ಗದಗ

ಕಸದ ತೊಟ್ಟಿಯಾದ ನಿಲ್ದಾಣ

Published On :

 ನಿಂಗರಾಜ ಬೇವಿನಕಟ್ಟಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಅ. 11
ಸ್ವಾತಂತ್ರ್ಯ ಹೋರಾಟದಿಂದ ಹೆಸರಾಗಿರುವ ಸಮೀಪದ ಜಕ್ಕಲಿ ಗ್ರಾಮದ ಬಸ್ ನಿಲ್ದಾಣವೀಗ ಹೆಸರಿಗೆ ಮಾತ್ರ ಇದ್ದು, ಸಾರ್ವಜನಿಕರ ಉಪಯೋಗಕ್ಕಿಲ್ಲದಂತಾಗಿದೆ.
ಗ್ರಾಪಂ ಆವರಣದಲ್ಲಿಯೇ 1990ರಲ್ಲಿ ನಿರ್ಮಾಣವಾದ ಈ ಬಸ್ ನಿಲ್ದಾಣ 1991ರಲ್ಲಿ ಉದ್ಘಾಟನೆಗೊಂಡಿತ್ತು. ತನ್ನ 20 ವರ್ಷ ಆಯಸ್ಸಿನಲ್ಲಿ ಕಾಯಕಲ್ಪಕಾಣದೇ ಸಾರ್ವಜನಿಕರು ಬಳಸಿದ ವಸ್ತುಗಳು ಬಿದ್ದು, ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವ ಕೇಂದ್ರವಾಗಿ ಮಾರ್ಪಟ್ಟಿದೆ. ರೋಣ ತಾಪಂ ವ್ಯಾಪ್ತಿಗೆ ಬರುವ ಜಕ್ಕಲಿ ಗ್ರಾಮವು ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿ ಮಡಿದ ಅಂದಾನಪ್ಪ ದೊಡ್ಡಮೇಟಿಯವರಂತಹ ಧೀಮಂತ ನಾಯಕರ ಭೂಮಿ. ರೋಣ-ಗದಗ ಮಾರ್ಗವಾಗಿ ಓಡಾಡುವ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ಲಲು ಆಯಕಟ್ಟಿನ ಜಾಗವಿಲ್ಲದೆ ರಸ್ತೆಯಲ್ಲಿಯೇ ನಿಲ್ಲುತ್ತಿವೆ. ಬಸ್ ನಿಲ್ದಾಣದಲ್ಲಿ ಬಸ್ ವೇಳಾ ಪಟ್ಟಿಯಿಲ್ಲ. ಶುಚಿತ್ವವಿಲ್ಲದೇ ಬಸ್ ನಿಲ್ದಾಣ ಕಸದ ತೊಟ್ಟಿಯಾಗಿದೆ. ಕೆಲವು ಕಿಡಿಗೇಡಿಗಳು ಗೋಡೆಯ ಮೇಲೆ ಸಿಕ್ಕ ಸಿಕ್ಕ ಜಾಹೀರಾತುಗಳನ್ನು ಅಂಟಿಸಿದ್ದಾರೆ. ಇನ್ನು ಕೆಲವು ಪ್ರೇಮಿಗಳು ಹೃದಯದ ಮಾತುಗಳನ್ನು ಹಂಚಿಕೊಳ್ಳುವ ಕೇಂದ್ರವಾಗಿದೆ.
4-5 ಬಸ್‌ಗಳ ಸಂಚಾರ: ದಿನಕ್ಕೆ ಕೇವಲ 4-5 ಬಸ್‌ಗಳು ಮಾತ್ರ ಗದಗ-ರೋಣ ಮಾರ್ಗವಾಗಿ ಸಂಚರಿಸುತ್ತಿವೆ. ನಿತ್ಯ ಸಾವಿರಾರು ಪ್ರಯಾಣಿಕರು ಕೆಲವು ಪಟ್ಟಣ, ಗ್ರಾಮಗಳಿಗೆ ತೆರಳಲು ನೇರವಾಗಿ ಬಸ್‌ಗಳಿಲ್ಲದೆ ಅನಿವಾರ್ಯವಾಗಿ ಸಮೀಪದ ಪಟ್ಟಣಗಳಿಗೆ ಹೋಗಿ ಬಸ್‌ಗಳನ್ನು ಹಿಡಿಯುವ ಅನಿವಾರ್ಯತೆಯಿದೆ. ಈ ಹಿಂದೆ ಜಕ್ಕಲಿ ಮಾರ್ಗವಾಗಿ ಬದಾಮಿ, ಬಾಗಲಕೋಟೆ, ಬೆಂಗಳೂರು, ಮೈಸೂರು, ಶಿರಹಟ್ಟಿ, ಹಾಸನ ಚಿತ್ರದುರ್ಗ, ಧರ್ಮಸ್ಥಳ, ದಾವಣಗೇರಿಯಂತಹ ನಗರಗಳಿಗೆ ಈ ಗ್ರಾಮದ ಮೂಲಕ ಓಡಾಡುತ್ತಿದ್ದ ಕೆಲವು ಬಸ್‌ಗಳು ಈಗ ಬೇರೆ ಮಾರ್ಗದ ಮೂಲಕ ಸಂಚರಿಸುತ್ತಿವೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ಇಲ್ಲಿನ ಸಾರ್ವಜನಿಕರ ಆರೋಪವಾಗಿದೆ.
ಸ್ವಚ್ಛತೆಯ ಕೊರತೆ: ನಿಲ್ದಾಣದಲ್ಲಿ ಕಸದ ಬುಟ್ಟಿಗಳು ಇಲ್ಲದಿರುವುದರಿಂದ ಸಾರ್ವಜನಿಕರು ಕಸವನ್ನು ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಬೀಸಾಡುತ್ತಿದ್ದಾರೆ. ನಿಲ್ದಾಣದ ಮೂಲೆಗಳಲ್ಲಿ ಗುಟುಕಾ, ತಂಬಾಕು, ಎಲೆ ಅಡಿಕೆ ತಿಂದು ಉಗುಳುತ್ತಿದ್ದಾರೆ. ನಿಲ್ದಾಣದಲ್ಲಿ ಪ್ರಯಾಣಿಕರು ನಿಲ್ಲಲೂ ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ಆವರಣದಲ್ಲಿಯೇ ಇರುವ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ಮದ್ಯ ವ್ಯಸನಿಗಳು ರಾತ್ರಿ ವೇಳೆ ಕುಡಿದು ಬಾಟಲಿಗಳನ್ನು ಇಲ್ಲಿಯೇ ಬೀಸಾಡುತ್ತಾರೆ. ರಾತ್ರಿ ವೇಳೆ ಬಸ್ ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ ಇರುವುದರಿಂದ ಇದು ಅನೈತಿಕ ಚಟುವಟಿಕೆಯ ತಾಣವಾದಂತಾಗಿದೆ.
ಶೌಚಾಲಯ ಅವ್ಯವಸ್ಥೆ: ಬಸ್ ನಿಲ್ದಾಣದ ಬಳಿ ಇರುವ ಮೂತ್ರಾಲಯ ಇದ್ದು ಇಲ್ಲದಂತಾಗಿದೆ. ಶೌಚಾಲಯವು ಸಂಪೂರ್ಣ ಹಾಳಾಗಿ ಗಬ್ಬು ನಾರುತ್ತಿದೆ. ಇದರ ಸುತ್ತಲೂ ಕಸ ಬೀಸಾಡಿರುವುದರಿಂದ ಶೌಚಾಲಯಕ್ಕೆ ಹೋಗಲು ಸ್ಥಳವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಈ ಶೌಚಾಲಯದ ದುರಸ್ತಿಗೆ ಗ್ರಾಪಂ ಮುಂದಾಗುತ್ತಿಲ್ಲ.
ಈ ರಸ್ತೆಯ ಮೂಲಕ ಈ ಹಿಂದೆ ಸಂಚರಿಸುತ್ತಿದ್ದ ಬಸ್‌ಗಳನ್ನು ಪುನಃ ಪ್ರಾರಂಭಿಸಬೇಕು. ಬೆಳಗ್ಗೆ ಗ್ರಾಮದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ತೀವ್ರ ತೊಂದರೆ ಅನುಭವಿಸುತ್ತಿದ್ದು, ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಬಸ್ ನಿಲ್ದಾಣವನ್ನು ಅಭಿವೃದ್ಧಿಗೊಳಿಸಿ, ಶುಚಿತ್ವ ಕಾಯ್ದುಕೊಳ್ಳುವ ಮೂಲಕ ಸಾರ್ಕಜನಿಕರಿಗೆ ಅಲಕೂಲಕರ ವಾತಾವರಣ ನಿರ್ಮಿಸಬೇಕು.
 ಜ್ಞಾನದೇವ ದೊಡ್ಡಮೇಟಿ
ಮಾಜಿ ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.