ಗದಗ

ಶಿರಹಟ್ಟಿ ಪಪಂ ಬಿಜೆಪಿ ಮಡಿಲಿಗೆ

Published On :

ಶಿರಹಟ್ಟಿ: ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಜರುಗಿದ ಚುನಾವಣೆಯಲ್ಲಿ ಬಿಜೆಪಿಯ ನಾಗರಾಜ ಚಂದ್ರಶೇಖರ ಲಕ್ಕುಂಡಿ ಅಧ್ಯಕ್ಷರಾಗಿ ಹಾಗೂ ಮೀನಾಕ್ಷಿ ಬಸವರಾಜ ತಳವಾರ ಉಪಾಧ್ಯಕ್ಷರಾಗಿ ತಲಾ 9 ಮತಗಳನ್ನು ಪಡೆದು ಆಯ್ಕೆಯಾದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ 2 ನಾಮಪತ್ರ  ಸಲ್ಲಿಕೆಯಾಗಿದ್ದವು. ಬಿಜೆಪಿಯಿಂದ ನಾಗರಾಜ ಲಕ್ಕುಂಡಿ, ಜೆಡಿಎಸ್‌ನಿಂದ ಸುಜಾತಾ ಸಂಜೀವ ಗೋಡೆಣ್ಣವರ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದ ಮೀನಾಕ್ಷಿ ತಳವಾರ ಹಾಗೂ ಜೆಡಿಎಸ್‌ನ ಮೆಹಬೂಬ ಮುಳಗುಂದ ನಾಮಪತ್ರ ಸಲ್ಲಿಸಿದ್ದರು.
ಒಟ್ಟು 17 ಸದಸ್ಯರನ್ನು ಹೊಂದಿರುವ ಪಟ್ಟಣ ಪಂಚಾಯಿತಿಗೆ 7 ಜೆಡಿಎಸ್, 5 ಕಾಂಗ್ರೆಸ್, 3 ಬಿಜೆಪಿ, 1 ಬಿಎಸ್‌ಆರ್ ಕಾಂಗ್ರೆಸ್, 1 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಜೆಡಿಎಸ್‌ಗೆ ಅಧಿಕಾರ ಕೈತಪ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಕೈ ಜೋಡಿಸಿದ್ದರಿಂದ ಹಾಗೂ ಓರ್ವ ಪಕ್ಷೇತರರು ಬೆಂಬಲಿಸಿದ್ದರಿಂದ ಬಿಜೆಪಿ ಚುನಾವಣೆಯಲ್ಲಿ ಕೇವಲ 3 ಸ್ಥಾನಗಳನ್ನು ಗಳಿಸಿದ್ದರೂ ಅಧ್ಯಕ್ಷ ಸ್ಥಾನವನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.
ಬಿಜೆಪಿ ಸದಸ್ಯ ಗೂಳಪ್ಪ ಸಿದ್ಧಪ್ಪ ಕರಿಗಾರ ಯಾವ ಪಕ್ಷದ ಬೆಂಬಲಿತ ಅಭ್ಯರ್ಥಿಯ ಪರವೂ ಮತ ಚಲಾವಣೆ ಮಾಡದೇ ತಟಸ್ಥ ಉಳಿದು, ಜೆಡಿಎಸ್‌ನ ಓರ್ವ ಸದಸ್ಯ ಗೈರು ಹಾಜರಾಗಿದ್ದು ಗಮನಾರ್ಹವಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 14ನೇ ವಾರ್ಡ್‌ನಿಂದ ಅವಿರೋಧ ಆಯ್ಕೆಯಾಗಿದ್ದ ಮೀನಾಕ್ಷಿ ಬಸವರಾಜ ತಳವಾರ ಅವರು ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕಿತ್ತಾಟದ ಲಾಭ ಪಡೆದು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಈ ಸ್ಥಾನವನ್ನು ಕಾಂಗ್ರೆಸ್, ಬಿಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಸದಸ್ಯರ ಬೆಂಬಲದಿಂದ ನಿರಾಯಾಸವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಜೆಡಿಎಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುಜಾತಾ ಗೋಡೆಣ್ಣವರ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೆಹಬೂಬ ಮುಳಗುಂದ ತಲಾ 6 ಮತಗಳನ್ನು ಪಡೆಯುವ ಮೂಲಕ ಸೋಲು ಅನುಭವಿಸಿದರು. ಪಟ್ಟಣದಲ್ಲಿ 15 ದಿನಗಳಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಮುಸುಕಿನ ಗುದ್ದಾಟದಲ್ಲಿ ಕೆಲವು ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಕಲಂ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ಚುನಾವಣಾ ಅಧಿಕಾರಿಯಾಗಿ ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಿಸುತ್ತಿದ್ದಂತೆಯೇ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಮೂಲಭೂತ ಸೌಲಭ್ಯಕ್ಕೆ ಆದ್ಯತೆ: ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ, ಒಳ ಚರಂಡಿ ಯೋಜನೆ, ರಸ್ತೆ ಡಾಂಬರೀಕರಣ, ಗಟಾರ ನಿರ್ಮಾಣದಂತಹ ಪ್ರಮುಖ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ ಲಕ್ಕುಂಡಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.