ಶಾಲೆಗಳಿಗೆ ಸಪ್ತ ಸೌಲಭ್ಯ: ಎಚ್ಕೆ
ಕನ್ನಡಪ್ರಭ ವಾರ್ತೆ, ಗದಗ, ಸೆ. 5
ಜಿಲ್ಲೆಯಲ್ಲಿರುವ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಈಗಾಗಲೇ ಪಂಚ ಸೌಲಭ್ಯಗಳಿದ್ದು, ಅದರೊಟ್ಟಿಗೆ ಶುದ್ಧ ಕುಡಿವ ನೀರು ಹಾಗೂ ಕಂಪ್ಯೂಟರ್ ಕೇಂದ್ರಗಳು ಸೇರಿದಂತೆ ಮುಂಬರುವ 2 ವರ್ಷದಲ್ಲಿ ಸಪ್ತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಗುರುವಾರ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಿಪಂ, ಸಾ.ಶಿ. ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ 2013-14ನೇ ಡಾ. ಎಸ್. ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
1985ರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಶಿಕ್ಷಣ ಕ್ಷೇತ್ರದ ಮೂಲಕ ಉತ್ತಮ ನಾಗರಿಕರನ್ನು ರಾಷ್ಟ್ರಕ್ಕೆ ನೀಡುವ ಕಾರ್ಯ ಶಿಕ್ಷಕ ಸಮುದಾಯದಿಂದ ಆಗಬೇಕಿದೆ. ಶಿಕ್ಷಕ ವೃತ್ತಿ ರಾಷ್ಟ್ರಕ್ಕೆ ಸಮರ್ಪಿತವಾದಾಗ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಗೆ ಹೆಚ್ಚಿನ ಮೆರಗು ಬರಲಿದೆ. ಬೋಧನೆ ಸಂದೇಶಗಳ ಮೂಲಕ ಮನು ಕುಲಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ ಡಾ. ರಾಧಾಕೃಷ್ಣನ್ ಅವರ ಕುರಿತು ಪ್ರತಿಯೊಬ್ಬ ಶಿಕ್ಷಕರು ಅರಿಯಬೇಕಿದ್ದು, ಶೇ. 90 ರಷ್ಟು ಶಿಕ್ಷಕರು ಅವರನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿರುವುದು ಬೇಸರದ ಸಂಗತಿ.
ಕಳೆದ ಕೆಲವು ದಶಕಗಳಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮಧ್ಯೆ ಸಂಬಂಧ ಕಡಿತಗೊಳ್ಳುತ್ತಿದೆ. ಆಧುನಿಕ ತಂತ್ರಜ್ಞಾನ ನೇರವಾಗಿ ವಿದ್ಯಾರ್ಥಿಗಳನ್ನು ತಲುಪುತ್ತಿರುವ ಸಂದರ್ಭದಲ್ಲಿ ಶಿಕ್ಷಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಕುರಿತು ತಿಳಿವಳಿಕೆ ಹೊಂದಿ, ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿ ಮತ್ತು ಶಿಕ್ಷಕರ ಮಧ್ಯೆ ಸಮನ್ವಯತೆ ಸಾಧಿಸುವತ್ತ ಗಮನ ನೀಡಬೇಕಿದೆ. ಶಿಕ್ಷಕರ ದಿನಾಚರಣೆ ಇದು ಕೇವಲ ಆಚರಣೆಯಾಗದೇ ಆತ್ಮಾವಲೋಕನ ದಿನವಾಗಬೇಕಿದೆ ಎಂದರು.
ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಪ್ರೊ. ಚಂದ್ರಶೇಖರ ವಸ್ತ್ರದ ಉಪನ್ಯಾಸ ನೀಡಿ, ಶಿಕ್ಷಕ ದಿನಾಚರಣೆ ಆತ್ಮಾವಲೋಕನಕ್ಕೆ ಸಕಾಲವಾಗಿದ್ದು, ಶಿಕ್ಷಕರು ಫಲಿತಾಂಶ ಕೇಂದ್ರಿತ ಶಿಕ್ಷಣ ಪದ್ಧತಿಯಿಂದ ದೂರವಾಗಿ, ಪರಿಣಾಮ ಕೇಂದ್ರಿತ ಶಿಕ್ಷಣದತ್ತ ಒಲವು ನೀಡಬೇಕಿದೆ. ನಿರಂತರ ಅಧ್ಯಯನ ಶೀಲತೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲು ಪಣ ತೊಡಬೇಕಿದ್ದು, ಮಕ್ಕಳಲ್ಲಿ ಸಮಾಜ ಮುಖಿ ವ್ಯಕ್ತಿತ್ವ ರೂಪಿಸುವ ಕಾರ್ಯ ಪ್ರಾಥಮಿಕ ಶಾಲಾ ಶಿಕ್ಷಕರದ್ದಾಗಿದ್ದು, ಈ ಮೂಲಕ ಶಿಕ್ಷಕರು ಉತ್ತಮ ಶೈಕ್ಷಣಿಕ ನಾಡು ಕಟ್ಟಲು ಬದ್ಧರಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ 17 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ 15 ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಹೊಸಳ್ಳಿ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಶ್ರೀಗಳು ವಹಿಸಿ, ಆಶೀರ್ವಚನ ನೀಡಿದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಡಿ.ಸಿ.ಎನ್.ಎಸ್. ಪ್ರಸನ್ನಕುಮಾರ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಜಿಪಂ ಸಿಇಓ ವೀರಣ್ಣ ತುರಮರಿ, ಡಿಡಿಪಿಐ ರಾಜೀವ ನಾಯಕ, ಡಯಟ್ ಪ್ರಾಚಾರ್ಯ ಬಿ.ಎಸ್. ರಘುವೀರ್, ಐ.ಬಿ. ಬೆನಕೊಪ್ಪ, ಶರಣಪ್ಪ ಗುಡ್ಲಾನೂರ, ವಿವಿಧ ಶಿಕ್ಷಕ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

