ಗದಗ

ಪುರಸಭೆ ಸದಸ್ಯೆಗೆ ದಿಗ್ಬಂಧನ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 13
ಸ್ಥಳೀಯ ಪುರಸಭೆ ವ್ಯಾಪ್ತಿಯ ಕಲ್ಗುಡಿಯವರ ಪ್ಲಾಟ್‌ನಲ್ಲಿ ಸೂಕ್ತ ಚರಂಡಿ, ರಸ್ತೆ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಕೊಳಚೆ ಹರಿದು ದುರ್ನಾತ ಬೀರುತ್ತಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಆಕ್ರೋಶಗೊಂಡ ಬಡಾವಣೆ ನಿವಾಸಿಗಳು ಸಂಬಂಧಪಟ್ಟ 18ನೇ ವಾರ್ಡ್‌ನ ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ಚಟ್ಟೇರರನ್ನು ಬಡಾವಣೆಯಲ್ಲಿ ದಿಗ್ಭಂದನ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.  
ಪುರಸಭೆ ಕಚೇರಿ ಸಮೀಪವಿರುವ ಕಲ್ಗುಡಿಯವರ ಪ್ಲಾಟ್‌ನಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಬೀದಿ ಗಬ್ಬೆದ್ದು ನಾರುತ್ತಿದೆ. ಜನ, ವಾಹನಗಳು ಕೊಳಚೆಯಲ್ಲಿಯೇ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡದೇ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಡಾವಣೆಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ನಿವಾಸಿಗಳು ದೂರಿದರು.
ಗಲೀಜು ರಸ್ತೆ ಮೇಲೆ ನಿಂತು ಸಾಂಕ್ರಮಿಕ ರೋಗಗಳ ತಾಣವಾಗಿ ಮಾರ್ಪಟ್ಟು ಜನರ ಆರೋಗ್ಯಕ್ಕೆ ಕುತ್ತು ಎದುರಾಗಿದೆ. ಸರ್ಕಾರ ಪಟ್ಟಣದ ಅಭಿವೃದ್ಧಿ, ಶುಚಿತ್ವ ಕಾಪಾಡಲು ಹಾಗೂ ನಾಗರಿಕರ ಆರೋಗ್ಯ ರಕ್ಷಣೆ, ನೈರ್ಮಲ್ಯಕ್ಕಾಗಿ ಕೋಟ್ಯಂತರ ಹಣ ವೆಚ್ಚ ಮಾಡುತ್ತಿದೆ. ಆದರೆ, ಅಂತಹ ಯೋಜನೆಗಳು ವಾಸ್ತವವಾಗಿ ಜನತೆಗೆ ತಲುಪಿಲ್ಲ ಎಂಬುವುದಕ್ಕೆ ಈ ಬಡಾವಣೆಯ ಚಿತ್ರಣವೇ ಸಾಕ್ಷಿಯಾಗಿದೆ.
ಇನ್ನಾದರೂ ಇಲ್ಲಿನ ಮಲೀನಗೊಂಡ ನೀರು ಸುಗಮವಾಗಿ ಸಾಗಲು ಸೂಕ್ತ ಗಟಾರ್ ನಿರ್ಮಿಸಿ ಜನತೆಯ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಕ್ರಮಕ್ಕೆ ಮುಂದಾಗದಿದ್ದರೆ ಸ್ಥಳೀಯ ಆಡಳಿತದ ವಿರುದ್ಧ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ಎಚ್ಚರಿಸಿದರು.
ಅಧಿಕಾರಿಗೆ ಕರೆ: ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ಚಟ್ಟೇರ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಬಡಾವಣೆಗೆ ಬರ ಹೇಳಿದರು. ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಕಿರಿಯ ಅಭಿಯಂತರ ಪಿ.ಎನ್. ದೊಡ್ಡಮನಿ, ಹೆಸ್ಕಾಂ ಅಧಿಕಾರಿ ಎಸ್.ಆರ್. ಸೂಡಿಯವರು ಬಡಾವಣೆಗೆ ಆಗಮಿಸಿ ನಿವಾಸಿಗಳ ಸಮಸ್ಯೆ ಆಲಿಸಿದರು. ಬಳಿಕ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಪ್ಲಾಟ್‌ನಲ್ಲಿ ಹಲವಾರು ಮೂಲ ಸೌಲಭ್ಯಗಳ ಅವಶ್ಯವಿದ್ದು ಕೂಡಲೆ ಮೇಲಧಿಕಾರಿಗಳ ಗಮನಕ್ಕೆ ತಂದು ಬಡಾವಣೆಯಲ್ಲಿ ಗಟಾರು, ರಸ್ತೆ ವ್ಯವಸ್ಥೆಗೆ ಮುಂದಾಗುತ್ತೇವೆ ಎಂದರು. ಅಧಿಕಾರಿಗಳ ಭರವಸೆ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ರಜಾಕಸಾಬ್ ಅರಳಿಕಟ್ಟಿ, ತುಕಾರಾಂ ದಾಸರ, ಅರುಣ ಕುಂದರಗಿ, ಬಸವರಾಜ ಶಿರೋಳ, ಯಮನೂರಪ್ಪ ಲಕ್ಕಲಕಟ್ಟಿ, ಹುಚ್ಚಪ್ಪ ಪೂಜಾರ, ಗಣೇಶ ರಾಯಬಾಗಿ, ಜಗದೀಶ ಕಲ್ಗುಡಿ, ಮೂಕಪ್ಪ ಗುಡೂರ, ತಿರುಪತಿ ಕಲ್ಲೊಡ್ಡರ, ಶರಣಪ್ಪ ಬಂಡಿ, ಶಂಕರಪ್ಪ ಪಾತ್ರೋಟಿ, ರವಿ ಯಂಕಂಚಿ, ತುಳಸಿಬಾಯಿ ರಾಯಬಾಗಿ, ಸುನಿತಾ ಕಲ್ಗುಡಿ, ಸುವರ್ಣದಾಸರ, ದಾವಲಭಿ ಆರಗಿದ್ದಿ, ಶಂಕ್ರವ್ವ ಯಂಕಂಚಿ, ಲಕ್ಷ್ಮಿಬಾಯಿ ಪಾತ್ರೋಟಿ, ಸರಸ್ವತಿ ರಾಯಬಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.