ಗದಗ

ಚೆಕ್‌ಡ್ಯಾಂ ತೆರವುಗೊಳಿಸಲು ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಅ. 8
ತಾಲೂಕಿನ ಬರದೂರ ಗ್ರಾಮದ ಕಾಶಿಲಿಂಗ ಗುಡಿ ಬಳಿಯ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಿಸಿರುವುದರಿಂದ ಇಲ್ಲಿ ಸಂಚರಿಸುವ ರೈತರಿಗೆ ತೀವ್ರ ತೊಂದರೆಯಾಗಿದೆ. ಈ ಕೂಡಲೇ ಚೆಕ್‌ಡ್ಯಾಂ ತೆರವುಗೊಳಿಸುವಂತೆ ಆಗ್ರಹಿಸಿ ಬರದೂರು ಗ್ರಾಮದ ನೂರಾರು ರೈತರು ಮಂಗಳವಾರ ತಮ್ಮ ಎತ್ತು, ಚಕ್ಕಡಿ ಸಮೇತ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜಮೀನುಗಳಿಗೆ ರೈತರು ಎತ್ತು, ಚಕ್ಕಡಿ ತೆರಳದಂತಾಗಿದೆ. ಚೆಕ್ ಡ್ಯಾಂ ನೀರು ತುಂಬಿ ಹರಿದ ಕಾರಣ ರಸ್ತೆ ಹದಗೆಟ್ಟಿದ್ದು, ಜಾನುವಾರುಗಳು ಬಿದ್ದು ಅನಾಹುತ ಸಂಭವಿಸಿವೆ. ರೈತರ ವಿರೋಧದ ನಡುವೆ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಎನ್‌ಆರ್‌ಇಜಿ ಯೋಜನೆಯಡಿ ರೈತರ ಹಿತ ಕಾಯುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಗ್ರಾಪಂ, ಪಪಂನ ಅಧಿಕಾರಿಗಳ ಕಾರ್ಯವಾಗಿದೆ.
ಇಲ್ಲಿ ರೈತರ ಹಿತ ಕಾಯುವ ಬದಲು ಮೋಸ ಮಾಡುವಂತಹ ಕಾಮಗಾರಿ ಕೈಗೊಳ್ಳಲಾಗಿದೆ. ಈ ರಸ್ತೆ ದುರಸ್ತಿ ಮಾಡಿ ಗುಣಮಟ್ಟ ಸಿಡಿ ನಿರ್ಮಿಸಿ ರಸ್ತೆ ಸಂಚಾರ ಸುಗಮಗೊಳಿಸಲು ಆದ್ಯತೆ ನೀಡಬೇಕಾಗಿತ್ತು. ಆದರೆ, ಖಾಸಗಿ ವ್ಯಕ್ತಿಯೋರ್ವನ ದುರಾಸೆಗಾಗಿ ಇಲ್ಲಿ ಸಿಡಿ ನಿರ್ಮಿಸದೇ ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಇದರಿಂದಾಗಿ ಈ ಭಾಗದ ರೈತರ ನೂರಾರು ಜಮೀನುಗಳಿಗೆ ತೆರಳಲು ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ರೈತರಿಗೆ ಆಗಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದೆ, ಹೋದಲ್ಲಿ ಪ್ರತಿಭಟನೆ ಹಿಂಪಡೆಯಲಾಗುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ತಹಸೀಲ್ದಾರ್ ಅನುಪಸ್ಥಿತಿಯಿಂದಾಗಿ ಸ್ಥಳಕ್ಕೆ ಆಗಮಿಸಿದ ಸಿಪಿಐ ಶ್ರೀಪಾದ ಜಲ್ದೆ ಮನವಿ ನೀಡಿದರು. ತಹಸೀಲ್ದಾರ್ ಬಂದ ಕೂಡಲೇ ಗ್ರಾಮದ ಮುಖಂಡರನ್ನು ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ವೀರಣ್ಣ ನಾಡಗೌಡರ, ಎಂ.ವಿ. ಗೌರಿಪುರ, ಮಹೇಶ ಸಜ್ಜನರ, ಬಾಳಪ್ಪ ಕೋಣನವರ, ಬಸಪ್ಪ ಗದಗ, ನಿಂಗಪ್ಪ ನಿಟ್ಟಾಲಿ, ಪರಶುರಾಮ ಭಜಂತ್ರಿ, ಪ್ರಕಾಶ ನಾಡಗೌಡರ, ವಿರೂಪಾಕ್ಷಪ್ಪ ಶಿರೂರ, ದೇವಪ್ಪ ಹಳ್ಳಿ, ಸತ್ಯಪ್ಪ ಗೋಡಿ, ಎಚ್.ಎಂ. ಹೊಸಮನಿ, ಕೆ.ಎಸ್. ನಾಡಗೌಡರ, ಎಂ.ವಿ. ತಳಗೇರಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.