ಶರಣರ ನುಡಿ ಆಲಿಕೆಯಿಂದ ಜೀವನ ಪಾವನ
ಲಕ್ಷ್ಮೇಶ್ವರ: ಶರಣರ ಆಚಾರ-ವಿಚಾರಗಳು, ಉಪದೇಶದ ನುಡಿಗಳು ಇಂದಿನ ಒತ್ತಡದ ಜೀವನದಲ್ಲಿ ಪ್ರಸ್ತುತವಾಗಿವೆ. ಮಹಾತ್ಮರ, ಶರಣರ ತತ್ವಗಳನ್ನು ಮನನ ಮಾಡಿಕೊಳ್ಳುವುದರಿಂದ ನಮ್ಮ ಕರ್ಮಗಳು ದೂರಾಗುತ್ತವೆ ಎಂದು ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶ್ರೀಗಳು ಹೇಳಿದರು.
ಅವರು ಈಚೆಗೆ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಜರುಗಿದ ಕಲ್ಲಿನಾಥ ಕವಿ ವಿರಚಿತ ಶರಣ ಬಸವೇಶ್ವರ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಶ್ರಾವಣ ಮಾಸದಲ್ಲಿ ಶರಣರ ಜೀವನ ಚರಿತ್ರೆಗಳನ್ನು ಆಲಿಸುವುದರಿಂದ ನಮ್ಮ ಜೀವನ ಪಾವನವಾಗಬಲ್ಲದು. ಶರಣ ಕಾಯಕ ನಿಷ್ಠೆ, ಹಿರಿಯರನ್ನು ಗೌರವಿಸುವ ಗುಣಗಳು ಇಂದಿನ ಆಧುನಿಕ ಸಮಾಜಕ್ಕೆ ಅವಶ್ಯವಾಗಿವೆ. ಶರಣರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಆಚರಣೆಗೆ ಮೌಲ್ಯ ದೊರೆಯುತ್ತದೆ ಎಂದರು. ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಆಧುನಿಕ ಜಗತ್ತು ಕೇವಲ ಲಾಭದ ಕಡೆಗೆ ಹೋಗುತ್ತಿದೆ. ಸಂಬಂಧಗಳು ನಾಟಕೀಯವಾಗುತ್ತಿರುವುದು ನೋವಿನ ಸಂಗತಿ. ದೇಶದ ಶೇ. 75ರಷ್ಟು ಜನರು ಕೃಷಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಇಂದು ಕೃಷಿಕರನ್ನು ಗೌರವಯುತವಾಗಿ ಕಾಣುತ್ತಿಲ್ಲ. ಕೃಷಿಗೆ ಯೋಗ್ಯ ಸ್ಥಾನಮಾನ ದೊರೆಯುತ್ತಿಲ್ಲ. ಕೃಷಿಕರಿಗೆ ಹೆಣ್ಣುಕೊಡಲು ಸಾಕಷ್ಟು ಜನರು ಮುಂದೆ ಬರುತ್ತಿಲ್ಲ. ಇದು ನಮ್ಮ ಕೃಷಿಗೆ ಹಿಡಿದ ಕೈಗನ್ನಡಿಯಾಗಿದೆ. ಗುಮಾಸ್ತನಿಗೆ ಇರುವ ಕನಿಷ್ಠ ವೇತನ ಕೂಡ ಕೃಷಿಕನಿಗೆ ದೊರೆಯದಿರುವುದು ಆತನನ್ನು ಸಂಕಷ್ಟಕ್ಕೆ ದೂಡಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ಪುರಸ್ಕೃತೆ ರಾಜೇಶ್ವರಿ ಪಾಟೀಲರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿದ್ದನಗೌಡ ಬೊಳ್ಳಳ್ಳಿ ಹಾಗೂ ಸೋಮಣ್ಣ ಮುಳಗುಂದ, ಪುರಸಭೆ ಸದಸ್ಯ ವಿ.ಜಿ. ಪಡಗೇರಿ, ಪುರಾಣ ಪ್ರವಚನ ಮಾಡಿದ ಶಿಕ್ಷಕ ಎಸ್.ಎಫ್. ಆದಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶರಣ ಬಸವೇಶ್ವರ ಪುರಾಣದಲ್ಲಿ ಬಳಸಿದ್ದ ಕೃಷಿ ಪರಿಕರಗಳನ್ನು ಹರಾಜು ಮಾಡಲಾಯಿತು. ಒಂದು ಜತೆ ಎತ್ತುಗಳನ್ನು ರು. 1.25 ಲಕ್ಷ ನೀಡಿ ಸಂಗಪ್ಪ ಮಾಗಡಿ ಎಂಬುವವರು ಹರಾಜಿನಲ್ಲಿ ಕೊಂಡುಕೊಂಡಿದ್ದು ವಿಶೇಷವಾಗಿತ್ತು. ಸಮಾರಂಭದಲ್ಲಿ ಪುರಸಭೆಯ ಎಲ್ಲ ಸದಸ್ಯರನ್ನು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ತಾಪಂ ಸದಸ್ಯ ಚನ್ನಪ್ಪ ಜಗಲಿ, ಚಂಬಣ್ಣ ಬಾಳಿಕಾಯಿ ಹಾಗೂ ಹಿರಿಯರು ಉಪಸ್ಥಿತರಿದ್ದರು. ಶಂಕ್ರಣ್ಣ ಬಾಳಿಕಾಯಿ ಸ್ವಾಗತಿಸಿದರು. ಜಿ.ಎಸ್. ಗುಡಗೇರಿ ನಿರೂಪಿಸಿದರು. ಚಂದ್ರು ಹಂಪಣ್ಣವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

