ಗದಗ

ಬಿಪಿಎಲ್ ಕಾರ್ಡ್‌ಗಾಗಿ ಪ್ರತಿಭಟನೆ

Published On :

ಗಜೇಂದ್ರಗಡ: ಮನೆ, ನಿವೇಶನ, ಸಮರ್ಪಕ ಪಡಿತರ ಚೀಟಿ ವಿತರಣೆ ಜತೆಗೆ ಕುಡಿವ ನೀರು ಪೂರೈಕೆ ಸೇರಿದಂತೆ ಮೂಲ ಸೌಲಭ್ಯ ಈಡೇರಿಕೆಗೆ ಒತ್ತಾಯಿಸಿ ಸಿಪಿಐ (ಎಂ) ನಗರ ಸಮಿತಿ ಪದಾಧಿಕಾರಿಗಳು ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಎದುರಿನ ಆವರಣದಲ್ಲಿ ಬುಧವಾರ ಹಗಲು ರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಧರಣಿಯ ನೇತೃತ್ವ ವಹಿಸಿದ್ದ ಸಿಪಿಐ (ಎಂ) ಮುಖಂಡ ಹಾಗೂ ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ಸ್ಥಳೀಯ ಪುರಸಭೆಯಿಂದ ವಾಜಪೇಯಿ ವಸತಿ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಗೊಂಡ ಫಲಾನುಭವಿಗಳಿಗೆ ಮಾಜಿ ಮತ್ತು ಹಾಲಿ ಶಾಸಕರು ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸಿ ಫಲಾನುಭವಿಗಳಿಗೆ ಆದೇಶ ಪತ್ರ ನೀಡಿ ಹಲವು ತಿಂಗಳು ಕಳೆದರೂ ಈವರೆಗೂ ಯಾವೊಬ್ಬ ಫಲಾನುಭವಿಗೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಹಣ ಬಿಡುಗಡೆ ಮಾಡಿಲ್ಲ. ಜತೆಗೆ ಉಣಚಗೇರಿ ಬಳಿಯ ಆಶ್ರಯ ಫಲಾನುಭವಿಗಳಿಗೆ ಉಚಿತ ಹಕ್ಕು ಪತ್ರ ನೀಡಿಲ್ಲ ಎಂದು ದೂರಿದರು.
ಅನ್ನಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸದೆ ಅನಧಿಕೃತ ಕಾರ್ಡ್‌ಗಳಿವೆ ಎಂಬ ನೆಪ ಮುಂದಿಟ್ಟುಕೊಂಡು ಬಡವರ ಪಡಿತರ ಚೀಟಿಗಳನ್ನು ರದ್ದುಗೊಳಿಸಿ ಬಡವರಿಗೆ ಅನ್ಯಾಯ ಎಸಗಲಾಗಿದೆ. ಪಟ್ಟಣದಲ್ಲಿ ಕಳೆದೊಂದು ವರ್ಷದಿಂದ ನೀರಿನ ಸಮಸ್ಯೆ ಉಲ್ಬಣಿಸಿದ್ದು ಸ್ಥಳೀಯ ಆಡಳಿತ ಗಂಭೀರ ಕ್ರಮಕ್ಕೆ  ಮುಂದಾಗುತ್ತಿಲ್ಲ, ಜತೆಗೆ ಅಂತರ್ಜಲ ಸಂವರ್ಧನೆಗೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಇದರಿಂದ ಕುಡಿವ ನೀರಿನ ಸಮಸ್ಯೆ ಮುಂದುವರಿದಿದೆ ಎಂದು ಆರೋಪಿಸಿದರು.
ಸಿಪಿಐ (ಎಂ) ಕಾರ್ಯದರ್ಶಿ ಮಾರುತಿ ಚಿಟಗಿ ಮಾತನಾಡಿ, ಪಟ್ಟಣದಲ್ಲಿ ವಿಶೇಷ ತಹಸೀಲ್ದಾರ್ ಕಾರ್ಯಾಲಯ ಆರಂಭಗೊಂಡು 10 ವರ್ಷ ಗತಿಸಿವೆ. ಅಲ್ಲದೆ ಹಿಂದಿನ ಸರ್ಕಾರ ಗಜೇಂದ್ರಗಡ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಕೈತೊಳೆದುಕೊಂಡಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಮೂಲ ಸೌಲಭ್ಯವಿಲ್ಲದೆ ಕಾಟಾಚಾರದ ಗೂಡಾಗಿದೆ. ಈ ಮೊದಲು ಜಾತಿ, ಆದಾಯ, ವಾರ್ಸಾ, ವೃದ್ಧಾಪ್ಯ, ಅಂಗವಿಕಲ, ವಿಧವಾ ಮಾಸಾಶನ ಪ್ರಮಾಣ ಪತ್ರಗಳನ್ನು ಈ ಕಾರ್ಯಾಲಯದಲ್ಲೇ ನೀಡುತ್ತಿದ್ದರು. ಈಗ ಇವುಗಳು ನರೇಗಲ್ ನಾಡ ಕಚೇರಿಯಿಂದಲೇ ಪಡೆದುಕೊಳ್ಳುವ ಅನಿವಾರ್ಯತೆ ಬಂದಿದೆ. ಕಾರಣ ಸ್ಥಳೀಯ ವಿಶೇಷ ತಹಸೀಲ್ದಾರ್ ಕಾರ್ಯಾಲಯದಲ್ಲಿ ಅಟಲ್‌ಜಿ ಬ್ಯಾಕ್ ಅಪೀಲ್ ಇಲ್ಲದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಗಜೇಂದ್ರಗಡ ಪಟ್ಟಣದಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಹಿಳಾ ಮತ್ತು ಪುರುಷರ ಸುಲಭ ಶೌಚಾಲಯಗಳ ಕೊರತೆ ಇದ್ದು, ಇಂತಹ ಹಲವಾರು ಮೂಲ ಸೌಲಭ್ಯ ಬೇಡಿಕೆ ಈಡೇರಿಕೆಗೆ
ಸ್ಥಳೀಯ ಪುರಸಭೆ ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ರಾಜವಾಡೇ ಮೈದಾನದಿಂದ ಪ್ರತಿಭಟನಾ ರ್ಯಾಲಿಯ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿ ಅಹೋ ರಾತ್ರಿ ಪ್ರತಿಭಟನೆಗೆ ಮುಂದಾದರು.
ಮುಖಂಡರಾದ ಬಾಲು ರಾಠೋಡ, ಬಸವರಾಜ ಶೀಲವಂತರ, ಫಯಾಜ ತೋಟದ, ಪೀರು ರಾಠೋಡ, ರಜಾಕ ಗೊಡೇಕಾರ, ಎಂ.ಬಿ ಸೋಂಪುರ, ಮೈಬು ಹವಾಲ್ದಾರ್, ಕಳಕೇಶ ಉಕ್ಕಿಸಲ, ಶಿವು ಚವ್ಹಾಣ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.