ವೈದ್ಯರ ಕೊರತೆ: ಬಾಣಂತಿಯರ ಪರದಾಟ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 6
ಸುಸಜ್ಜಿತ ಕಟ್ಟಡ, ಕೊಠಡಿ, ಹಾಸಿಗೆ, ಅಗತ್ಯ ಔಷಧಿ ಸಾಮಗ್ರಿಗಳಿವೆ. ನಿತ್ಯ ನೂರಾರು ರೋಗಿಗಳು ಬರುತ್ತಾರೆ. ಅಪಘಾತ ಪ್ರಕರಣ ನಿತ್ಯ ದಾಖಲಾಗುತ್ತಲೇ ಇರುತ್ತವೆ. ಆದರೆ, ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ (ಸರ್ಕಾರಿ ಆಸ್ಪತ್ರೆ) ಬಳಲುತ್ತಿದೆ.
ಗದಗ ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಹಾಗೂ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡ ಪಟ್ಟಣಕ್ಕೆ ಸುತ್ತಲಿನ ಕುಷ್ಟಗಿ, ಯಲಬುರ್ಗಾ, ಹುನಗುಂದ ತಾಲೂಕುಗಳ ಹಲವಾರು ಗ್ರಾಮಗಳ ರೋಗಿಗಳಿಗೆ ಗಜೇಂದ್ರಗಡ ಸರ್ಕಾರಿ ಆಸ್ಪತ್ರೆ ಮುಖ್ಯ ಕೇಂದ್ರವಾಗಿದೆ. ಚಿಕಿತ್ಸೆ, ಹೆರಿಗೆಗಾಗಿ ಬರುವವರೇ ಹೆಚ್ಚು. ಸ್ತ್ರೀ ರೋಗ ತಜ್ಞ ವೈದ್ಯರ ಕೊರತೆಯಿಂದ ಮಹಿಳೆಯರು ಪರದಾಡುವಂತಾಗಿದೆ.
ಈ ಆಸ್ಪತ್ರೆಯಲ್ಲಿ 30 ಹಾಸಿಗೆಗಳಿದ್ದು, ನಿತ್ಯ ನೂರಾರು ಹೊರ ರೋಗಿಗಳು ಬರುತ್ತಾರೆ. ಜತೆಗೆ ನಿತ್ಯ ಒಂದಲ್ಲೊಂದು ಅಪಘಾತ ಪ್ರಕರಣಗಳು ಸೇರಿ ತುರ್ತು ಚಿಕಿತ್ಸಾ ಪ್ರಕರಣಗಳು ಇಲ್ಲಿ ಮಾಮೂಲು. ಆಸ್ಪತ್ರೆಯಲ್ಲಿ ಕನಿಷ್ಠ 5 ವೈದ್ಯರ ಅವಶ್ಯಕತೆ ಇದೆ. ಆದರೆ, ಇಬ್ಬರೇ ವೈದ್ಯರು ಇರುವುದರಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಸಮಸ್ಯೆಯಾಗುತ್ತಿದೆ. ಆಸ್ಪತ್ರೆಗೆ ಇಬ್ಬರು ಡಿ. ಗ್ರೂಪ್ ನೌಕರರ ಹಾಗೂ ಓರ್ವ ಎಫ್ಡಿಎ ಸಿಬ್ಬಂದಿ ಅವಶ್ಯಕತೆ ಇದೆ ಎನ್ನುವುದು ಆಸ್ಪತ್ರೆ ವೈದ್ಯರ ಮಾತು. ಒಳರೋಗಿಗಳಿಗೆ, ಹೊರ ರೋಗಿಗಳಿಗೆ ಶುಶ್ರೂಶೆ ಮಾಡುವುದರ ಜತೆಗೆ ಅಪಘಾತ ಪ್ರಕರಣ, ಮರಣೋತ್ತರ ಪರೀಕ್ಷೆಗೂ ಆಸ್ಪತ್ರೆ ವೈದ್ಯಾಧಿಕಾರಿಯೇ ಕಾರ್ಯನಿರ್ವಹಿಸಬೇಕಾಗಿರುವುದರಿಂದ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸಮಸ್ಯೆಯಿಂದಾಗಿ ರೋಗಿಗಳು ಪಡಬಾರದ ಕಷ್ಟಪಡುತ್ತಿದ್ದಾರೆ.
ಗಂಟೆಗಟ್ಟಲೆ ಕಾಯಬೇಕು: ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುವ ರೋಗಿಗಳು ಸರದಿಯಲ್ಲಿ ಗಂಟೆಗಟ್ಟಲೆ ನಿಂತು ವೈದ್ಯರಿಗಾಗಿ ಕಾಯುವ ಸ್ಥಿತಿ ಇದೆ. ಏಕೆಂದರೆ ಇರುವ ಓರ್ವ ವೈದ್ಯರೇ ಎಲ್ಲ ಕಾರ್ಯಗಳನ್ನು ನಿರ್ವಹಿಸಿ ಚಿಕಿತ್ಸೆ ನೀಡಬೇಕು. ಜತೆಗೆ ರಾತ್ರಿ ಸಮಯದಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿರುತ್ತವೆ. ಆದರೆ, ಅಗತ್ಯ ವೈದ್ಯರು ಸಿಬ್ಬಂದಿಗಳಿಲ್ಲದಕ್ಕೆ ಜನರ ಪರದಾಟ ಇಲ್ಲಿ ಸಾಮಾನ್ಯವಾಗಿದೆ. ಆದ್ದರಿಂದ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ನೀಡಬೇಕಿರುವುದು ಅವಶ್ಯವಾಗಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಒಮ್ಮೆ ಕಣ್ತೆರೆದು ನೋಡಿ ಅಗತ್ಯ ವೈದ್ಯರು, ಸಿಬ್ಬಂದಿ ನೇಮಕ ಜತೆಗೆ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಕೇವಲ ರಾಜಕೀಯ ನಾಯಕರ ಹುಟ್ಟುಹಬ್ಬ ಸಂದರ್ಭದಲ್ಲಿ ಇಲ್ಲಿನ ರೋಗಿಗಳಿಗೆ ಹಾಲು, ಹಣ್ಣು ವಿತರಿಸಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ಮತ್ತೆ ಇತ್ತ ತಿರುಗಿ ನೋಡದ ರಾಜಕೀಯ ಮುಖಂಡರು, ಸರ್ಕಾರಿ ಆಸ್ಪತ್ರೆಯ ಸಮಸ್ಯೆ ಪರಿಹರಿಸಲು ಗಮನ ನೀಡಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಇಲ್ಲಿ ವೈದ್ಯರು, ಸಿಬ್ಬಂದಿಯ ಅವಶ್ಯಕತೆ ಇದೆ. ಒಳರೋಗಿ, ಹೊರ ರೋಗಿಗಳ ಚಿಕಿತ್ಸೆ, ತುರ್ತು ಪ್ರಕರಣ, ಅಪಘಾತ ಪ್ರಕರಣ ಆಸ್ಪತ್ರೆಯಲ್ಲಿ ದಾಖಲಾಗುತ್ತಿವೆ. ಆದರೆ, ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಮತ್ತು ವೈದ್ಯರ ಕೊರತೆಯಿಂದ ನಮಗೆ ಕಷ್ಟವಾಗಿದೆ. ಈ ಬಗ್ಗೆ ಸಂಬಂಧಿಸಿದ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಭರವಸೆ ನೀಡಿದ್ದಾರೆ.
ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯಲ್ಲಿನ ಸಮಸ್ಯೆ ನಿವಾರಣೆಗೆ ಬಜೆಟ್ನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಗದಗನಲ್ಲಿ ರು. 8 ಕೋಟಿ ವೆಚ್ಚದಲ್ಲಿ ಹೆರಿಗೆ ಆಸ್ಪತ್ರೆ ನವೀಕರಣ ಹಾಗೂ ಜಿಲ್ಲೆಯ ನರಗುಂದ, ರೋಣ, ಮುಂಡರಗಿಯಲ್ಲಿ ನೂರು ಹಾಸಿಗೆಯ ಆಸ್ಪತ್ರೆ ಕಟ್ಟಡಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಮೂಲ ಸೌಲಭ್ಯ ಎದುರಿಸುತ್ತಿರುವ ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಗೆ ಚಿಕ್ಕ ಮಕ್ಕಳ ಅರವಳಿಕೆ, ಹಾಗೂ ಸ್ತ್ರೀ ತಜ್ಞ ವೈದ್ಯರ ನೇಮಕ ಶೀಘ್ರದಲ್ಲಿ ನಡೆಯಲಿದೆ. ಇದರಿಂದ ಈ ಭಾಗದ ಬಡ ರೋಗಿಗಳ ಸಮಸ್ಯೆಗೆ ಪರಿಹಾರ ಸಿಗಲಿದೆ.
-ಡಿ.ಬಿ. ಚನ್ನಶೆಟ್ಟಿ (ಜಿಲ್ಲಾ ಆರೋಗ್ಯಾಧಿಕಾರಿ)
-ಡಿ.ಜಿ. ಮೋಮಿನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

