ಗದಗ

ದಲಿತ ಕೇರಿ ನಿರ್ಲಕ್ಷ್ಯ: ಆರೋಪ

Published On :

ರೋಣ: ದಲಿತ ಕೇರಿಯ ಅಭಿವೃದ್ಧಿ ಮತ್ತು ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಆರ್.ಕೆ. ಖತೀಬ ಅವರು ನಮ್ಮನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ ಎಂದು ತಾಲೂಕಿನ ಕೊತಬಾಳ ಗ್ರಾಮ ಪಂ ಚಾಯಿತಿ ವ್ಯಾಪ್ತಿಯ ಮುಗಳಿ ಗ್ರಾಮದಲ್ಲಿ       ಶನಿವಾರ ಜರುಗಿದ ತಾಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ದಲಿತ ಕೇರಿ ನಿವಾಸಿಗಳು ಆರೋಪಿಸಿದರು.
6 ತಿಂಗಳಿನಿಂದ ದಲಿತ ಕೇರಿಯಲ್ಲಿನ ಗಟಾರುಗಳು ಗಲೀಜಿನಿಂದ ತುಂಬಿ ದುರ್ವಾಸನೆ ಬೀರುತ್ತಿವೆ. ಇಲ್ಲಿ ವಾಸಿಸುವದು ದುಸ್ತರವಾಗಿದೆ. ಕುಡಿವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ದಲಿತ ಕೇರಿಯ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಈ ಬಗ್ಗೆ ಗ್ರಾಪಂ ಪಿಡಿಒ ಖತೀಬ ಅವರಿಗೆ ಅನೇಕ ಬಾರಿ ಆಗ್ರಹಿಸಿದರೂ ಸ್ಪಂದಿಸುತ್ತಿಲ್ಲ. ಕನಿಷ್ಠ ಪಕ್ಷ ಎಸ್‌ಸಿ ಅನುದಾನದಲ್ಲಿಯಾದರೂ ಕಾಲೋನಿಯನ್ನು ಅಭಿವೃದ್ಧಿಪಡಿಸಿ ಎಂದು ಒತ್ತಾಯಿಸಿದರೂ ಉದಾಸೀನತೆ ತೋರುತ್ತಾರೆ. ಪಿಡಿಓ ಖತೀಬ ಅವರು ದಲಿತ ಕೇರಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಯಲ್ಲಪ್ಪ ಪೂಜಾರ,  ಮುದಕಪ್ಪ ಪೂಜಾರ, ಶರಣಪ್ಪ ಹಿರೇಮನಿ, ಅಯ್ಯಪ್ಪ ದಂಡಿನ ಆರೋಪಿಸಿದರು.
ಸಭೆಯಿಂದ ಕಾಲ್ಕಿತ್ತ ಪಿಡಿಒ: ಜನತೆ ಸಮಸ್ಯೆಗಳನ್ನು ಹೇಳುತ್ತಿದಂತೆ, ಗ್ರಾಮದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಪಿಡಿಒ ಆರ್.ಕೆ. ಖತೀಬ, ಗದಗದಲ್ಲಿ ಜಿಲ್ಲಾಮಟ್ಟದ ಸಭೆಯಿದೆ. ನಾನು ಅಲ್ಲಿಗೆ ಹೋಗಬೇಕು ಸಮಯವಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎ.ಬಿ. ಪಂಡಿತ ಅವರಿಗೆ ಹೇಳಿ, ಸಭೆಯಿಂದ ಅರ್ಧಕ್ಕೆ ಎದ್ದು ಅಲ್ಲಿಂದ ಕಾಲ್ಕಿತ್ತರು. ಇದರಿಂದ ಅಸಮಾಧಾನಗೊಂಡ ಗ್ರಾಮದ ಕೆಲ ಯುವಕರು ಪಿಡಿಓ ವರ್ತನೆಯನ್ನು ತೀವ್ರವಾಗಿ ಖಂಡಿಸಿ, ನಮ್ಮ ಗ್ರಾಮದ ಸಮಸ್ಯೆಗಳ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಎದುರು ಹೇಳಬೇಕಾದಲ್ಲಿ ಪಿಡಿಒ ಇರದಿದ್ದರೆ ಹೇಗೆ  ಇಂಥವರನ್ನು ವರ್ಗಾವಣೆ ಮಾಡುವುದೇ ಸೂಕ್ತ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದರು. ಸಭೆಯಲ್ಲಿ ವಿದ್ಯುತ್, ಕುಡಿವ ನೀರು, ರಸ್ತೆ, ಸೇತುವೆ, ಗಟಾರು, ಆಶ್ರಯ ಮನೆ, ಶೌಚಾಲಯ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಸಭೆಯಲ್ಲಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು. ಸ್ಥಳದಲ್ಲಿಯೇ ಪರಿಹಾರ ಕೈಗೊಳ್ಳಿ ಎಂದು ಆಗ್ರಹಿಸಿದರು.
ಆದರೆ, ಸಭೆಯಲ್ಲಿದ್ದ ತಾಲೂಕು ಮಟ್ಟದ ಅಧಿಕಾರಿಗಳು ಯಾವುದಕ್ಕೂ ಸೂಕ್ತ ಮತ್ತು ದಿಟ್ಟ ನಿರ್ಧಾರ ಕೈಗೊಳ್ಳದೇ ಕೇವಲ ಭರವಸೆ ನೀಡುವುದರ ಮೂಲಕ ಸಭೆ ಅಂತ್ಯಗೊಳಿಸಲಾಯಿತು. ಇದರಿಂದ ಗ್ರಾಮಸ್ಥರಿಗೆ ಯಾವುದಕ್ಕೂ ವ್ಯವಸ್ಥಿತ ಪರಿಹಾರ ಸಿಗದಂತಾಯಿತು. ಈ ಹಿಂದೆಯೂ ನಡೆದ ಗ್ರಾಮ ಸಭೆಯಲ್ಲಿ ಇದೇ ರೀತಿ ಆಗಿತ್ತು. ವಾರ್ಡ್ ಸಭೆಗಳು ಒಮ್ಮೆಯೂ ನಡೆದಿಲ್ಲ. ಜನಸ್ಪಂದನ ಸಭೆಯಲ್ಲಾದರೂ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದರೆ ಇಲ್ಲಿಯೂ ಭರವಸೆಯೇ ಉತ್ತರವಾಯಿತು ಎಂದು ಸಭೆಯಲ್ಲಿ ಸೇರಿದ್ದ ಗ್ರಾಮಸ್ಥರು ನಿರಾಶೆ ವ್ಯಕ್ತಪಡಿದರು.
ತಹಸೀಲ್ದಾರ್ ಎ.ಬಿ. ಪಂಡಿತ, ಸಮಾಜ ಕಲ್ಯಾಣ ಅಧಿಕಾರಿ ಪ್ರಶಾಂತ ವರಗಪ್ಪನವರ, ತಾಪಂ ಪ್ರಭಾರಿ ಇಓ ಎಂ. ನಾರಾಯಣ, ಹೆಸ್ಕಾಂ ತಾಲೂಕು ಎಇಇ ಎಚ್.ಆರ್.ನಾಗರಾಜ, ಉಪ ತಹಸೀಲ್ದಾರ್ ಎನ್.ಎಸ್. ಕೂಡಲ, ಅಂಗನವಾಡಿ ಮೇಲ್ವಿಚಾರಕಿ ಕೆ.ಜಿ.ಅಂಬಿಗೇರ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.