾಂಕ್‌ಗಳು ನೇಕಾರರಿಗೆ ಕೇಂದ್ರ ಸರ್ಕಾರವೇ ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದರಿಂದಾಗಿ ಪ್ರಾಮಾಣಿಕವಾಗಿ ಸೌಲಭ್ಯಕ್ಕೆ ಅರ್ಹರಿರುವ ನೇಕಾರರಿಗೆ ಸೌಲಭ್ಯ ತಲುಪಲು ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಕೈಮಗ್ಗ ಹಾಗೂ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ ಕುಲಕರ್ಣಿ ಮಾತನಾಡಿ, ನೇಕಾರರು ಉದ್ಯಮದಲ್ಲಿ ಬೆಳವಣಿಗೆ ಹೊಂದುವಂತೆ ಪ್ರೋತ್ಸಾಹಿಸಲು ರು. 25 ಸಾವಿರದಿಂದ 2 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ವ್ಯವಹಾರದ ಬೆಳವಣಿಗೆ ದೃಷ್ಟಿಯಿಂದ ನೀಡುವ ಈ ಸೌಲಭ್ಯವನ್ನು ಕೈಮಗ್ಗ ಉದ್ಯಮ ಬೆಳವಣಿಗೆಗೆ ಮಾತ್ರ ಬಳಸಿಕೊಳ್ಳಬೇಕು. ಈಗಾಗಲೇ ಜಿಲ್ಲೆಯಲ್ಲಿ ಕ್ರೆಡಿಟ್ ಕಾರ್ಡ್‌ಗಾಗಿ 149 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಇವುಗಳಲ್ಲಿ ಶೀಘ್ರದಲ್ಲಿಯೇ 39 ಫಲಾನುಭವಿಗಳ ಕಾರ್ಡ್ ವಿತರಿಸಲಾಗುವುದು ಎಂದರು.
ಕರ್ನಾಟಕ ಕೈಮಗ್ಗ ಹಾಗೂ ಅಭಿವೃದ್ಧಿ ನಿಗಮದ ಆಡಳಿತಾಧಿಕಾರಿ ರಾಮಚಂದ್ರ ತಡಕನಹಳ್ಳಿ ಮಾತನಾಡಿ, ನಶಿಸುತ್ತಿರುವ ಕೈಮಗ್ಗ ಉದ್ಯಮಕ್ಕೆ ಉತ್ತೇಜನ ನೀಡುವ ಮೂಲಕ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಲು ಸರ್ಕಾರ ಕೈಮಗ್ಗ ಅಭಿವೃದ್ಧಿಗೆ ಯೋಜನೆ ಜಾರಿಗೆ ತಂದಿದೆ. ಕೈಮಗ್ಗ ಕ್ಷೇತ್ರದಲ್ಲಿ ಈತನಕ ಶೇ. 25ರಷ್ಟು ಮಾತ್ರ ಪ್ರಗತಿಯಾಗಿದ್ದು, ಇನ್ನೂ ಹೆಚ್ಚಿನ ಪ್ರಗತಿ ಹೊಂದಬೇಕಿದೆ. ಹಾಗಾಗಿ ನೇಕಾರರು ಪ್ರತಿಯೊಂದು ಯೋಜನೆಗಳ ಸದುಪಯೋಗ ಮಾಡಿಕೊಂಡು ಕೈಮಗ್ಗ ಉದ್ಯಮ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಸರ್ಕಾರದದಿಂದ ನೇಕಾರರಿಗೆ ಇರುವ ಯೋಜನೆಗಳು ಹಾಗೂ ಸೌಲಭ್ಯದ ಕುರಿತು ಹಾಗೂ ಕ್ರೆಡಿಟ್ ಕಾರ್ಡ್‌ನ ಮಹತ್ವ ಕುರಿತು ಕೈಮಗ್ಗ ನೇಕಾರರಿಗೆ 1 ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರದಲ್ಲಿ ಜಿಲ್ಲೆಯ ರೋಣ, ಲಕ್ಷ್ಮೇಶ್ವರ, ಶಿರಹಟ್ಟಿ, ನರಗುಂದ ಸೇರಿದಂತೆ ವಿವಿಧ ಪಟ್ಟಣಗಳ ನೇಕಾರರು ಹಾಗೂ ಸ್ವಸಹಾಯ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮದ ಅಧಿಕಾರಿ ಎಂ.ಆರ್.ಎಸ್. ರಾಘವನ್, ನಬಾರ್ಡ್‌ನ ಉಪವಿಭಾಗ ವ್ಯವಸ್ಥಾಪಕ ಶ್ರವಣಕುಮಾರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ನರಸಿಂಹಲು ಉಪಸ್ಥಿತರಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮುಖ್ಯವಾಹಿನಿಯಲ್ಲಿದ್ದ ಕೈಮಗ್ಗ ಉದ್ಯಮ, ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆ ಬೆಳವಣಿಗೆಯಿಂದಾಗಿ ಹಿನ್ನಡೆ ಅನುಭವಿಸುವಂತಾಗಿದೆ. ಹಾಗಾಗಿ ಉದ್ಯಮದ ಪುನಶ್ಚೇತನದ ಅವಶ್ಯಕತೆಯಿದೆ. ಉದ್ಯಮಕ್ಕಾಗಿ ಬಂಡವಾಳವಿಲ್ಲದೇ ಕುಟುಂಬಗಳು ಕೈಮಗ್ಗ ಉದ್ಯಮದಿಂದ ಹಿಂದೆ ಸರಿಯುವಂತಾಗಿದೆ. ಗುಡಿ ಕೈಗಾರಿಕೆಗಳನ್ನು ಪೋಷಿಸುವ ನಿಟ್ಟಿನಲ್ಲಿ ಇಂದು ರಾಜ್ಯ-ಕೇಂದ್ರ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗವನ್ನು ಪ್ರತಿಯೊಬ್ಬರೂ ಮಾಡಿಕೊಳ್ಳಬೇಕು.
-ಎನ್.ಎಸ್. ಪ್ರಸನ್ನಕುಮಾರ,
ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.