ಇದ್ದೂ ಇಲ್ಲದಂತಾದ ಶೌಚಾಲಯ
ಕನ್ನಡಪ್ರಭ ವಾರ್ತೆ, ನರಗುಂದ, ಅ. 3
ಪಟ್ಟಣದ ಅತಿ ವಿಶಾಲವಾದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮಿನಿ ವಿಧಾನ ಸೌಧದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅನುದಾನ ವ್ಯಯ ಮಾಡಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಶೌಚಾಲಯಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿವೆ.
ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಾಲೂಕು ಮಟ್ಟದ ಎಲ್ಲ ಕಚೇರಿಗಳಿದ್ದು, ಕಚೇರಿ ಆವರಣದಲ್ಲಿ ಸರ್ಕಾರ ಹೈಟೆಕ್ ಮೂತ್ರಾಲಯ ಹಾಗೂ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದರೂ ಅವುಗಳಿಗೆ ಯಾವಾಗಲೂ ಬೀಗ ಜಡಿದಿರುತ್ತಾರೆ. ಅದರಿಂದಾಗಿ ನಿತ್ಯ ಕಚೇರಿ ಕೆಲಸಕ್ಕೆಂದು ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ನೂರಾರು ಸಾರ್ವಜನಿಕರು ಜಲಬಾಧೆ ತೀರಿಸಿಕೊಳ್ಳಲು ಮೂತ್ರಾಲಯ ಹಾಗೂ ಬಹಿರ್ದೆಸೆಗೆ ಶೌಚಾಲಯಗಳಿಲ್ಲದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಸದಾ ಕಿಲಿ: ಸರ್ಕಾರ ಸಾರ್ವಜನಿಕರಿಗೆ ಉಪಯೋಗವಾಗಲಿ ಎಂಬ ಸದುದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಅವುಗಳು ಅಗತ್ಯ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರುವಲ್ಲಿ ವಿಫಲವಾಗುತ್ತಿವೆ. ಇನ್ನು ಕೆಲವು ಯೋಜನೆಗಳು ಕಾರ್ಯರೂಪಕ್ಕೆ ಬಂದರೂ ಸಮರ್ಪಕ ನಿರ್ವಹಣೆ ಇಲ್ಲದೇ ಹಾಳಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳು ಸಾರ್ವಜನಿಕರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಲಾಗಿದೆ. ಆದರೆ, ಇವು ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದೇ ದಿನದ 24 ಗಂಟೆಗಳ ಕಾಲ ಕೀಲಿ ಹಾಕಲಾಗಿರುತ್ತದೆ. ಇವುಗಳ ಬಳಕೆ ಇಲ್ಲದಂತಾಗಿ ಸಂಪೂರ್ಣ ಹಾಳಾಗುವ ಪರಿಸ್ಥಿತಿ ಎದುರಾಗಿದೆ.
ಮಹಿಳೆಯರ ಪರದಾಟ: ಇಲ್ಲಿ ಕಚೇರಿ ಕೆಲಸಕ್ಕೆ ಬರುವುದರಲ್ಲಿ ಪುರುಷರು ಹಾಗೂ ಮಹಿಳೆಯರಿರುವುದು ಸಾಮಾನ್ಯ. ಪುರುಷರು ಹೇಗೋ ಮಿನಿ ವಿಧಾನ ಸೌಧದ ಅಕ್ಕಪಕ್ಕದ ಜಮೀನುಗಳಲ್ಲಿ ಮೂತ್ರಕ್ಕಾಗಿ ಹೋಗಿ ಬರುವುದುಂಟು. ಆದರೆ, ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಹಲವು ಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿನ ಸಾರ್ವಜನಿಕರ ಅನಿಸಿಕೆ. ಯಾವುದೇ ಯೋಜನೆಗಳು ಯಶಸ್ವಿಯಾಗಲು ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯ ಮುಖ್ಯವಾಗಿರುತ್ತದೆ. ಆದರೆ, ನರಗುಂದ ಪಟ್ಟಣದಲ್ಲಿ ಭಿನ್ನವಾಗಿದೆ. ಸರ್ಕಾರದಿಂದ ನಿರ್ಮಾಣ ಮಾಡಲಾಗಿರುವ ಹೈಟೆಕ್ ಶೌಚಾಲಯಗಳ ನಿರ್ವಹಣೆಗೆ ಮಿನಿ ವಿಧಾನಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದರಿಂದ ಶೌಚಾಲಯಗಳು ಸಂಪೂರ್ಣ ಹಾಳಾಗುವ ಹಂತಕ್ಕೆ ತಲುಪಿವೆ.
ಮಿನಿ ವಿಧಾನ ಸೌಧದಲ್ಲಿರುವ ಶೌಚಾಲಯಗಳು ಇದ್ದು ಇಲ್ಲದಂತಾಗಿವೆ. ಇಲ್ಲಿ ಶೌಚಾಲಯಗಳನ್ನು ನಿರ್ಮಿಸದಿದ್ದರೇ ಎಷ್ಟೋ ಚೆನ್ನಾಗಿರುತ್ತಿತ್ತು. ಆದರೆ, ಲಕ್ಷಾಂತರ ರು. ಸರ್ಕಾರದ ಹಣ ವ್ಯಯ ಮಾಡಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಿ, ಅವುಗಳಿಗೆ ಸದಾ ಬೀಗ ಹಾಕಿರುವುದು ಖಂಡನಾರ್ಹ. ಆದಷ್ಟು ಬೇಗನೆ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
- ಶ್ರೀಪಾದ ಆನೆಗುಂದಿ
ತಾಲೂಕು ನಾಗರಿಕ ವೇದಿಕೆ ಅಧ್ಯಕ್ಷ
ಇಲ್ಲಿನ ಶೌಚಾಲಯಗಳಿಗೆ ನೀರಿನ ಕೊರತೆಯಾಗಿರುವುದರಿಂದ ಶೌಚಾಲಯಗಳನ್ನು ಬಂದ್ ಮಾಡಲಾಗಿದೆ. ಕೊಳವೆ ಬಾವಿ ದುರಸ್ತಿ ಮಾಡಿಸಿ ಆದಷ್ಟು ಬೇಗನೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು.
- ಎನ್.ಬಿ. ನೀಲಣ್ಣವರ
ತಹಸೀಲ್ದಾರ್
-ಎಸ್.ಜಿ. ತೆಗ್ಗಿನಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

