ಗದಗ

ಲೈಂಗಿಕ ದೌರ್ಜನ್ಯ ಖಂಡಿಸಿ ಮನವಿ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಅ. 9
ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಕಳೆದ ಸೋಮವಾರ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಬುಧವಾರ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಬೂದಿಹಾಳ ಗ್ರಾಮದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿ ಗ್ರಾಮದ ಯುವತಿಯ ಮೇಲೆ ಅದೇ ಗ್ರಾಮದ ಶ್ರೀಕಾಂತಗೌಡ ಪಾಟೀಲ ಅತ್ಯಾಚಾರವೆಸಗಿದ್ದು, ಪೊಲೀಸರು ಈಗಾಗಲೇ ಅವನನ್ನು ಬಂಧಿಸಿದ್ದಾರೆ. ಕೂಡಲೇ ನ್ಯಾಯಾಲಯದ ಕಸ್ಟಡಿಗೆ ಕೊಡಲು ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಒತ್ತಾಯಿಸಿದ್ದು, ಈ ಘಟನೆಯಿಂದ ಯುವತಿ ಕುಟುಂಬದವರು ಭಯಭೀತರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ಇವರಿಗೆ ಸಾಂತ್ವನ ಹೇಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅಂದಾನಗೌಡ ಪಾಟೀಲ, ಯಮನಪ್ಪ ಭಜಂತ್ರಿ, ಯಲ್ಲಪ್ಪ ಉಪ್ಪಾರ, ಲಕ್ಷ್ಮಣ ತಗಡಿನಮನಿ ಮುಂತಾದವರು ಉಪಸ್ಥಿತರಿದ್ದರು.
ಇಂದು ಎನ್ನೆಸ್ಸೆಸ್ ಶಿಬಿರ
ಗಜೇಂದ್ರಗಡ: ಸ್ಥಳೀಯ ಸರ್ಕಾರಿ ಪಪೂ ಮಹಾವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವು ಅ. 10 ರಂದು ಸಂಜೆ 6 ಗಂಟೆಗೆ ದತ್ತು ಗ್ರಾಮ ಚಿಲಝರಿಯಲ್ಲಿ ನಡೆಯಲಿದೆ.  ಡಾ. ಅಮೃತ್ ಹರಿದಾಸ ಉಪನ್ಯಾಸ ನೀಡುವರು. ಬಸವರಾಜ ಕಡಬಲಕಟ್ಟಿ ಅಧ್ಯಕ್ಷತೆ ವಹಿಸುವರು. ದೊಡ್ಡಯ್ಯಜ್ಜ ಘಟ್ನೂರಮಠ, ಈಶಪ್ಪ ಉಪ್ಪಾರ, ವಿರೂಪಾಕ್ಷಪ್ಪ ಕೆಲೂರ, ಕರಿಯಪ್ಪ ನರೇಗಲ್ಲ, ಅಂದಪ್ಪ ಕಡಬಲಕಟ್ಟಿ, ಪರಸಪ್ಪ ಮಾದರ, ಶ್ರತಿ ಕಮತರ, ಪಾರವ್ವ ಘಟ್ನೂರಮಠ, ಅನ್ನಪೂರ್ಣ ಕಡಬಲಕಟ್ಟಿ, ಶೇಕವ್ವ ಚೋಪಡೆ ಮುಂತಾದವರು ಪಾಲ್ಗೊಳ್ಳುವರು.
12ರಂದು ಪಂಚಮಸಾಲಿ ಸಮಾಜದ ಸಭೆ
ಮುಂಡರಗಿ: ವೀರರಾಣಿ ಕಿತ್ತೂರ ಚೆನ್ನಮ್ಮಾಜಿಯ 193ನೇ ಜಯಂತಿ ಆಚರಿಸುವ ಕುರಿತು ಚರ್ಚಿಸಲು ಅ. 12ರ ಬೆಳಗ್ಗೆ 10 ಗಂಟೆಗೆ ಮುಂಡರಗಿ ತಾಲೂಕು ಪಂಚಮಸಾಲಿ ಸಮಾಜ ಬಾಂಧವರ ಸಭೆಯನ್ನು ಪಟ್ಟಣದ ತೋಂಟದಾರ್ಯ ಮಠದಲ್ಲಿ ಕರೆಯಲಾಗಿದೆ. ತಾಲೂಕಿನ ವೀರಶೈವ ಪಂಚಮಸಾಲಿ ಸಮಾಜ ಬಾಂಧವರು ಸಭೆಗೆ ತಪ್ಪದೆ ಹಾಜರಾಗಿ ತಮ್ಮ ಸಲಹೆ ಸೂಚನೆ ನೀಡಬೇಕೆಂದು ತಾಲೂಕು ವೀರಶೈವ ಪಂಚಮಸಾಲಿ ನೌಕರರ ಸಂಘದ ಕಾರ್ಯದರ್ಶಿ ವಿಶ್ವನಾಥ ಉಳ್ಳಾಗಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9591468895, 8904034502 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ತಪಾಸಣಾ ಶಿಬಿರ
ರೋಣ:  ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕ, ರಾಜ್ಯ ಆಯುಷ್ಯ ವೈದ್ಯಾಧಿಕಾರಿಗಳ ಸಂಘ ಜಿಲ್ಲಾ ಘಟಕ, ರಾಜೀವಗಾಂಧಿ  ಆಯುರ್ವೇದಿಕ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಇವುಗಳ ಆಶ್ರಯದಲ್ಲಿ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಉಚಿತ ಬೃಹತ್ ಆಯುಷ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಅ. 10ರ ಬೆಳಗ್ಗೆ 10 ಗಂಟೆಗೆ ಪಟ್ಟಣದ ರಾಜೀವಗಾಂಧಿ ಆಯುರ್ವೇದಿಕ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗುಲಗಂಜಿಮಠದ ಗುರುಪಾದ ಶ್ರೀಗಳು ಸಾನ್ನಿಧ್ಯ ವಹಿಸುವರು. ಶಾಸಕ ಜಿ.ಎಸ್. ಪಾಟೀಲ ಶಿಬಿರವನ್ನು ಉದ್ಘಾಟಿಸುವರು. ಡಾ. ಟಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಡಾ. ಶ್ರೀನಿವಾಸ ಬನ್ನಿಗೋಳ ಮುಂತಾದವರು ಉಪಸ್ಥಿತರಿರುವರು ಎಂದು ಆಯುರ್ವೇದಿಕ ಕಾಲೇಜಿನ ಪ್ರಾಚಾರ್ಯ ಐ.ಬಿ. ಕೊಟ್ಟೂರಶೆಟ್ಟರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಎನ್ನೆಸ್ಸೆಸ್ ಶಿಬಿರ
ಗಜೇಂದ್ರಗಡ:  ಸ್ಥಳೀಯ ಎಸ್.ಎಂ. ಭೂಮರಡ್ಡಿ ಪಪೂ ಮಹಾವಿದ್ಯಾಲಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವು ಅ. 10ರ ಸಂಜೆ 6 ಗಂಟೆಗೆ ದತ್ತು ಗ್ರಾಮ ವೀರಾಪುರದಲ್ಲಿ ನಡೆಯಲಿದೆ.  ಬಿ.ಎ. ಕೆಂಚರೆಡ್ಡಿ, ರಮೇಶ ಮರಾಠಿ ಉಪನ್ಯಾಸ ನೀಡುವರು. ಎಸ್.ಎಸ್. ಚುಂಚಾ,  ಡಾ. ಮಲ್ಲಿಕಾರ್ಜುನ ಕುಂಬಾರ, ರೇವಪ್ಪ ಮಾದರ, ವೀರಪ್ಪ ಘೋರ್ಪಡೆ, ಭೀಮಪ್ಪ ಘೋರ್ಪಡೆ, ಧರ್ಮಣ್ಣ ಘೋರ್ಪಡೆ, ಪರಸಪ್ಪ ಘೋರ್ಪಡೆ, ಎ.ಎಸ್. ವಡ್ಡರ ಮುಂತಾದವರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಪ್ಪತ್ತಗುಡ್ಡ ವನ್ಯ ಜೀವಿಧಾಮ ಬೇಡ
ಗದಗ: ಜಿಲ್ಲೆಯ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಘೋಷಿಸದಂತೆ ಆಗ್ರಹಿಸಿ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು, ಲಂಬಾಣಿ ಜನಾಂಗದ ನೇತೃತ್ವದಲ್ಲಿ ಈಚೆಗೆ   ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಅಧ್ಯಕ್ಷ ಮೋತಿಲಾಲ ಮಾಳಗಿಮನಿ ಮಾತನಾಡಿ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕುಗಳು ಕಳೆದ ಅನೇಕ ದಶಕಗಳಿಂದ ಬರಗಾಲದ ಹಣೆಪಟ್ಟಿಯನ್ನು ಕಟ್ಟಿಕೊಂಡಿವೆ. ಇಲ್ಲಿ ಬಹುತೇಕ ಜನರು ಹಿಂದುಳಿದ ವರ್ಗದ ಕುರುಬರು, ಲಂಬಾಣಿಗಳು, ವಾಲ್ಮೀಕಿ ಜನಾಂಗ ಸೇರಿದಂತೆ ಹಿಂದುಳಿದ ವರ್ಗದ ಜನರು ವಾಸಿಸುತ್ತಿದ್ದಾರೆ. ಈ ಜನರು ತಮ್ಮ ಜಾನುವಾರುಗಳನ್ನು ಕಪ್ಪತ್ತಗುಡ್ಡದಲ್ಲಿ ಬೆಳೆಯುವ ಹುಲ್ಲನ್ನು ಉಪಯೋಗಿಸಿಯೇ ಸಾಕುತ್ತಿದ್ದಾರೆ. ವನ್ಯಜೀವಿ ಧಾಮವನ್ನಾಗಿ ಘೋಷಿಸಿದಲ್ಲಿ ಜಾನುವಾರುಗಳಿಗೆ ತೊಂದರೆಯಾಗುತ್ತದೆ ಎಂದರು.    ಲಕ್ಷ್ಮಣ ಚವ್ಹಾಣ, ಮೀರುಬಾಯಿ ರಾಠೋಡ, ಶಂಕರಗೌಡ ಜಾಯಿಗೌಡರ, ಪಾಂಡಪ್ಪ ದಾಸರ, ಸಿದ್ದನಗೌಡ ಪಾಟೀಲ, ಗ್ರಾಪಂ ಸದಸ್ಯ ನಾಗೇಶ ಚವ್ಹಾಣ, ಸಂತೋಷ ಗುಜಮಾಗಡಿ, ರಮೇಶ ಕಾರಾಭಾರಿ, ಸೋಮನಾಥ ಕಾರಭಾರಿ, ಶಾಂತಾಬಾಯಿ ಲಮಾಣಿ, ದ್ರೌಪದಿಬಾಯಿ ಲಮಾಣಿ, ಗಂಗಾಬಾಯಿ ಚವ್ಹಾಣ, ಶಾಂತಕ್ಕ ಬೊಮ್ಮನಪಾಡ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.