ಮುಸ್ಲಿಂ ಭಕ್ತನ ಗಣೇಶೋತ್ಸವ!
ಕನ್ನಡಪ್ರಭ ವಾರ್ತೆ, ಗದಗ, ಸೆ. 15
ಗಣೇಶನನ್ನು ಪ್ರತಿಷ್ಠಾಪಿಸಿ 11 ದಿನ ವಿಶೇಷ ಪೂಜೆ ಮಾಡಿ, ವಿಸರ್ಜಿಸುವ ಮೂಲಕ ಸಾಮರಸ್ಯ ಸಾರುತ್ತಿರುವ ಬಡ ಮುಸ್ಲಿಂ ಕುಟುಂಬವೊಂದು ಗದಗನ ಎಸ್.ಎಂ. ಕೃಷ್ಣ ನಗರದ ಆಶ್ರಯ ಕಾಲೋನಿಯಲ್ಲಿದೆ.
ಅನ್ವರ್ಭಾಷಾ ಹಾಗೂ ಅವರ ತಾಯಿ ಬೀಬಿಜಾನ್ ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದು, ಅವರು ಗಣೇಶೋತ್ಸವ ಆರಂಭಿಸಿದ್ದೇ ವಿಶೇಷ ಸನ್ನಿವೇಶದಲ್ಲಿ.
ಏನಿದು ವಿಶೇಷ..?
ಗದಗ ನಗರದ ಕುಷ್ಟಗಿ ಚಾಳ್ ನಿವಾಸಿಯಾಗಿದ್ದ ಈ ಕುಟುಂಬ, ಸದ್ಯ ಎಸ್.ಎಂ. ಕೃಷ್ಣ ನಗರದಲ್ಲಿ ಆಶ್ರಯ ಕಾಲೋನಿಯಲ್ಲಿ ಸರ್ಕಾರ ನೀಡಿದ ಮನೆಯಲ್ಲಿ ವಾಸವಾಗಿದೆ. ಅನ್ವರ್ಭಾಷಾ ಕೂಲಿ ಕೆಲಸಕ್ಕೆ ಹೋದಾಗ ಅವರಿಗೆ ಗಣೇಶ ವಿಗ್ರಹ ಸಿಕ್ಕಿದೆ. ಮನೆಗೆ ತೆಗೆದುಕೊಂಡು ಹೋಗಿ, ಈ ವಿಗ್ರಹ ಯಾರದೆಂದು ಎಲ್ಲರನ್ನೂ ಕೇಳಿದರು. ಎಲ್ಲರೂ ಅದು ನಮ್ಮದಲ್ಲ ಎಂದು ಹೇಳಿದರಂತೆ. ಆಗ ಅವರೇ ಆ ವಿಗ್ರಹ ತನ್ನ ಮನೆಯಲ್ಲಿಟ್ಟಿದ್ದಾರೆ.
1996ರಲ್ಲಿ ಅಪಘಾತ
ಈ ಎಲ್ಲ ಬೆಳವಣಿಗೆ ಅನಂತರ 1996ರಲ್ಲಿ ಅನ್ವರ್ ಭಾಷಾಗೆ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಅನ್ವರ್ಭಾಷಾ ತಮ್ಮ ದೃಷ್ಟಿಯನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿಯ ಹಿರಿಯ ವೈದ್ಯರು ಮರಳಿ ದೃಷ್ಟಿ ಬರುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದ್ದಾರೆ. ಆಗ ಆತಂಕಗೊಂಡ ಅನ್ವರ್ಭಾಷಾ ಪತ್ನಿ ಹಾಗೂ ಅವರ ತಾಯಿ ಎಲ್ಲ ದೇವರ ಮೊರೆ ಹೋಗಿ, ಕೊನೆಗೆ ಮನೆಯಲ್ಲಿಯೇ ಇದ್ದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಮಾಡಿದ್ದಾರೆ. ಇನ್ನೈದು ದಿನದಲ್ಲಿ ನನ್ನ ಮಗನ ಕಣ್ಣಿನ ಆಫರೇಷನ್ ಇದೆ. ಅವನಿಗೆ ಮರಳಿ ದೃಷ್ಟಿ ಬಂದಲ್ಲಿ ಪ್ರತಿ ವರ್ಷವೂ ನಿನ್ನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವುದಾಗಿ ಬೇಡಿಕೊಂಡಿದ್ದಾರೆ.
ಈಡೇರಿದ ಬೇಡಿಕೆ
ಕಣ್ಣಿನ ಆಪ್ರೇಷನಗೆ ಹೋಗುವ ದಿನದಂದೂ ಮನೆಯಲ್ಲಿನ ಗಣೇಶನನ್ನು ಪ್ರಾರ್ಥಿಸಿ ತೆರಳಿದ್ದಾರೆ. ವೈದ್ಯ ಲೋಕಕ್ಕೆ ಅಚ್ಛರಿಯಾಗುವಂತೆ ಅನ್ವರ್ಭಾಷಾ ಅವರಿಗೆ ಮರಳಿ ದೃಷ್ಟಿ ಬಂದಿದೆ. ಮೊದ ಮೊದಲು ಸಣ್ಣಗೆ ಪ್ರಾರಂಭವಾದ ದೃಷ್ಟಿ ಈಗ ಸಂಪೂರ್ಣ ಮೊದಲಿನಂತಾಗಿದೆ. ಇದರಿಂದ ಖುಷಿಯಾದ ಅನ್ವರ್ಭಾಷಾ ಪತ್ನಿ ಹಾಗೂ ತಾಯಿ ಸಿಕ್ಕಿರುವ ಗಣೇಶ ವಿಗ್ರಹದೊಂದಿಗೆ ಮತ್ತೊಂದು ಹೊಸ ವಿಗ್ರಹ ತಂದು ಮನೆಯಲ್ಲಿ ಪ್ರತಿ ವರ್ಷ ಗಣೇಶ ಪ್ರತಿಷ್ಠಾಪನೆಯ ದಿನದಂದು ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯ, ಏಕತೆ ಹಾಗೂ ಭಕ್ತಿಗೆ ಜಾತಿಯ ಮಿತಿ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ.
ಹಿಂದೂ ಸಂಪ್ರದಾಯದಂತೆ
ಗಣೇಶ ಪ್ರತಿಷ್ಠಾಪನೆಯೊಂದಿಗೆ ಹಿಂದೂ ಧರ್ಮದ ಸಂಪ್ರದಾಯದಂತೆ ಪ್ರತಿ ದಿನವೂ ಗಣೇಶನಿಗೆ ವಿಶೇಷ ಪೂಜೆ, ಅಲಂಕಾರ, ಆರತಿ, ಮಂಗಳಾರತಿಯನ್ನು ಮಾಡುತ್ತಾರೆ. ಗಣೇಶ ಪ್ರತಿಷ್ಠಾಪನೆಯ 11 ದಿನಗಳ ಕಾಲ ಮನೆಯಲ್ಲಿ ಮಾಂಸಾಹಾರಕ್ಕೆ ಆಸ್ಪದವಿಲ್ಲ. ಮನೆಯಲ್ಲಿರುವ ಪ್ರತಿಯೊಬ್ಬರೂ ಬೇರೆಡೆಯೂ ಮಾಂಸಾಹಾರ ತಿನ್ನುವುದಿಲ್ಲ. ಬದಲಾಗಿ ಮನೆಯಲ್ಲಿ ಪ್ರತಿ ದಿನವೂ ಗಣೇಶನಿಗೆ ಇಷ್ಟವಾದ ಸಿಹಿ ಭೋಜನಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ.
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

