ಗದಗ

ಸಕ್ಕರೆಗಾಗಿ ರೈತರ ಆಕ್ರೋಶ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಸೆ. 15
ತಾಲೂಕಿನ ಗಂಗಾಪುರ ಬಳಿಯ ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆಯ ವಾರ್ಷಿಕ ಮಹಾಸಭೆ ಕಾರ್ಖಾನೆ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಸಭೆಯಲ್ಲಿದ್ದ ರೈತರು ತಮಗೆ ಈ ಹಿಂದೆ ತಿಳಿಸಿದಂತೆ 10 ಕೆಜಿ ಸಕ್ಕರೆ ನೀಡುವಂತೆ ಕೇಳಿಕೊಂಡರು.
ಆದರೆ, ಇದೀಗ ಸಕ್ಕರೆ ಕಾರ್ಖಾನೆ ಇರುವ ಭಾಗದಲ್ಲಿ ಹಮ್ಮಿಗಿ ಜಿಪಂ ಉಪಚುನಾವಣೆ ನಡೆಯುತ್ತಿರುವುದರಿಂದ ಸಕ್ಕರೆ ವಿತರಣೆಗೆ ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದಾಗ ರೈತರು ಗಲಾಟೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.
ಕಾರ್ಖಾನೆ ಶೇರುದಾರರಿರುವವರಿಗೆ ವಾರ್ಷಿಕ ಮಹಾಸಭೆಯ ಸಂದರ್ಭ 10 ಕೆಜಿ ಸಕ್ಕರೆ ನೀಡುವುದಾಗಿ ಆಡಳಿತ ಮಂಡಳಿಯವರು ಈ ಹಿಂದೆ ತಿಳಿಸಿದ್ದರು. ಆದರೆ, ಕಳೆದ ವರ್ಷ ನಮಗೆ ಸಕ್ಕರೆ ನೀಡಲಿಲ್ಲ. ಈ ವರ್ಷವೂ ಮತ್ತೊಂದು ಕಾರಣ ಹೇಳುತ್ತಿದ್ದಾರೆ ಎಂದು ರೈತರು ದೂರಿದರು.
ನಾವು ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದು, ಈ ಭಾಗದಲ್ಲಿ ಚುನಾವಣೆ ನೀತಿಸಂಹಿತೆ ಇದ್ದರೆ ಸಭೆ ನಡೆಸಲು ಮತ್ತೊಂದು ದಿನಾಂಕ ನಿಗದಿ ಮಾಡಬೇಕಿತ್ತು. ಅಲ್ಲದೆ, ನೀತಿ ಸಂಹಿತೆಯ ನೆಪ ಹೇಳಿ ಬಂದಂತಹ ರೈತರಿಗೆ ನೀರು, ಊಟ, ಉಪಹಾರದ ವ್ಯವಸ್ಥೆ ಸಹ ಮಾಡಿಲ್ಲ ಎಂದು ರೈತರಾದ ವಿರುಪಾಕ್ಷಪ್ಪ ಹೊಸೂರ, ಬಸಪ್ಪ ಉಪ್ಪಿನ, ಶಂಕ್ರವ್ವ ಕರಕ್ಕಣ್ಣವರ, ಜಿ.ಎಸ್. ಗುದ್ನೆಪ್ಪನವರ, ದೇವಪ್ಪ ಹೆಬ್ಬಳ್ಳಿ, ಮಲ್ಲಪ್ಪ ತೆಗ್ಗಿನಮನಿ ಸೇರಿದಂತೆ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದರು.  
ನಂತರ ಸ್ಥಳಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ಐ.ಜೆ. ಗದ್ದಿಹಾಳ, ತಹಸೀಲ್ದಾರ್ ಎಸ್.ಆರ್. ಸಿರಕೋಳ, ಸಿಪಿಐ ಸುನಿಲ್ ಸವದಿ ಆಗಮಿಸಿದರು. ನಂತರ ಜಿಲ್ಲಾ ಉಪವಿಭಾಗಾಧಿಕಾರಿ ಐ.ಜೆ. ಗದ್ದಿಹಾಳ ಮಾತನಾಡಿ, ಇದೀಗ ಇಲ್ಲಿ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಕ್ಕರೆ ವಿತರಿಸಲು ನೀತಿ ಸಂಹಿತೆ ಅಡ್ಡ ಬರುತ್ತದೆ. ಆದ್ದರಿಂದ ಮುಂಡರಗಿ ತಾಲೂಕಿನ ರೈತರನ್ನು ಹೊರತುಪಡಿಸಿ ಬೇರೆ ತಾಲೂಕಿನಿಂದ ಬಂದಂತಹ ರೈತರಿಗೆ ಸಕ್ಕರೆ ನೀಡುವಂತೆ ತಿಳಿಸಿದರು.
ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಇದೀಗ ನೀತಿಸಂಹಿತೆ ಇದ್ದು ತಾಲೂಕಿನ ರೈತರು ಸಹಕರಿಸಬೇಕು. ಚುನಾವಣೆಯ ನಂತರ ಎಲ್ಲ ರೈತರನ್ನೂ ಕರೆದು ಎಲ್ಲರಿಗೂ ಸಕ್ಕರೆ ನೀಡುವುದಾಗಿ ಮನವಿ ಮಾಡಿದರು. ಬೇರೆ ತಾಲೂಕಿನ ರೈತರಿಗೆ ನಂತರ ಸಕ್ಕರೆ ವಿತರಿಸಲಾಯಿತು.
ಸಭೆಯಲ್ಲಿ ಮುಂಡರಗಿ, ಗದಗ, ರೋಣ, ಧಾರವಾಡ, ನವಲಗುಂದ ನರಗುಂದ, ಶಿರಹಟ್ಟಿ ಸೇರಿದಂತೆ ಎಲ್ಲ ತಾಲೂಕಿನ ಶೇರುದಾರ ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.