ಮಳೆ ಅಬ್ಬರ: ರೈತ ತತ್ತರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಸೆ. 14
ಕಳೆದ 2-3 ದಿನಗಳ ಕಾಲ ಸುರಿದ ಹುಬ್ಬಿ ಮಳೆಗೆ ಲಕ್ಷ್ಮೇಶ್ವರ ಹೋಬಳಿಯ ಸುತ್ತ ಮುತ್ತಲಿನ ಹಲವು ಗ್ರಾಮಗಳ ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿ ಕೈಗೆ ಬಂದ ಬೆಳೆಯು ಬಾಯಿಗೆ ಬರದಂತಾಗಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಗದಗ ಜಿಲ್ಲೆಯ ತುಂಬೆಲ್ಲ ಸಾಕಷ್ಟು ಮಳೆ ಸುರಿದಿದ್ದು, ಈ ಮಳೆ ಬರಗಾಲದಿಂದ ಬಳಲಿದ್ದ ರೈತರಿಗೆ ಕೊಂಚ ನೆಮ್ಮದಿಯನ್ನು ಮೂಡಿಸಿದ್ದು ನಿಜವಾದರೂ 2-3 ದಿನಗಳಿಂದ ಎಡಬಿಡದೆ ಸುರಿದ ಭಾರಿ ಮಳೆಗೆ ರೈತರು ಬೆಳೆದ ಅಲ್ಪ ಸ್ವಲ್ಪ ಬೆಳೆಯು ಕೊಚ್ಚಿಕೊಂಡು ಹೋಗಿದ್ದು ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನುಗ್ಗಿದ ನೀರು: ಲಕ್ಷ್ಮೇಶ್ವರ ಹೋಬಳಿಯ ಲಕ್ಷ್ಮೇಶ್ವರ, ಅಡರಕಟ್ಟಿ, ಬಟ್ಟೂರ, ಪು.ಬಡ್ನಿ, ಗೊಜನೂರು, ರಾಮಗೇರಿ, ಗೋವನಾಳ, ಶಿಗ್ಲಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಧಾರಾಕಾರ ಮಳೆಗೆ ನೀರು ಅಪಾರ ಪ್ರಮಾಣದಲ್ಲಿ ಹೊಲಗಳಿಗೆ ನುಗ್ಗಿದ ಪರಿಣಾಮ ರೈತರು ಬೆಳೆದ ಬೆಳೆಯನ್ನೆಲ್ಲ ಸಂಪೂರ್ಣ ಹಾಳು ಮಾಡಿದೆ. ಅಲ್ಲದೆ ಅನೇಕ ಕಡೆಗಳಲ್ಲಿ ಒಡ್ಡುಗಳು ಒಡೆದು ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ.
ಹಳ್ಳದ ನೀರು ಹೊಲಕ್ಕೆ: ಅಡರಕಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳದ ನೀರು ಹೊಲದಲ್ಲಿ ನುಗ್ಗಿದ ಪರಿಣಾಮ ಲಕ್ಷಾಂತರ ಮೌಲ್ಯದ ಈರುಳ್ಳಿ ಬೆಳೆ ಕೊಚ್ಚಿಕೊಂಡು ನೀರಲ್ಲಿ ತೇಲಿ ಹೋಗಿದೆ. ಹೀಗೆ ಪಕ್ಕದ ಹೊಲದಲ್ಲಿ ತೇಲಿ ಹೋಗಿರುವ ಈರುಳ್ಳಿ ಬೆಳೆಯನ್ನು ಆರಿಸಿ ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಉಳ್ಳಾಗಡ್ಡಿ ಬೆಳೆ ಹಾನಿಗೊಳಗಾದ ರೈತರಾದ ಪ್ರಶಾಂತ ಹವಳದ, ಗುರುನಾಥ ಹವಳದ, ರಾಮಣ್ಣ ಹವಳದ, ರವಿ ಹವಳದ ತಮ್ಮ ನೋವು ತೋಡಿಕೊಂಡರು.
ಸಾಲ ಸೋಲ ಮಾಡಿ ಬಿತ್ತನೆ: ರೈತರು ತಾವು ಬೆಳೆದ ಬೆಳೆಯು ಉತ್ತಮ ಫಸಲು ನೀಡಲಿದೆ ಎಂಬ ಮಹದಾಸೆಯನ್ನು ಹೊತ್ತು ಸಾಲ ಸೋಲ ಮಾಡಿ ಬೀಜ ಖರೀಧಿಸಿ ಬಿತ್ತನೆ ಮಾಡಿದ್ದರು. ಈ ಹಿಂದೆ ಅಗತ್ಯ ಪ್ರಮಾಣದಲ್ಲಿ ಮಳೆಯಾಗದೇ ಬೆಳೆಗಳು ಒಣಗಿ ಹೋಗಿದ್ದವು. ಆದರೆ, ಈಚೆಗೆ ಸುರಿದ ಮಳೆಯನ್ನು ನೋಡಿ ರೈತರು ಹರ್ಷದಿಂದ ಕಾಲ ಕಳೆಯುತ್ತಿದ್ದರು. ಆದರೆ, ಈಗ ಸುರಿದಿರುವ ಭಾರಿ ಮಳೆಗೆ ಲಕ್ಷ್ಮೇಶ್ವರ ಹೋಬಳಿಯ ಜನರು ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ಎದುರಾಗಿದೆ. ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗಳೆಲ್ಲ ಸಂಪೂರ್ಣ ಹಾಳಾಗಿವೆ. ಈ ಹಿಂದೆ ಮಳೆಯಾಗದೇ ಬೆಳೆ ಹಾಳಾದರೆ, ಈ ಬಾರಿ ಅತಿಯಾದ ಮಳೆಯಾಗಿ ರೈತರ ಬೆಳೆಯು ಹಾಳಾಗುತ್ತಿರುವುದು ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿದೆ.
2-3 ದಿನಗಳಿಂದ ಲಕ್ಷ್ಮೇಶ್ವರ ವ್ಯಾಪ್ತಿಯ ಹೋಬಳಿಯ ನೂರಾರು ಎಕರೆ ಹೊಲದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತುಕೊಂಡ ಪರಿಣಾಮ ಉಳ್ಳಾಗಡ್ಡಿ, ಬಿಟಿ ಹತ್ತಿ, ಗೋವಿನಜೋಳ, ಶೇಂಗಾ, ಸೂರ್ಯಕಾಂತಿ, ಮೆಣಸಿನಕಾಯಿ ಬೆಳೆ ನೀರಲ್ಲಿ ಕೊಳೆತು ಹೋಗುವ ಹಂತಕ್ಕೆ ತಲುಪಿವೆ.
ಪಟ್ಟಣದ ಗೂಳಪ್ಪ ಹುಳುಕನವರಿಗೆ ಸೇರಿದ ಹೊಲದಲ್ಲಿನ ಬದುವು ಮಳೆಯ ರಭಸಕ್ಕೆ ಗುರುವಾರ ರಾತ್ರಿ ಕೊಚ್ಚಿಕೊಂಡು ಹೋಗಿದ್ದು, ಹೊಲದಲ್ಲಿ ಬೆಳೆದ ಶೇಂಗಾ ಮತ್ತು ಮೆಣಸಿನಕಾಯಿ ಬೆಳೆ ಹಾಳಾಗಿದೆ. ಅಲ್ಲದೆ ಲಕ್ಷಾಂತರ ಮೌಲ್ಯದ ಬೆಳೆ ಹಾಗೂ ಸಾವಿರಾರು ರುಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಒಡ್ಡ ಕಿತ್ತು ಹೋಗಿದೆ. ಇದರ ಜತೆಯಲ್ಲಿ ಫಲವತ್ತಾದ ಮಣ್ಣು ಕೂಡ ಕೊಚ್ಚಿಕೊಂಡು ಹೋಗಿದೆ.
ಹಾನಿಗೊಳಗಾದ ಪ್ರದೇಶಕ್ಕೆ ಶಾಸಕರ ಭೇಟಿ
ಲಕ್ಷ್ಮೇಶ್ವರ: ಪಟ್ಟಣದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಳೆದ ಬುಧವಾರ ಮತ್ತು ಗುರುವಾರ ಸುರಿದ ಭಾರಿ ಮಳೆಗೆ ಅನೇಕ ಹೊಲಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಬೆಳೆಗಳು ನಾಶವಾಗಿದ್ದು, ಸಮೀಪದ ಹುಲ್ಲೂರಿನ ದೊಡ್ಡ ಹಳ್ಳದ ನೀರು ಹೊಲಗಳಿಗೆ ನುಗ್ಗಿದ ಪ್ರದೇಶಗಳಿಗೆ ಶಾಸಕ ರಾಮಕೃಷ್ಣ ದೊಡ್ಡಮನಿ ಶನಿವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಹುಲ್ಲೂರು ಗ್ರಾಮದಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ ಸುದ್ದಿಗಾರರೊಂದಿಗೆ ಮಾತನಾಡಿ, ಲಕ್ಷ್ಮೇಶ್ವರ ಹೋಬಳಿಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದ್ದರಿಂದ ಅನೇಕ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ನಾಶವಾಗಿವೆ. ಬೆಳೆದ ಅಲ್ಪ ಸ್ವಲ್ಪ ಬೆಳೆಯೂ ಹಾಳಾಗಿ ಹೋಗಿವೆ.
ಕೊಯ್ಲಿಗೆ ಬಂದಿದ್ದ ಈರುಳ್ಳಿ ಬೆಳೆ ಹಾಗೂ ಬಿಟಿ ಹತ್ತಿ ಬೆಳೆಯು ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೈತರು ತಮ್ಮ ಹೊಲಗಳಿಗೆ ಹಾಕಿಸಿದ್ದ ಒಡ್ಡುಗಳು ಕಿತ್ತು ಹೋಗಿವೆ. ಬಹಳಷ್ಟು ಕಡೆ ಬೆಳೆಯಲ್ಲಿ ಅಪಾರ ನೀರು ನಿಂತುಕೊಂಡಿದ್ದು, ಬೆಳೆಗಳು ಕೊಳೆತು ಹೋಗುವ ಹಂತ ತಲುಪಿವೆ. ಅದಕ್ಕಾಗಿ ರೈತರಿಗೆ ಉಂಟಾದ ಹಾನಿಯ ವರದಿಯನ್ನು ತಯಾರಿಸುವಂತೆ ತಹಸೀಲ್ದಾರ್ಗೆ ಸೂಚನೆ ನೀಡಲಾಗಿದೆ ಎಂದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಶಿರಹಟ್ಟಿ ತಹಸಿಲ್ದಾರ್ ಆರ್.ಬಿ. ನಿಂಗನಗೌಡರ, ತಾಪಂ ಇಓ ವೈ.ಎಲ್. ಹಂಪಣ್ಣ, ಉಪತಹಸಿಲ್ದಾರ್ ಕೆ.ಎಫ್. ರಿತ್ತಿ, ಕಂದಾಯ ನಿರೀಕ್ಷಕ ಎಫ್.ಎನ್. ಹುಬ್ಬಳ್ಳಿ, ದೇವಪ್ಪ ಮೂಕಿ, ವೈ.ಎನ್. ತೆವರಿ, ಬಸವರಾಜ ಹರಿಜನ, ಭಜನಪ್ಪ ಲಮಾಣಿ, ಮೆಹಬೂಬಲಿ ಗಾಡಗೋಳಿ, ಆರ್.ಬಿ. ರಗಟಿ, ಬಸಪ್ಪ ಮಾಗಡಿ, ಶಿವಪ್ಪ ಮೂಕಿ ಮೊದಲಾದವರು ಹಾಜರಿದ್ದರು.
-ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

