ಗದಗ

ಮೊಳಕೆಯೊಡೆಯದ ಬೀಜ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಸೆ. 18
ಸತತ ಮಳೆ ಕೊರತೆಯಿಂದ ತತ್ತರಿಸಿದ್ದ ನರಗುಂದ ತಾಲೂಕಿನ ರೈತರಿಗೆ ಬಿದ್ದ ಅಲ್ಪ ಸ್ಪಲ್ಪ ಮಳೆಯನ್ನೇ ನಂಬಿ ಬಿತ್ತನೆ ಮಾಡಿರುವ ಸೂರ್ಯಕಾಂತಿ ಬೀಜಗಳು ಸಮರ್ಪಕವಾಗಿ ಹುಟ್ಟದೇ ಇರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅದರಲ್ಲಿಯೂ ಕಾವೇರಿ ಚಾಂಪ್ ಎನ್ನುವ ಕಂಪನಿಯ ಬೀಜಗಳೇ ಹೆಚ್ಚು ಕಳಪೆಯಿಂದ ಕೂಡಿದ್ದು ರೈತರನ್ನು ಚಿಂತೆಗೀಡು ಮಾಡಿದೆ ಎನ್ನುವುದು ಈ ಭಾಗದ ಬಹುತೇಕ ಗ್ರಾಮಗಳ ರೈತರ ಆರೋಪವಾಗಿದೆ.
ಮಲಪ್ರಭಾ ಜಲಾಶಯದ ವ್ಯಾಪ್ತಿಯಲ್ಲಿ ಕಾಲುವೆ ನೀರಾವರಿಯನ್ನು ಹೊಂದಿರುವ ತಾಲೂಕಿನ ರೈತರು ಹೆಚ್ಚಾಗಿ ವಾಣಿಜ್ಯ ಬೆಳೆಗಳನ್ನೇ ಬೆಳೆಯುತ್ತಾರೆ. ಅದರಲ್ಲಿಯೂ ಸೂರ್ಯಕಾಂತಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಹಿಂಗಾರು ಹಂಗಾಮು ಪ್ರಾರಂಭವಾಗಿದ್ದು, ಪ್ರಾರಂಭದಲ್ಲಿಯೇ ಬಿತ್ತನೆ ಮಾಡಿ ಸುಮಾರು 22 ದಿನ ಗತಿಸಿದರೂ ಬಿತ್ತಿದ ಬೀಜಗಳು ಮೊಳಕೆಯೊಡೆಯದೇ ಇರುವುದರಿಂದ ಸಹಜವಾಗಿ ರೈತರಲ್ಲಿ ಆತಂಕ ಶುರುವಾಗಿದೆ.
ಪರಿಹಾರಕ್ಕೆ ಆಗ್ರಹ: ಅದರಲ್ಲಿಯೂ ಕಾವೇರಿ ಚಾಂಪ್ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ ರೈತರಂತೂ ತೀರಾ ಕಂಗಾಲಾಗಿದ್ದು, ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳೂ ಕೂಡಲೇ ಪರಿಶೀಲನೆ ನಡೆಸಿ, ಆ ಕಂಪನಿಯ ಬೀಜಗಳನ್ನು ತನಿಖೆಗೆ ಒಳಪಡಿಸಬೇಕು. ತಪ್ಪು ಕಂಡು ಬಂದಲ್ಲಿ ಸರ್ಕಾರ ಕಂಪನಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮತ್ತು ಬಿತ್ತನೆ ಮಾಡಿ ಹಾನಿ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ ರು. 20 ರಿಂದ 30 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಹಲವಾರು ರೈತರು ಈಚೆಗೆ ಕೃಷಿ ಇಲಾಖೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ ಘಟನೆಯೂ ಜರುಗಿದೆ.
ಎಕರೆಗೆ ರು. 15 ಸಾವಿರ ಖರ್ಚು: ಪ್ರಸಕ್ತ ಹಾಗೂ ಕಳೆದ ಬಾರಿ ಸಮರ್ಪಕ ಮಳೆಯಾಗದೇ ಇರುವುದರಿಂದ,  ಜಲಾಶಯಕ್ಕೆ ಹೆಚ್ಚಿನ ನೀರು ಬರದೇ ಇರುವುದರಿಂದ ಇಲ್ಲಿನ ರೈತರು ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ. ಅದಕ್ಕಾಗಿ ಈ ಹಿಂಗಾರು ಹಂಗಾಮಿನಲ್ಲಾದರೂ ಸಮರ್ಪಕ ಮಳೆಯಾಗಿ ಉತ್ತಮ ಬೆಳೆ ಬರಲಿದೆ ಎನ್ನುವ ನಿರೀಕ್ಷೆ ಹೊಂದಿ ಪ್ರತಿ ಎಕರೆಗೆ ರು. 10 ರಿಂದ 15 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದಾರೆ. ಆದರೆ ಬಿತ್ತನೆ ಮಾಡಿದ ಸೂರ್ಯಕಾಂತಿ ನಾಟದೇ ಇರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈಗಾಗಲೇ ರೈತರು ಕಾವೇರಿ ಚಾಂಪ್ ಬೀಜಗಳು ಕಳಪೆ ಇವೆ ಎಂದು ಆರೋಪಿಸಿ ಪರಿಹಾರಕ್ಕೆ ಆಗ್ರಹ ಮಾಡಿದ್ದಾರೆ. ಈ ಕುರಿತು ಸಂಬಂಧಪಟ್ಟ ಕಂಪನಿಯವರಿಗೆ ಕೂಡಲೇ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಲು ತಿಳಿಸಲಾಗಿದೆ. ಈ ಕುರಿತು ನಮ್ಮ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ಕಂಪನಿಯ ಅಧಿಕಾರಿಗಳು 2-3 ದಿನಗಳಲ್ಲಿ ಸರ್ವೇ ಮಾಡುತ್ತೇವೆಂದು ತಿಳಿಸಿದ್ದಾರೆ. ಕಂಪನಿಯ ಲೋಪ ಕಂಡು ಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು.
- ಎಸ್.ಎಚ್. ಪಾಟೀಲ
ತಾಲೂಕು ಸಹಾಯಕ ಕೃಷಿ ಅಧಿಕಾರಿ, ನರಗುಂದ
ಈ ಹಿಂದೆ ಕಾವೇರಿ ಕಂಪನಿ ಹಾವೇರಿ ಭಾಗದಲ್ಲಿ ಕಳಪೆ ಗುಣಮಟ್ಟದ ಬಿ.ಟಿ. ಹತ್ತಿ ಬೀಜಗಳನ್ನು ವಿತರಣೆ ಮಾಡಿ ರೈತರಿಗೆ ಟೋಪಿ ಹಾಕಿತ್ತು. ಅದೇ ರೀತಿ ಈ ಬಾರಿ ಸೂರ್ಯಕಾಂತಿ ಕಾವೇರಿ ಚಾಂಪ್ ಎನ್ನುವ ಕಳಪೆ ಗುಣಮಟ್ಟದ ಬೀಜ ವಿತರಣೆ ಮಾಡಿ ರೈತರಿಗೆ ಮೋಸ ಮಾಡಿದೆ. ಅದಕ್ಕಾಗಿ ಸರ್ಕಾರ ಮಧ್ಯ ಪ್ರವೇಶಿಸಿ ಕಂಪನಿ ಮಾಲೀಕರಿಂದ ಪ್ರತಿ ಎಕರಿಗೆ ರು. 20 ರಿಂದ 30 ಸಾವಿರ ಪರಿಹಾರವನ್ನು ಈ ಬೀಜ ಬಿತ್ತನೆ ಮಾಡಿ ನಷ್ಟ ಹೊಂದಿದ ರೈತರಿಗೆ ವಿತರಣೆ ಮಾಡಬೇಕು. ಇಲ್ಲವಾದಲ್ಲಿ ಈ ಭಾಗದ ರೈತರು ವಿಧಾನಸೌಧದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು.
-ಡಾ. ಎಸ್.ಬಿ. ಚೌಕಿಮಠ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ

ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.