ಗದಗ

ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ಎಲ್ಲ ಹೋರಾಟಕ್ಕೂ ಸಿದ್ಧ

Published On :

 ಕನ್ನಡಪ್ರಭ ವಾರ್ತೆ, ಗದಗ, ನ. 11
ರಾಷ್ಟ್ರದಲ್ಲಿಯೇ ಅತ್ಯಮೂಲ್ಯ ಸಸ್ಯಕಾಶಿಗಳನ್ನು ಒಳಗೊಂಡ ಕಪ್ಪತ್ತಗುಡ್ಡದ ಸಂರಕ್ಷಣೆಗಾಗಿ ಸದನದ ಒಳಗೆ ಹಾಗೂ ಸದನದ ಹೊರಗೆ ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧವಿರುವುದಾಗಿ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಅವರು ಈಚೆಗೆ ಡೋಣಿ ಗ್ರಾಮದ ನಂದಿವೇರಿ ಮಠಕ್ಕೆ ಭೇಟಿ ನೀಡಿ ಕಪ್ಪತ್ತಗುಡ್ಡದ ಕುರಿತು ನಂದಿವೇರಿ ಶಿವಕುಮಾರ ಶ್ರೀಗಳಿಂದ ಅಮೂಲ್ಯ ಮಾಹಿತಿ ಪಡೆದು, ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಪ್ಪತ್ತಗುಡ್ಡದ ಮೇಲೆ ಹಾಗೂ ಇಲ್ಲಿರುವ ಖನಿಜ ಸಂಪತ್ತಿನಮೇಲೆ ಹಲವಾರು ಬಂಡವಾಳ ಶಾಹಿಗಳ ದೃಷ್ಟಿ ಬಿದ್ದಿದೆ. ಈ ನಿಟ್ಟಿನಲ್ಲಿ ನಾನು ಈಗಾಗಲೇ ಕಳೆದ ಬಾರಿ ನಡೆದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಕಪ್ಪತ್ತಗುಡ್ಡದ ಸುತ್ತಮುತ್ತಲಿನಲ್ಲಿ ನಡೆಯುವ ಅಕ್ರಮ ಗಣಿ ಹಾಗೂ  ಖನೀಜ ಸಂಪತ್ತಿನ ಲೂಟಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಪ್ಪತ್ತಗುಡ್ಡದಲ್ಲಿ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ್ದಾರೆ.
ಆದಾಗ್ಯೂ ಕೆಲ ದುಷ್ಟ ಶಕ್ತಿಗಳು ಗಣಿಗಾರಿಕೆ ಅಮೂಲ್ಯವಾದ ಸಸ್ಯಗಳನ್ನು ಲೂಟಿ ಮಾಡುವುದು ನಿರಂತರ ನಡೆದಿದೆ ಎಂಬ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಇಂದು ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಕಪ್ಪತ್ತಗುಡ್ಡಕ್ಕೆ ಆಗಮಿಸಿದ್ದೇನೆ. ಕಪ್ಪತ್ತಗುಡ್ಡದಲ್ಲಿರುವ ಅತ್ತಿಕಟ್ಟಿ ಗ್ರಾಮದಲ್ಲಿ ಬಲ್ಡೋಟಾ ಕಂಪನಿಯವರು ನಡೆಸುವ ಗೋಲ್ಡ್ ಮೈನ್ಸ್‌ನಿಂದ ಸಾಕಷ್ಟು ಪರಿಸರಕ್ಕೆ ಹಾನಿಯಾಗುತ್ತಿದೆ. ಅಮೂಲ್ಯವಾದ ಭೂಮಿಯ ಒಳಭಾಗದಲ್ಲಿ ಹಲವಾರು ದುಷ್ಪರಿಣಾಮ ಬೀರುವ ರಾಸಾಯನಿಕಗಳು ಸೇರ್ಪಡೆಯಾಗುವುದರಿಂದ ಭೂಮಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವಿದೆ.
ಈ ವಿಷಯವನ್ನು ಬೆಳಗಾವಿಯಲ್ಲಿ ನಡೆಯವ ಅಧಿವೇಶನದಲ್ಲಿ ಚರ್ಚಿಸುವುದಾಗಿ ಶ್ರೀಗಳಿಗೆ ಹೊರಟ್ಟಿ ಹೇಳಿದರು. ಅಲ್ಲದೇ ಈ ಕುರಿತು ಪ್ರಶ್ನೆಗಳನ್ನೂ ಸದನಕ್ಕೆ ಕಳುಹಿಸಿದ್ದಾಗಿ ಶ್ರೀಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಡಾ. ಬಸವರಾಜ ಧಾರವಾಡ, ಎಸ್.ಟಿ. ಬ್ಯಾಕೋಡ, ಎಸ್.ಎಸ್. ಗಡ್ಡದ, ಆರ್.ಎಸ್. ವಸ್ತ್ರದ ಜತೆಗೆ ದೋಣಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.