ಗದಗ

ಜಿಪಂ ಉಪಚುನಾವಣೆ: ಬಿಜೆಪಿ ಜಯಭೇರಿ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಅ. 1
ತಾಲೂಕಿನ ಹಮ್ಮಿಗಿ ಜಿಪಂ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು, ಬಿಜೆಪಿ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಮತ್ತೆ ಜಯಭೇರಿ ಬಾರಿಸಿದ್ದಾರೆ.
ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಹೇಮಗಿರೀಶ ಹಾವಿನಾಳ ಅವರ ರಾಜಿನಾಮೆಯಿಂದ ಖಾಲಿಯಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆ ಇದಾಗಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಗೆ ಇಲ್ಲಿನ ಮಿನಿವಿಧಾನಸೌಧದಲ್ಲಿ ಮತ ಎಣಿಕೆ ನಡೆಯಿತು.
ಜೆಡಿಎಸ್ ಅಭ್ಯರ್ಥಿಯಾಗಿ ವಿರೂಪಾಕ್ಷಪ್ಪ ಜೋಗೇರ, ಕಾಂಗ್ರೆಸ್ ಅಭ್ಯರ್ಥಿಯಾಗಿ ರುದ್ರಗೌಡ ಪಾಟೀಲ, ಬಿಜೆಪಿ ಅಭ್ಯರ್ಥಿಯಾಗಿ ಹೇಮಗಿರೀಶ ಹಾವಿನಾಳ ಅವರೇ ಸ್ಪರ್ಧಾ ಕಣದಲ್ಲಿದ್ದರು. 8971 ಮತಗಳನ್ನು ಪಡೆಯುವ ಮೂಲಕ ಹೇಮಗಿರೀಶ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. 7580 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ರುದ್ರಗೌಡ ಪಾಟೀಲ ಎರಡನೇ ಸ್ಥಾನದಲ್ಲಿದ್ದು, 377 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್‌ನ ವಿರೂಪಾಕ್ಷಪ್ಪ ಜೋಗೇರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ವಿಜಯೋತ್ಸವ: ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಹಾವಿನಾಳ ಅಭಿಮಾನಿಗಳು ಗುಲಾಲು ಹಾಕಿಕೊಂಡು, ಪಟಾಕಿಸಿಡಿಸಿ ವಿಜಯೋತ್ಸವ ಆಚರಿಸಿದರು. ನಂತರ ಹಾವಿನಾಳ ಹಾಗೂ ಮಾಜಿ ಶಾಸಕ ರಾಮಣ್ಣ ಲಮಾಣಿ, ಶಿರಹಟ್ಟಿ ಮತಕ್ಷೇತ್ರದ ಮಾಜಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅವರೊಂದಿಗೆ ಜಗದ್ಗುರು ಅನ್ನದಾನೀಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ರಂಗಪ್ಪ ಕ್ಯಾದಿಗಿಹಳ್ಳಿ, ಅಂದಪ್ಪ ಮೇಟಿ, ಸೀತಾರಾಮರಾಜು, ದೇವಪ್ಪ ಕಂಬಳಿ, ಶಹರ ಘಟಕದ ಬಿಜೆಪಿ ಅಧ್ಯಕ್ಷ ರಜನೀಕಾಂತ ದೇಸಾಯಿ, ಆರ್.ಎಂ. ತಪ್ಪಡಿ, ಎಸ್.ವಿ.ಪಾಟೀಲ, ಗುಡದಪ್ಪ ದೇಸಾಯಿ, ಬಸವರಾಜ ಮುಂಡವಾಡ, ಪರಶುರಾಮ ಸುಣಗಾರ, ಮಂಜುನಾಥ ಕಾಗನೂರ, ಕರಿಯಪ್ಪ ಹಡಗಲಿ, ಮಲ್ಲಿಕಾರ್ಜುನ ಬಹದ್ದೂರದೇಸಾಯಿ, ಈರಣ್ಣ ಭಜಂತ್ರಿ, ರಮೇಶ ಹುಳಕಣ್ಣವರ, ರಾಜಶೇಖರ ಮೇಟಿ, ಶಂಕರಗೌಡ ಪಾಟೀಲ, ಸುರೇಶ ಮಾಳೆಕೊಪ್ಪ, ಸಸಿಮಠ, ಅಂದಪ್ಪ ಉಳ್ಳಾಗಡ್ಡಿ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆ: ಲಮಾಣಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಅ. 1

ಮುಂಡರಗಿ ತಾಲೂಕಿನ ಹಮ್ಮಿಗಿ ಜಿಪಂ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೇಮಗಿರೀಶ ಹಾವಿನಾಲ ಗೆಲವು ಸಾಧಿಸಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಹೇಳಿದ್ದಾರೆ.
ಅವರು ಮಂಗಳವಾರ ಹಮ್ಮಿಗಿ ಜಿಪಂ ಉಪಚುನಾವಣೆಯ ನಂತರ ಹಾವಿನಾಳ ಅವರ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಧಿಕಾರಕ್ಕೆ ಬಂದು 5 ತಿಂಗಳ ಕಳೆದರೂ ಒಂದೇ ಒಂದು ಹೊಸ ಯೋಜನೆಯನ್ನು ರೂಪಿಸದ ಕಾಂಗ್ರೆಸ್ ಪಕ್ಷಕ್ಕೆ ಬೇಸತ್ತು ಈ ಭಾಗದ ಮತದಾರ ಪ್ರಭು ನಮ್ಮ ಪಕ್ಷದ ಅಭ್ಯರ್ಥಿ ಹಾವಿನಾಳ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ ಎಂದರು.
ಕರಬಸಪ್ಪ ಹಂಚಿನಾಳ ಮಾತನಾಡಿ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಎಲ್ಲರೂ ಬಂದು ಪ್ರಚಾರ ಮಾಡಿದರೂ ಇಲ್ಲಿ ಬಿಜೆಪಿ ಅಭ್ಯರ್ಥಿಯ ಪ್ರಾಬಲ್ಯವನ್ನು ಕುಗ್ಗಿಸಲು ಆಗಲಿಲ್ಲ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತ ಮತದಾರರು ಕಾಂಗ್ರೆಸ್‌ಗೆ ಬುದ್ಧಿ ಕಲಿಸಿದ್ದಾರೆ. ಇದು ಕೇವಲ ಹಾವಿನಾಳ ಗೆಲವು ಮಾತ್ರವಲ್ಲ ನಮ್ಮೆಲ್ಲ ಕಾರ್ಯಕರ್ತರ ಗೆಲವಾಗಿದೆ ಎಂದರು.
ರಂಗಪ್ಪ ಕ್ಯಾದಿಗಿಹಳ್ಳಿ ಮಾತನಾಡಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸದಿದ್ದರೆ ನಾನು ರಾಜಕೀಯ ಜೀವನದಿಂದ ಹಿಂದೆ ಸರಿಯುವುದಾಗಿ ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ತಿಳಿಸಿದ್ದರು. ತಾವೊಬ್ಬ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರೆ ಇದೀಗ ಕಾಂಗ್ರೆಸ್ ಅಭ್ಯರ್ಥಿಯ ಸೋಲನ್ನು ಮುಂದಿಟ್ಟುಕೊಂಡು ರಾಜಕೀಯದಿಂದ ಹಿಂದೆ ಸರಿಯಬೇಕು ಎಂದರು.
ನೂತನ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಸೀತಾರಾಮರಾಜು, ಅಂದಪ್ಪ ಮೇಟಿ, ಶಹರ ಅಧ್ಯಕ್ಷ ರಜನೀಕಾಂತ ದೇಸಾಯಿ, ಆರ್.ಎಂ. ತಪ್ಪಡಿ, ಎಸ್.ವಿ. ಪಾಟೀಲ, ಗುಡದಪ್ಪ ದೇಸಾಯಿ, ಸಸಿಮಠ,ಶಂಕರಗೌಡ ಪಾಟೀಲ, ಸುರೇಶ ಮಾಳೆಕೊಪ್ಪ ಉಪಸ್ಥಿತರಿದ್ದರು.

ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ
ಶಿರಹಟ್ಟಿ:
ಮುಂಡರಗಿ ತಾಲೂಕಿನ ಹಮ್ಮಿಗಿ ಜಿಪಂ ಕ್ಷೇತ್ರದ ಮರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಗೆಲುವು ಸಾಧಿಸಿದ್ದು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಮಂಗಳವಾರ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಕೇವಲ 4 ತಿಂಗಳಲ್ಲಿಯೇ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದೆ. ಈ ಉಪ ಚುನಾವಣೆಯಲ್ಲಿ ಆ ಕ್ಷೇತ್ರಗಳ ಜನರು ಬಿಜೆಪಿ ನೀತಿ ಸಿದ್ಧಾಂತಗಳನ್ನು ಒಪ್ಪಿ ಆಶೀರ್ವದಿಸಿದ್ದಾರೆ. ಈ ಫಲಿತಾಂಶ ಬರಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.     
ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ನಾಗರಾಜ ಕುಲಕರ್ಣಿ, ಜಿಲ್ಲಾ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆರ್.ಡಿ. ಕೆಂಚಕ್ಕನವರ, ಪಪಂ ಸದಸ್ಯ ಗೂಳಪ್ಪ ಕರಿಗಾರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಧರ ರಾನಡೆ, ಉಡಚಪ್ಪ ತಳವಾರ, ಸುರೇಶ ಅಕ್ಕಿ, ಯಲ್ಲಪ್ಪ ಇಂಗಳಗಿ, ವೈ.ಡಿ.ಪಾಟೀಲ, ಎಚ್.ಎಲ್. ಬಾಲರಡ್ಡಿ ಮುಂತಾದವರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಗೆಲವು: ಸಂಭ್ರಮಾಚರಣೆ
ಗದಗ:
ಈಚೆಗೆ ಜರುಗಿದ ಮುಂಡರಗಿ ತಾಲೂಕಿನ ಹಮ್ಮಿಗಿ ಜಿಪಂ ಉಪಚುನಾವಣೆ ಜರುಗಿದ್ದು, ಮಂಗಳವಾರ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ವಿನಾಯಕ ಹಬೀಬ, ಚಂದನ ರಜಪೂತ, ಎಂ.ಎಸ್. ಕರಿಗೌಡ, ಕಾಂತಿಲಾಲ ಬನ್ಸಾಲಿ, ಎಂ.ಎಂ. ಹಿರೇಮಠ, ಮಾಧವ ಗಣಾಚಾರಿ, ಪ್ರವೀಣ ಬನ್ಸಾಲಿ, ಜಿ.ಎಸ್. ಹಿರೇಮಠ, ಆದಂನ ಶಾವಿ, ಗಂಗಾಧರ ಹಬೀಬ, ಸುಧೀರ ಕಾಟಿಗಾರ, ಸುಭಾಷ ಸುಂಕದ, ಕೃಷ್ಣ ಹೊಂಬಾಳಿ, ಅಶ್ವಿನಿ ಜಗತಾಪ, ಪಾರ್ವತಿ ಪತ್ತಾರ, ಶಾರದಾ ಸಜ್ಜನರ ಸೇರಿದಂತೆ ಬಿಜೆಪಿ   ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.