ಟ್ಯಾಂಕಿದ್ದರೂ ಕೊಳವೆಬಾವಿ ಇಲ್ಲ!
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 7
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ ಶಿರಹಟ್ಟಿ ಆಶ್ರಯದಲ್ಲಿ ತಾಲೂಕಿನ ಮಾಡಳ್ಳಿ ಗ್ರಾಮದಲ್ಲಿ ರು. 26 ಲಕ್ಷ ವೆಚ್ಚದಲ್ಲಿ 2011-12ನೇ ಸಾಲಿನ ಕುಡಿಯುವ ನೀರು ಸರಬರಾಜು ಯೋಜನೆಯಡಿ ಐವತ್ತು ಸಾವಿರ ಲೀಟರ್ ಸಾಮರ್ಥ್ಯದ ಸಿಹಿನೀರು ಜಲಾಶಯ (ಟ್ಯಾಂಕ್) ನಿರ್ಮಿಸಿದ್ದು, ಯೋಜನೆಯಂತೆ ಕಾಮಗಾರಿ ನಡೆಸದೇ ಬಾರಿ ಹಣದ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿ ಬರುತ್ತಿದೆ.
ಯೋಜನೆಯಲ್ಲಿ ಟ್ಯಾಂಕ್ಗೆ ನೀರು ಏರಿಸಲು ಪಕ್ಕದಲ್ಲಿಯೇ ಕೊಳವೆಬಾವಿ(ಬೋರ್ವೆಲ್) ಹಾಕಿಸುವಂತೆ ಇದೆ. ಗ್ರಾಮದ ಹಳೆಯ ಬೋರ್ವೆಲ್ನಿಂದಲೇ ಟ್ಯಾಂಕ್ಗೆ ನೀರು ಏರಿಸಿ ಗ್ರಾಮಸ್ಥರಿಗೆ ವಾರಕ್ಕೊಮ್ಮೆ ಪೂರೈಸುತ್ತಿದ್ದು, ಕುಡಿಯುವ ನೀರಿಗೆ ಜನ ಪರಿತಪಿಸುತ್ತಿದ್ದಾರೆ. ಬೋರ್ವೆಲ್ ಹಾಕಿಸಿದ್ದಾಗಿ ಲಕ್ಷಾಂತರ ರು. ಲೂಟಿ ಮಾಡಿ ಇಲಾಖೆಯವರು ಗ್ರಾಮಸ್ಥರಿಗೆ ಯೋಜನೆ ಲಾಭ ತಲುಪದಂತೆ ಮಾಡಿದ್ದಾರೆ.
ಗೋಲ್ಮಾಲ್: ಐದು ಸಾವಿರ ಜನಸಂಖ್ಯೆ ಇರುವ ಮಾಡಳ್ಳಿ ಗ್ರಾಮದಲ್ಲಿ ಏಳು ಜನ ಗ್ರಾಮ ಪಂಚಾಯತಿ ಸದಸ್ಯರು ಇದ್ದಾರೆ. ಇದೇ ಗ್ರಾಮದಿಂದ ಓರ್ವ ತಾಪಂ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ಆದರೆ, ಕುಡಿಯುವ ನೀರಿನ ಬವಣೆ ಮಾತ್ರ ತಪ್ಪಿಲ್ಲ. ಜಿಪಂ ಇಲಾಖೆ ಅಧಿಕಾರಿಗಳು, ಅಭಿಯಂತರರು ಇಷ್ಟೊಂದು ದೊಡ್ಡ ಮೊತ್ತದ ಹಣದಲ್ಲಿ ಬರೀ ಟ್ಯಾಂಕ್ ನಿರ್ಮಿಸಿ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿರುವುದಾಗಿ ಬಿಲ್ ತೆಗೆದುಕೊಂಡಿದ್ದು, ಗ್ರಾಮಸ್ಥರು ಅಧಿಕಾರಿಗಳ ಕ್ರಮಕ್ಕೆ ಶಾಪ ಹಾಕುತ್ತಿದ್ದಾರೆ.
ಸ್ಮಶಾನ ಜಾಗದಲ್ಲಿ ಕೆರೆ ನಿರ್ಮಾಣ: ತಾಲೂಕು ಪಂಚಾಯಿತಿ ಅನುದಾನದಲ್ಲಿ ರು. 24 ಲಕ್ಷ ವೆಚ್ಚದಲ್ಲಿ ಗ್ರಾಮಕ್ಕೆ ಕುಡಿವ ನೀರು ಒದಗಿಸಲು ಕೆರೆ ನಿರ್ಮಾಣ ಮಾಡಲಾಗಿದೆ. ಅವೈಜ್ಞಾನಿಕ ರೀತಿ ಕೆರೆ ನಿರ್ಮಿಸಿದ್ದು, ಗ್ರಾಮಸ್ಥರಿಗೆ ನೀರಿನ ಸೌಲಭ್ಯ ದೊರೆಯುತ್ತಿಲ್ಲ. ಸ್ಮಶಾನ ಜಾಗದಲ್ಲಿ ಕೆರೆ ನಿರ್ಮಿಸಿದ್ದು, ಕೆರೆ ಸುತ್ತಲೂ ಮುಳ್ಳು-ಕಂಟಿಗಳು ಬೆಳೆದಿವೆ. ಕೆರೆ ಪಕ್ಕದಲ್ಲಿಯೇ ಹಳ್ಳ ಹರಿಯುತ್ತಿದ್ದು, ಕೆರೆಯ ಒಡ್ಡು ನೀರಿನ ಸೆಳೆತದಿಂದ ಒಡೆದು ಹೋಗುತ್ತಿದೆ. ಕೆರೆ ಸುತ್ತಲೂ ಗಿಡ ನೆಡಲು ಹಾಗೂ ಕಲ್ಲು ಜೋಡಣೆ ಮತ್ತು ಮೆಟ್ಟಿಲು ನಿರ್ಮಾಣಕ್ಕೆಂದು ಹೆಚ್ಚುವರಿಯಾಗಿ ರು. 1 ಲಕ್ಷ ಖರ್ಚು ಹಾಕಿ ಯಾವುದನ್ನೂ ಮಾಡದೇ ಹಣ ಲಪಟಾಯಿದ್ದಾರೆ. ಕೆರೆಯಿಂದ ಅನತಿ ದೂರದಲ್ಲಿ ಜಲಾನಯನ ಇಲಾಖೆಯಿಂದ ಲಕ್ಷಾಂತರ ರು.ಗಳ ವೆಚ್ಚದಲ್ಲಿ ನೀರಿನ ಅಂತರ್ಜಲ ಹೆಚ್ಚಳಕ್ಕೆ ಬಾಂದಾರ ನಿರ್ಮಾಣ ಮಾಡಿದ್ದು, ಕಾಮಗಾರಿ ಕಳಪೆಯಾಗಿದ್ದರಿಂದ ನೀರು ನಿಲ್ಲದೇ ಪಕ್ಕದ ಕೆ.ಸಿ. ಹೂಗಾರ, ಫಕ್ಕೀರೇಶ ಹೊಸಮನಿ ಎಂಬ ರೈತರ ಜಮೀನಿಗೆ ನುಗ್ಗುತ್ತಿದ್ದು, ಲಕ್ಷಾಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಿದ ಹೊಲದ ಬದುವು ಸಂಪೂರ್ಣ ನೀರಿನ ಹೊಡೆತಕ್ಕೆ ಹಾಳಾಗಿದೆ.
ಗ್ರಾಮಸ್ಥರ ಕುಡಿಯುವ ನೀರಿನ ದಾಹ ತೀರಿಸಲು ಕೆರೆ, ಟ್ಯಾಂಕ್, ಬಾಂದಾರ ನಿರ್ಮಾಣಕ್ಕೆಂದು ರು. 60 ಲಕ್ಷಕ್ಕೂ ಹೆಚ್ಚು ಅನುದಾನ ಹರಿದು ಬಂದಿದ್ದರೂ ಅಧಿಕಾರಿಗಳ, ಎಂಜಿನಿಯರ್ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಯೋಜನೆಯ ಲಾಭ ಮಾತ್ರ ತಲುಪಿಲ್ಲ. ಕುಡಿಯುವ ನೀರಿನ ತೊಂದರೆ ಕುರಿತು ಮಾನ್ಯ ಜಿಲ್ಲಾಧಿಕಾರಿಗೆ ಗ್ರಾಪಂ ಸದಸ್ಯರು ಮನವಿ ಸಲ್ಲಿಸಿದ್ದರೂ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಬೇಜವಾಬ್ದಾರಿ ತೋರಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
- ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

