ನೀರಿನಲ್ಲಿ ಕೊಚ್ಚಿಹೋದ ಬಾಲಕ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಓರ್ವ ಶಾಲಾ ಬಾಲಕ ಬಲಿಯಾಗಿದ್ದಾನೆ. ಪಟ್ಟಣದ ಬಿಸಿಎನ್ ಪ್ರಾಥಮಿಕ ಶಾಲೆಯ 1ನೇ ತರಗತಿ ವಿದ್ಯಾರ್ಥಿ ಸಂತೋಷಗೌಡ ಪರ್ವತಗೌಡ ಪಾಟೀಲ ಶಾಲೆಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.
ಸಂತೋಷ್ ಎಂದಿನಿಂದ ಬುಧವಾರ ಶಾಲೆ ಬಿಟ್ಟು ಮನೆಗೆ ತೆರಳುವಾಗ ಶಾಲೆಯಿಂದ ಕೆಲವೇ ಮೀಟರ್ ದೂರದಲ್ಲಿ ನೀರಿನ ರಭಸಕ್ಕೆ ಸಿಲುಕಿದ್ದಾನೆ. ಉಳಿದ ಬಾಲಕರು ಕೂಗಿಕೊಂಡರು. ಸಮೀಪದಲ್ಲಿದ್ದ ಜನ ಬರುವಷ್ಟರಲ್ಲಿ ನೂರಾರು ಮೀಟರ್ ದೂರ ತೇಲಿಹೋಗಿದ್ದ. ಆತನನ್ನು ರಕ್ಷಿಸಿ, ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಏಕೈಕ ಮಗನನ್ನು ಕಳೆದುಕೊಂಡ ತಂದೆ-ತಾಯಿಗಳ ಹಾಗೂ ಬಂಧು-ಬಾಂಧವರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಸರ್ಕಾರಿ ಆಸ್ಪತ್ರೆಗೆ ಧಾವಿಸಿ, ಮೃತ ಬಾಲಕನ ತಂದೆ-ತಾಯಿಗಳಿಗೆ ಸಾಂತ್ವನ ಹೇಳಿದರು.
ಭಾರಿ ಮಳೆ: ಬುಧವಾರ ಸಂಜೆ ಸುಮಾರು 45 ನಿಮಿಷಗಳ ಕಾಲ ಗುಡುಗು-ಮಿಂಚು ಸಹಿತಆರ್ಭಟದ ಮಳೆ ಸುರಿಯಿತು. ಪಟ್ಟಣದ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿತ್ತು. ಹಲವು ಮನೆಗಳು ಬಿದ್ದು ಭಾಗಶಃ ಜಖಂಗೊಂಡಿವೆ. ಪಟ್ಟಣದ ಅನೇಕ ಕಡೆಗಳಲ್ಲಿ ರಸ್ತೆಯ ಮೇಲೆ ಚರಂಡಿ ನೀರು ನುಗ್ಗಿದೆ. ಸಂಜೆ ಶಾಲೆಯಿಂದ ಮನೆಗೆ ಹೋಗುವ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು.
ಪಟ್ಟಣದ ಬಜಾರ ರಸ್ತೆಯಲ್ಲಿರುವ ಪಶು ಆಸ್ಪತ್ರೆ ವೈದ್ಯ ಡಾ. ನಾಗಸಮುದ್ರ ಅವರ ಮನೆಯೊಳಗೆ ನೀರು ನುಗ್ಗಿ, ವಸ್ತುಗಳೆಲ್ಲ ತೋಯ್ದು ಹೋಗಿವೆ. ವಿನಾಯಕ ನಗರದ ಹನುಮವ್ವ ಬಸಪ್ಪ ಗುದ್ಯಾಳ ಎನ್ನುವವರ ಮನೆಯ ಗೋಡೆ ಕುಸಿದಿದೆ. ಕೆಲವೇ ನಿಮಿಷಗಳ ಕಾಲ ಸುರಿದ ಮಳೆ ಪಟ್ಟಣದಲ್ಲಿ ಅನೇಕ ಅವಾಂತರಗಳನ್ನು ಸೃಷ್ಟಿಸಿ, ಜನತೆಯನ್ನು ತಲ್ಲಣಗೊಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

