ಮುಂಡರಗಿ ಗಣೇಶನಿಗೆಭಾರಿ ಬೇಡಿಕೆ
ಕನ್ನಪ್ರಭ ವಾರ್ತೆ, ಮುಂಡರಗಿ, ಸೆ. 2
ಪಟ್ಟಣದ ಚಿತ್ರಗಾರ ಕುಟುಂಬ 30 ವರ್ಷಗಳಿಂದ ಮಣ್ಣಿನಲ್ಲಿಯೇ ಆಕರ್ಷಕ ಗಣಪತಿ ಮೂರ್ತಿ ತಯಾರಿಸುತ್ತಾ ಬಂದಿದ್ದು, ಇಂದಿನ ಪ್ಲಾಸ್ಟರ್ ಆಫ್ ಫ್ಯಾರೀಸ್ ಗಣಪತಿ ಮೂರ್ತಿಗಳ ಮಧ್ಯೆಯೂ ಈ ಪರಿಸರ ಸ್ನೇಹಿ ಗಣಪನಿಗೆ ಬೇಡಿಕೆ ಹೆಚ್ಚಿದೆ.
ಗಣಪತಿ ಹಬ್ಬವೆಂದರೆ ಮಣ್ಣಿನ ಗಣಪತಿ ಮೂರ್ತಿ ಮಾಡಿ ಅದಕ್ಕೆ ಪೂಜೆ ಸಲ್ಲಿಸಿ ಆಚರಿಸುವುದು ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಫ್ಯಾರೀಸ್ನಿಂದ ತಯಾರಿಸಿದ ಗಣೇಶ ಮೂರ್ತಿಗಳ ಅಬ್ಬರದಲ್ಲಿ ಮಣ್ಣಿನಿಂದ ತಯಾರಿಸಿದ ಗಣಪತಿಗಳು ಬೇಡಿಕೆ ಕಳೆದುಕೊಳ್ಳುತ್ತಿವೆ. ಆದರೆ, ಚಿತ್ರಗಾರ ಕುಟುಂಬದವರು ಮಣ್ಣಿನಲ್ಲಿಯೇ ಸುಂದರವಾದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದು, ಇವುಗಳು ಜನರನ್ನು ಆಕರ್ಷಿಸುತ್ತಿವೆ.
ಉತ್ತಮ ಮಣ್ಣಿನಿಂದಲೇ ಮೂರ್ತಿ: 30 ವರ್ಷಗಳ ಹಿಂದೆ ತಮ್ಮ ಪತಿ ಮಾಡಿಕೊಂಡು ಬರುತ್ತಿದ್ದ ಮಣ್ಣಿನ ಗಣಪತಿ ತಯಾರಿಸುವ ಕಾಯಕವನ್ನು ಇದೀಗ ಅವರ ಪತ್ನಿ ಭಾಗ್ಯಮ್ಮ ಚಿತ್ರಗಾರ ಹಾಗೂ ಅವರ ಮಗ ಶಿವಕುಮಾರ ಮುಂದುವರೆಸಿಕೊಂಡು ಹೊರಟಿದ್ದಾರೆ. ಉತ್ತಮ ಮೂರ್ತಿಗಳು ತಯಾರಾಗಲು ಹಾಗೂ ಯಾವುದೇ ರೀತಿಯ ಒಡುಕು, ಬಿರುಕು ಬಿಡದಂತೆ ಮೂರ್ತಿಗಳನ್ನು ತಯಾರಿಸಲು ಉತ್ತಮ ಗುಣಮಟ್ಟದ ಮಣ್ಣು ಅವಶ್ಯಕ. ಇದಕ್ಕಾಗಿ ಪಕ್ಕದ ಕೊಪ್ಪಳ ಮತ್ತು ಹಾವೇರಿ ಜಿಲ್ಲೆಗೆ ಹೋಗಿ ಮಣ್ಣು ತಂದು ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ.
ಅಚ್ಚಿಗೆ ಹಾಕಿ ತಯಾರಿ: ಈ ಹಿಂದೆ ಗಣಪತಿ ಮಾರಾಟ ಕಡಿಮೆ ಪ್ರಮಾಣದಲ್ಲಿದ್ದಾಗ ತಾವೇ ಕೈಯಿಂದ ತಯಾರಿಸುತ್ತಿದ್ದರು. ಆದರೆ ಈಚೆಗೆ ಚಿತ್ರಗಾರ ಕುಟುಂಬದವರು ತಯಾರಿಸುತ್ತಿರುವ ಈ ಕುದರಿಮೋತಿ ಗಣಪತಿಗೆ (ಗಣಪತಿಯ ತಯಾರಿಕೆಯ ವಿಶೇಷ ಮಾದರಿ) ಹೆಚ್ಚು ಬೇಡಿಕೆ ಬರುತ್ತಿದ್ದು, ಬೇಡಿಕೆ ಈಡೇರಿಸಲು ಸಣ್ಣ ಗಣಪತಿ ಮೂರ್ತಿಗಳನ್ನು ಅಚ್ಚುಪಡಿಯಲ್ಲಿಯೇ ತಯಾರಿಸಿ ನಂತರ ಅವುಗಳಿಗೆ ಕೈಯಿಂದಲೇ ಬಣ್ಣ ಹಚ್ಚುವುದು ಇಲ್ಲಿನ ಗಣಪತಿಯ ಮತ್ತೊಂದು ವಿಶೇಷತೆಯಾಗಿದೆ.
ಇಲ್ಲಿ ತಯಾರಾಗುವ ಗಣಪತಿಗಳು ತಾಲೂಕಿನ ಎಲ್ಲ ಗ್ರಾಮಗಳಿಗೆ ಹಾಗೂ ನೆರೆಯ ಕೊಪ್ಪಳ, ಗಂಗಾವತಿ, ಹೊಸಪೇಟೆ, ಯಲಬುರ್ಗಾ, ಕುಕನೂರ, ಕುಷ್ಟಗಿ, ಸಿಂಧನೂರು, ರಾಯಚೂರು, ಕನಕಗಿರಿ ಸೇರಿದಂತೆ ಅನೇಕ ದೊಡ್ಡ ದೊಡ್ಡ ನಗರಗಳಿಗೂ ರವಾನೆಯಾಗುತ್ತವೆ.
ಆಕರ್ಷಕ ಗಣಪತಿ: ಗಣಪತಿಗಳನ್ನು ತಯಾರಿಸುವುದಷ್ಟೇ ಮುಖ್ಯವಲ್ಲ. ಅವುಗಳು ಜನರಿಗೆ ಆಕರ್ಷಕವಾಗುವಂತೆ ವಿನ್ಯಾಸ ಮಾಡುವುದು ಒಂದು ಕಲೆ. ಬಸವಣ್ಣನ ಮೇಲೆ ಕುಳಿತಿರುವ ಗಣಪ, ರಾಕ್ಷಸನ ಮೇಲೆ ಕುಳಿತ ಗಣಪ, ಇಲಿಯ ಮೇಲೆ ಕುಳಿತ ಗಣಪ, ಕೊಳಲು ನುಡಿಸುವ ಗಣಪ, ತಿರುಪತಿ ವೆಂಕಟರಮಣ ರೂಪದ ಗಣಪ ಸೇರಿದಂತೆ ಅನೇಕ ರೀತಿಯ ಸುಂದರವಾದ ಗಣಪತಿ ಮೂರ್ತಿಗಳು ಇಲ್ಲಿ ತಯಾರಾಗುತ್ತವೆ.
ನಮ್ಮ ಹಿರಿಯರಿಂದ ಬಂದ ಈ ಕಲೆಯನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಮಕ್ಕಳೊಂದಿಗೆ ಇಂದಿಗೂ ಕಷ್ಟಪಟ್ಟು ಈ ಕೆಲಸ ಮಾಡುತ್ತಿದ್ದೇನೆ. ನಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುತ್ತಿಲ್ಲ. ಮಳೆ, ಬೆಳೆ ಸರಿಯಾಗಿದ್ದರೆ ದೊಡ್ಡ ಪ್ರಮಾಣದ ಮೂರ್ತಿಗಳಿಗೆ, ಸಾರ್ವಜನಿಕ ಗಣಪತಿಗಳಿಗೆ ಬೇಡಿಕೆ ಇರುತ್ತದೆ. ಇಲ್ಲವಾದಲ್ಲಿ ಯಥಾ ಪ್ರಕಾರ ನಡೆಯುತ್ತದೆ. ಇದನ್ನೇ ಒಂದು ಉದ್ಯೋಗ ಮಾಡಿಕೊಂಡು ಜೀವನ ನಡೆಸುವ ನಮ್ಮಂಥವರಿಗೆ ಸರ್ಕಾರ ಸಹಕಾರ ನೀಡಬೇಕಿದೆ.
- ಭಾಗ್ಯಮ್ಮ ಚಿತ್ರಗಾರ
ಗಣೇಶ ಮೂರ್ತಿ ತಯಾರಕಿ
-ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

