ಬಸ್ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ರೋಣ: ಸರಿಯಾದ ವೇಳೆಗೆ ಸಮರ್ಪಕವಾಗಿ ನರೇಗಲ್ಲ ಮತ್ತು ರೋಣಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಜಕ್ಕಲಿ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ರವಿಂದ್ರ ಮುಗಳಿ, ಈರಪ್ಪ ಪಟ್ಟಣಶೆಟ್ಟಿ ಮಾತನಾಡಿ, ಜಕ್ಕಲಿ ಮಾರ್ಗವಾಗಿ ನಿತ್ಯ ಅನೇಕ ಬಸ್‌ಗಳು ಸಂಚರಿಸುತ್ತಿದ್ದರೂ ಅದ್ಯಾವುದೇ ಬಸ್‌ಗಳು ಶಾಲಾ, ಕಾಲೇಜ್‌ಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಿಲ್ಲ. ಅವುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. 6 ತಿಂಗಳಿನಿಂದ ಗದಗ ಮತ್ತು ರೋಣ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸುತ್ತಾ ಬರಲಾಗಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದರು.
ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸದ ಸಾರಿಗೆ ಅಧಿಕಾರಿಗಳ ಧೋರಣೆಗೆ ಬೇಸತ್ತ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಜಕ್ಕಲಿಯಿಂದ ರೋಣಕ್ಕೆ ಬಂದು ಕೆಎಸ್‌ಆರ್‌ಟಿಸಿ ಘಟಕಕ್ಕೆ ಮುತ್ತಿಗೆ ಹಾಕಲು ಪಟ್ಟಣದ ಮುಲ್ಲಾನಬಾವಿ ವೃತ್ತದಿಂದ ಪ್ರತಿಭಟನೆ ಪ್ರಾರಂಭಿಸಿದ್ದರು. ಆಗ ಗದಗ ಸಾರಿಗೆ ನಿಯಂತ್ರಣಾಧಿಕಾರಿ ಎಂ.ಎ. ಖಾದ್ರಿ, ಸಿಪಿಐ ಮಲ್ಲನಗೌಡ ನಾಯಕ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನೆ ನಡೆಸದಂತೆ ಮನವೊಲಿಸಲೆತ್ನಿಸಿ, ಪ್ರತಿಭಟನೆ ನಡೆಸಬಾರದು ಎಂದು ನ್ಯಾಯಾಲಯದಿಂದ ಆದೇಶ ಬಂದಿದ್ದು, ಆದ್ದರಿಂದ ನಿಮ್ಮ ಸಮಸ್ಯೆಯನ್ನು ಶಾಂತಯುತವಾಗಿ ಪರಿಹರಿಸಿಕೊಳ್ಳಬೇಕು ಎಂದರು. ಸಾರಿಗೆ ನಿಯಂತ್ರಣಾಧಿಕಾರಿ ಮತ್ತು ಸಿಪಿಐ ಮಲ್ಲನಗೌಡ ನಾಯಕರೊಂದಿಗೆ ಪ್ರತಿಭಟನಾ ನಿರತರು ಕೆಲ ಕಾಲ ಮಾತಿನ ಚಕಮಕಿಯಲ್ಲಿ ತೊಡಗಿದರು. ನೀವು ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟುಹಿಡಿದರು. ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವದಿಲ್ಲ. ಬೇಕಿದ್ದರೆ ನಮ್ಮನ್ನೆಲ್ಲರನ್ನು ಬಂಧಿಸಿ ಎಂದು ಜೋರಾಗಿ ಘೋಷಣೆ ಕೂಗುತ್ತಾ ಘಟಕಕ್ಕೆ ಮುತ್ತಿಗೆ ಹಾಕಲು ಮುನ್ನುಗ್ಗಿದರು. ಆಗ ಪರಿಸ್ಥಿತಿಯ ತೀವ್ರತೆಯನ್ನು ಅರಿತ ಸಾರಿಗೆ ನಿಯಂತ್ರಣಾಧಿಕಾರಿ ಎಂ.ಎ. ಖಾದ್ರಿ ಮಾತನಾಡಿ, ನೀವು ಹೇಳಿದ ಸಮಯಕ್ಕೆ ಬಸ್ ಬಿಡಲಾಗುವುದು. ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಚಾಲಕ ಮತ್ತು ನಿರ್ವಾಹಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದೆ ಸರಿದರು.
ಮುತ್ತು ಕಡಗದ, ಉಮೇಶ ಮೇಟಿ, ಶೇಖಣ್ಣ ಮಾರನಬಸರಿ, ಮುತ್ತಣ್ಣ ಅಕ್ಕಿಶೆಟ್ಟರ, ರವಿ ಶಾಶೆಟ್ಟಿ, ಮಂಜುನಾಥ ದೊಡ್ಡಮೇಟಿ, ಸುನೀಲ ಮುಗಳಿ, ಶಿವು ಯಾವಗಲ್ಲ, ಮಲ್ಲು ಹುಗಾರ, ಮುತ್ತಮ್ಣ ಚಳಗೇರಿ, ಭಾರತಿ ಗುಬೇಣಕೊಪ್ಪ, ಪವಿತ್ರಾ ಜಂಗಣ್ಣವರ, ಕೌಸರಬಾನುಮುಲ್ಲಾ, ದೀಪಾ ವಡ್ಡರ, ಅಕ್ಷೀತಾ ಬಳಿಗೇರ, ಉಮಾ ಕಮ್ಮಾರ, ಜ್ಯೋತಿ ಗಾಣಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

