ಆರಕ್ಷಕರಿಗಿಲ್ಲ ಸುಸಜ್ಜಿತ ವಸತಿ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 1
ಪಟ್ಟಣದಲ್ಲಿರುವ ಓಬೆರಾಯನ ಕಾಲದ ಪೊಲೀಸ್ ಠಾಣೆ ಮತ್ತು ಆರಕ್ಷಕರ ವಸತಿ ಗೃಹಗಳು ದುಸ್ಥಿತಿಗೆ ತಲುಪಿವೆ. ಮಳೆ ಬಂದರೆ ನಿರಂತರ ಸೋರುತ್ತಿವೆ.
ಪ್ರಾಣದ ಹಂಗು ತೊರೆದು ಸಮಾಜದ ಹಿತಕ್ಕೆ ಹಗಲಿರುಳು ಶ್ರಮಿಸುತ್ತಿರುವ ಸ್ಥಳೀಯ ಠಾಣೆ ಪೊಲೀಸ್ ಸಿಬ್ಬಂದಿಗೆ ಮೂಲ ಸೌಕರ್ಯದ ಜತೆಗೆ ಸುಸಜ್ಜಿತ ವಸತಿ ಇಲ್ಲದೆ ಇರುವುದು ನಮ್ಮ ಆಡಳಿತ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
1912ರಲ್ಲಿ ಬ್ರಿಟಿಷರು ನಿರ್ಮಿಸಿರುವ ಗಜೇಂದ್ರಗಡ ಪೊಲೀಸ್ ಠಾಣೆ ಮತ್ತು ಪೊಲೀಸರ ವಸತಿ ಕಟ್ಟಡಕ್ಕೆ ಶತಮಾನೋತ್ಸವ ಸಂಭ್ರಮಾಚರಣೆ ಮಾಡುವುದು ಒತ್ತಟ್ಟಿಗೆ ಇರಲಿ, ಒಂದು ಕುಟುಂಬ ವಾಸಿಸಲು ಇರುವಂತ ವ್ಯವಸ್ಥೆ ಇಲ್ಲದಿರುವುದು ದುರ್ದೈವದ ಸಂಗತಿ. ಪೊಲೀಸರು ವಾಸಿಸುವ ಕೆಂಪು ಹಂಚಿನ ಮನೆಗಳು ಅಲ್ಲಲ್ಲಿ ಸೋರುತ್ತಿವೆ. ಶೌಚಾಲಯ ಅವ್ಯವಸ್ಥೆಯಿಂದ ಆರಕ್ಷಕರು ಹಾಗೂ ಅವರ ಕುಟುಂಬ ಸದಸ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದರೂ ಇವರ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಇಂತಹ ದುರ್ಬಲಾವಸ್ಥೆಯಲ್ಲಿ ಬಳಲುತ್ತಿರುವ ನಮ್ಮ ರಕ್ಷಣೆ ಜವಾಬ್ದಾರಿ ಹೊತ್ತ ಪೊಲೀಸರ ಸ್ಥಿತಿ ಗಂಟಲಲ್ಲಿ ಸಿಕ್ಕ ಬಿಸಿ ತುಪ್ಪದಂತಾಗಿದೆ.
ಕೇವಲ 9 ವಸತಿ ಗೃಹಗಳು: ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಗಜೇಂದ್ರಗಡ ಪಟ್ಟಣದಲ್ಲಿ ಅಷ್ಟೇ ವೇಗವಾಗಿ ಸಮಸ್ಯೆಗಳ ಪ್ರಮಾಣವೂ ಬೆಳೆಯುತ್ತಿದ್ದು, ಪೊಲೀಸ್ ಇಲಾಖೆ ಸಮಾಜದ ಶಾಂತಿ, ಸುವ್ಯವಸ್ಥೆಗಾಗಿ ಶ್ರಮಿಸುತ್ತದೆ. ಜನರ ರಕ್ಷಣೆಗೆ ದುಡಿಯುವ ಪೊಲೀಸರಿಗೆ ಉತ್ತಮ ಸೌಲಭ್ಯ ನೀಡುವುದು ಅವಶ್ಯಕ. ಒಟ್ಟು 41 ಸಿಬ್ಬಂದಿಯಿದ್ದು, 9 ವಸತಿ ಗೃಹಗಳಿವೆ. ಉಳಿದವರು ಹೆಚ್ಚಿನ ಹಣ ನೀಡಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಂಗಳೂರ ಕೆಂಪು ಹಂಚಿನ ಛಾವಣಿ ಇರುವ ವಸತಿ ಗೃಹಗಳು ಅಲ್ಲಲ್ಲಿ ಒಡೆದು ಮಳೆ ನೀರು ಒಳಗೆ ಬರುತ್ತದೆ.
ಕಟ್ಟಡ ಶಿಥಿಲಾವಸ್ಥೆ: ಬ್ರಿಟಿಷ ಕಾಲದ ಬಂದೂಕುಗಳನ್ನು ಇಟ್ಟುಕೊಂಡ ಓಬೆರಾಯನ ಕಾಲದ ಹಳೇಯ ಪೊಲೀಸ್ ಠಾಣೆ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಎರಡು ಸೆಲ್‌ನಲ್ಲಿ ಮೊದಲನೆಯದು ಪಿಎಸ್‌ಐ ಕಾರ್ಯಾಲಯ, ಮತ್ತೊಂದು ಕೊಣೆಯಲ್ಲಿ ಆರಕ್ಷಕ ಸಿಬ್ಬಂದಿ ದಾಖಲೆ, ಇತರ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ಮತ್ತೊಂದೆಡೆ ಗಜೇಂದ್ರಗಡ ಪೊಲೀಸ್ ಇಲಾಖೆ ಸಬಲೀಕರಣಕ್ಕೆ ಇನ್ನೂವರೆಗೂ ಯಾರೂ ಮುಂದಾಗಿಲ್ಲ ಎನ್ನುವ ಅಪವಾದವಿದೆ.
ಸಿಬ್ಬಂದಿ ಕೊರತೆ: ಭೌಗೋಳಿಕ, ಜನಸಂಖ್ಯೆ ಪರಿಗಣಿಸಿ ಅಗತ್ಯವಿರುವ ಸಿಬ್ಬಂದಿ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಸರ್ಕಾರ ಪೊಲೀಸರ ಸಂಖ್ಯೆ ಹೆಚ್ಚಿಸುತ್ತಿದೆ. ಆದರೆ ಇಲ್ಲಿ ಮಾತ್ರ ಸಿಬ್ಬಂದಿ ಅಷ್ಟೆ ಇದೆ. ಪೊಲೀಸ್ ಸಿಬ್ಬಂದಿಗೆ ಮೂಲ ಸೌಕರ್ಯ ಕಲ್ಪಿಸಲು ಮುಂದಾಗದ ಸರ್ಕಾರ, ವಸತಿ ನಿರ್ಮಾಣ ಗಗನ ಕುಸುಮವಾಗಿದೆ. ನೌಕರರು ಅಸಹಜವಾಗಿ ಮೃತಪಟ್ಟಲ್ಲಿ ನೀಡುವ ವಿಮಾ ಮೊತ್ತವನ್ನು ರು. 3 ರಿಂದ 10 ಲಕ್ಷಗಳಿಗೆ ಏರಿಕೆ, 2012-13ನೇ ಸಾಲಿನಲ್ಲಿ ಪೊಲೀಸ್ ಕಲ್ಯಾಣ ನಿಧಿ ಬಿಟ್ಟರೆ ಹೆಚ್ಚಿನ ಸೌಕರ್ಯಗಳು ಇವರಿಗೆ ದೊರಕಿಲ್ಲ. ರೋಣದಲ್ಲಿ ಹೈಟೆಕ್ ಪೊಲೀಸ್ ಠಾಣೆ ನಿರ್ಮಿಸಲಾಗಿದೆ. ನರೇಗಲ್‌ನಲ್ಲಿ ಪೊಲೀಸ್ ವಸತಿ ಸಮುಚ್ಛಯ ನಿರ್ಮಿಸಲಾಗಿದೆ. ಆದರೆ ಅಕ್ರಮ ಚಟುವಟಿಕೆ ವ್ಯಾಪಕ ನಡೆಯುವ ಸ್ಥಳದ ಮಧ್ಯೆ ಇರುವ ಓಬೆರಾಯನ ಕಾಲದ ಗಜೇಂದ್ರಗಡ ಪೊಲೀಸ್ ಠಾಣೆ ಮತ್ತು ಆರಕ್ಷಕ ಸಿಬ್ಬಂದಿ ಮನೆಗಳಿಗೆ ಮುಕ್ತಿ ಕೊಟ್ಟು, ಹೈಟೆಕ್ ಟಚ್ ನೀಡಿ ಸಾರ್ವಜನಿಕರ ನೆಮ್ಮದಿಗೆ ಕಾರಣರಾಗಿರುವ ಆರಕ್ಷಕರಿಗೂ ನೆಮ್ಮದಿ ಸಿಗುವಂತಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

