ಗದಗ

ದುರಸ್ತಿಗೊಳ್ಳದೆ ಅವ್ಯವಹಾರ

Published On :

ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದ ಮಹಿಳಾ ವಸತಿ ನಿಲಯದಲ್ಲಿ ಗದಗ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಿತಿ ಕೇಂದ್ರದವರು ವಸತಿ ನಿಲಯದ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದು, ಯಾವುದೇ ಕಾರ್ಯ ಮಾಡದೇ ಬರೀ ಸುಣ್ಣ-ಬಣ್ಣ ಮಾಡಿಸಿ ಲಕ್ಷಾಂತರ ಹಣ ಅವ್ಯವಹಾರ ಮಾಡಿರುವುದಾಗಿ ಆ ಕ್ಷೇತ್ರದ ತಾಪಂ ಸದಸ್ಯ ತಿಮ್ಮರಡ್ಡಿ ಅಳವಂಡಿ ಆರೋಪಿಸಿದರು.
ಶುಕ್ರವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಈ ಕುರಿತು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ವಸತಿ ನಿಲಯದ ಮೇಲ್ವಿಚಾರಕಿ (ವಾರ್ಡನ್) ಶಾಂತಾ ಕಟಗಿ ಅವರನ್ನು ಸಂಪರ್ಕಿಸಿ ಕಾಮಗಾರಿ ಕುರಿತು ಮಾಹಿತಿ ಕೇಳಿದರೆ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ನಿಲಯದಲ್ಲಿ ಸರಿಯಾಗಿ ಮಕ್ಕಳಿಗೆ ಶೌಚಾಲಯ, ಕಾಟು, ತಾಟು ಯಾವುದೇ ವ್ಯವಸ್ಥೆಯಿಲ್ಲ. ಮೇಲ್ವಿಚಾರಕಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ವಾರಕ್ಕೊಮ್ಮೆ ತಪ್ಪದೇ ಎಲ್ಲ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಹಿಂದುಳಿದ ವರ್ಗಗಳ ತಾಲೂಕು ವಿಸ್ತರಣಾಧಿಕಾರಿ ಎಸ್.ಜಿ. ಹುಣಶ್ಯಾಳ ಅವರಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸರ್ಕಾರದಿಂದ ಬರುವ ಕೋಟ್ಯಂತರ ಅನುದಾನ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗುತ್ತಿಲ್ಲ. ಪಿಡಿಒಗಳು ಗ್ರಾಮ ಸಭೆ ನಡೆಸುತ್ತಿಲ್ಲ. ಸದಸ್ಯರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ತಾಪಂ ಸದಸ್ಯ ಚನ್ನಪ್ಪ ಜಗಲಿ, ಶಿವನಗೌಡ ಕಂಠಿಗೌಡ್ರ, ನಿಂಬಣ್ಣ ಮಡಿವಾಳರ ಆಗ್ರಹಿಸಿದರು.
ಯಾವುದೇ ಕಂಪನಿಯಿಂದ ಅನುಮೋದನೆ ಪಡೆಯದೇ ಕೃಷಿ ಇಲಾಖೆ ಅಧಿಕಾರಿಗಳ ಸಹಕಾರದಿಂದ ಖಾಸಗಿ ಕಂಪನಿಯವರು ತಾಲೂಕಿನಾದ್ಯಂತ ಕಳಪೆ ಗುಣಮಟ್ಟದ ಕನಕ ಬಿಟಿ ಹತ್ತಿ ಬೀಜ ಪೂರೈಕೆ ಮಾಡಿದ್ದು, ಬಿತ್ತನೆ ಮಾಡಿದ ರೈತರು ಫಸಲು ಬಾರದೇ ಕಂಗಾಲಾಗಿದ್ದಾರೆ. ಹೆಚ್ಚು ಇಳುವರಿ ಬರುವುದಾಗಿ ಸಲಹೆ ನೀಡಿ, ರೈತರ ಮನವೊಲಿಸಿ ಹತ್ತಿ ಬಿತ್ತನೆ ಮಾಡಿಸಿದ ಕೃಷಿ  ಅಧಿಕಾರಿಗಳು ರೈತರನ್ನು ವಂಚಿಸಿದ ಪಂಕನಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾನಿ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಕೊಡಿಸಲು ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸುವಂತೆ ಸದಸ್ಯರು ಸೂಚನೆ ನೀಡಿದರು. ತಾಲೂಕಿನ ಅಮರಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನೋರ್ವ ನಿತ್ಯ ಸಾರಾಯಿ ಕುಡಿದು ಆಗಮಿಸುತ್ತಾನೆ. ಮಕ್ಕಳ ಓದಿಗೆ ಇಂತಹ ಶಿಕ್ಷಕರಿಂದ ಹಿನ್ನಡೆಯಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗುವಂತೆ ಸದಸ್ಯೆ ಸುಶೀಲಾ ಪರಮೇಶ ಲಮಾಣಿ ಆಗ್ರಹಿಸಿದರು.
ಅಭಿಯಂತರ ಬಗ್ಗೆ ಅಪಸ್ವರ: ಜಿಪಂ ಇಲಾಖೆಯ ಅಭಿಯಂತರ ಅಥಣಿಯವರು ಇಲಾಖಾ ವ್ಯಾಪ್ತಿಯಡಿ ಕೈಗೊಂಡ ಬಹುತೇಕ ಕಾಮಗಾರಿಗಳು ಕಳಪೆಯಾಗಿವೆ. ಕೆಲವೆಡೆ ಕಾಮಗಾರಿಗಳೇ ನಡೆದಿಲ್ಲ.
ಕುಡಿಯುವ ನೀರು ಪೂರೈಕೆ ಯೋಜನೆಯಡಿ ಬೇಕಾಬಿಟ್ಟಿ ಹಣ ತೆಗೆಯಲಾಗಿದ್ದು, ಎಲ್ಲಿಯೂ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಿಲ್ಲ. ಇದಕ್ಕೆ ತಾಜಾ ಉದಾಹಣೆ ಎಂದರೆ ಮಾಡಳ್ಳಿ ಗ್ರಾಮದಲ್ಲಿ ನಡೆದ ಕಾಮಗಾರಿಯೇ ಸಾಕ್ಷಿ ಎಂದು ಸದಸ್ಯ ನಿಂಬಣ್ಣ ಮಡಿವಾಳರ ಹೇಳಿದರು. ತಾಪಂ ಅಧ್ಯಕ್ಷರಾದ ಸುನಂದ ಬಿದರಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾರದ ಕವಲೂರ, ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆಪ್ಪ ವರ್ದಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಸಭೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.