ಗದಗ

ಗ್ರಾಮ ಸಹಾಯಕ ನೌಕರರಿಂದ ಪ್ರತಿಭಟನೆ

Published On :

ಗದಗ: ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರ ಹುದ್ದೆಯನ್ನು 'ಡಿ' ದರ್ಜೆಗೇರಿಸಿ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕ ನೌಕರರ ಗದಗ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ಜರುಗಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎ.ಎಂ. ತಹಸೀಲ್ದಾರ್ ಮಾತನಾಡಿ, ಗ್ರಾಮ ಸಹಾಯಕ ಗ್ರಾಮೀಣ ಜನರಿಗೆ ಚಿರಪರಿಚಿತ. ಗ್ರಾಮಗಳಲ್ಲಿ ವ್ಯಕ್ತಿಯ ಜನನದಿಂದ ಹಿಡಿದು ಮರಣದವರೆಗೆ ಘಟಿಸುವ ಎಲ್ಲ ಹಂತದ ಪ್ರಕ್ರಿಯೆಗಳಲ್ಲಿ ಗ್ರಾಮಸಹಾಯಕ ಕಾರ್ಯ ಅತ್ಯವಶ್ಯ. ಗ್ರಾಮೀಣ ಜನರ ಅವಶ್ಯಕತೆಗೆ, ಮಾರ್ಗದರ್ಶನಕ್ಕೆ ಮೊಟ್ಟ ಮೊದಲನೆಯದಾಗಿ ಇರುವವನೇ ಈ ಗ್ರಾಮ ಸೇವಕ. ಹಿಂದೆ ಗ್ರಾಮಗಳಲ್ಲಿ ಕಂದಾಯ ಸೇವೆಗಳನ್ನು ಪಟೇಲ, ಶ್ಯಾನಭೋಗರು ನಿರ್ವಹಿಸುತ್ತಿದ್ದರು. ನಂತರ ಇವರ ಸೇವೆಯ ಉಸ್ತುವಾರಿಯನ್ನು ಶೇಖದಾರ ನೋಡಿಕೊಳ್ಳುತ್ತಿದ್ದು, ಇವರ ಸಹಾಯಕರಾಗಿ ಇದ್ದವರೇ ತೋಟಿ-ತಳವಾರರು, ನೀರಗಂಟಿಗಳು. ಕರ್ನಾಟಕ ಗ್ರಾಮ ನೌಕರಿ ರದ್ಧತಿ ಕಾಯ್ದೆ 1961ರ 4ನೇ ನಿಯಮಗಳು 01-02-1963ರಿಂದ ಅನ್ವಯವಾಗುವಂತೆ ವಂಶಪಾರಂಪರ್ಯದಿಂದ ಎಲ್ಲ ಗ್ರಾಮೀಣ ಹಂತದ ಹುದ್ದೆಗಳು ರದ್ದಾದರಿಂದ ಕೆಳಹಂತದ ಹುದ್ದೆಯಲ್ಲಿ ಕಾರ್ವನಿರ್ವಹಿಸುತ್ತಿದ್ದ ನೌಕರರನ್ನು ತಾತ್ಕಾಲಿಕ ಆಧಾರದ ಮೇಲೆ ಗ್ರಾಮ ಲೆಕ್ಕಿಗರಿಗೆ ಸಹಾಯ ಮಾಡಲು ಗ್ರಾಮ ಸಹಾಯಕ ಹುದ್ದೆ ಸೃಷ್ಟಿಸಲಾಯಿತು. ಇದರನ್ವಯ 16-06-1978 ರಲ್ಲಿ ರಾಜ್ಯದ 19 ಜಿಲ್ಲೆಗಳಿಗೆ 8941 ಹುದ್ದೆಗಳನ್ನು ನಿಗದಿತ ವೇತನದ ಆಧಾರದ ಮೇಲೆ ಮಂಜೂರು ಮಾಡಲಾಯಿತು. ನಂತರ ಸರ್ಕಾರದ ಆದೇಶದಿಂದಾಗಿ ಮತ್ತೆ 23-09-1982ರಲ್ಲಿ ಹೆಚ್ಚುವರಿಯಾಗಿ 1509 ಸೇರಿ ಒಟ್ಟು 10450 ಗ್ರಾಮ ಸಹಾಯಕರ ಹುದ್ದೆಗಳನ್ನು ರಾಜ್ಯಾದ್ಯಂತ ಮಂಜೂರಿ ಮಾಡಲಾಯಿತು. ಮಾಸಿಕ ರು. 100 ರಂತೆ ಆರಂಭವಾದ ವೇತನ ಈಗ 7 ಸಾವಿರಕ್ಕೆ ತಲುಪಿದೆ. ಕಡಿಮೆ ವೇತನದಲ್ಲಿಯೇ ಗ್ರಾಮ ಸಹಾಯಕರು ಬೆಂಕಿ ಅನಾಹುತ, ಪ್ರವಾಹ, ಪ್ರಕೃತಿ ವಿಕೋಪ, ಗಲಭೆ, ಸರ್ಕಾರಿ ಬಾಕಿ ವಸೂಲಿ, ರಾಜ್ಯ ಹಣಕಾಸು ಸಂಸ್ಥೆಯ ಮುದ್ರಾಂಕ ಶುಲ್ಕ, ಮಾರಾಟ ತೆರಿಗೆ ವಸೂಲಿ, ಖಾತೆಗೆ ಸಂಬಂಧಿಸಿದ ಕೆಲಸ, ಜನನ, ಮರಣ ದಾಖಲೆ, ಚುನಾವಣಾ ಕರ್ತವ್ಯ, ಜನಗಣತಿ, ವಿಧವಾ, ಅಂಗವಿಕಲ, ವೃದ್ಧಾಪ್ಯ ಹಾಗೂ ಸಂಧ್ಯಾಸುರಕ್ಷಾ ಇನ್ನಿತರೇ ಕೆಲಸ ನಿರ್ವಹಿಸುತ್ತಿದ್ದಾರೆ. ಇಷ್ಟೊಂದು ಕೆಲಸ ನಿರ್ವಹಿಸುತ್ತಿರುವ ಗ್ರಾಮಸಹಾಯಕರಿಗೆ ಸೂಕ್ತ ಭದ್ರತೆ ಇಲ್ಲ. ಈಚೆಗೆ ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿಯಲ್ಲಿ ಅಕ್ರಮ ಮರಳು ದಂಧೆ ತಡೆಯಲು ಹೋದ ಗ್ರಾಮಸಹಾಯಕ ವಿಜಯಕುಮಾರ ಎಂಬುವನನ್ನು ಬರ್ಬರವಾಗಿ ಹತ್ಯೆಮಾಡಲಾಗಿದೆ. ಸರ್ಕಾರ ಪರಿಹಾರವಾಗಿ ಕೇವಲ ರು. 1 ಲಕ್ಷ ನೀಡಿ ಕೈ ತೊಳೆದುಕೊಂಡಿದೆ. ಆದರೆ, ಈ ವರೆಗೂ ಬೇರೆ ಇಲಾಖೆ ನೌಕರರಂತೆ ಸೇವಾ ಭದ್ರತೆ ನೀಡಿಲ್ಲ ಎಂದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಹನುಮಪ್ಪ ದೊಡ್ಡಮನಿ, ಕಾರ್ಯದರ್ಶಿ ಶ್ರೀಶೈಲ ಕವಡಿಮಟ್ಟಿ, ನಜೀರ ಹಿರೇಹಾಳ, ದೇವಪ್ಪ ತಳವಾರ, ಅಮರಪ್ಪ ದೊಡ್ಡಮನಿ, ಮಹ್ಮದರಫಿಕ ಢಾಲಾಯತ, ನಜೀರಅಹ್ಮದ್ ಗಡಾದ, ಬುಡನಸಾಬ ಗತ್ತರಗಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.