ಗದಗ

ದೇಶಕ್ಕೆ ಪರ್ಯಾಯ ಚಿಂತನೆ ಅವಶ್ಯ

Published On :

ಕನ್ನಡಪ್ರಭ ವಾರ್ತೆ, ಗದಗ, ಸೆ. 23
ದೇಶ ಇಂದು ಹಲವಾರು ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂದು ದೇಶಕ್ಕೆ ವ್ಯಕ್ತಿ ಹಾಗೂ ಪಕ್ಷಗಳಿಗಿಂತ ಪರ್ಯಾಯ ಚಿಂತನೆ ಅವಶ್ಯವಾಗಿದೆ ಎಂದು ಸಿಪಿಐ (ಎಂ)ನ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ನಿತ್ಯಾನಂದಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಅಕ್ಕನಬಳಗದಲ್ಲಿ ಹಮ್ಮಿಕೊಂಡಿದ್ದ ಪರ್ಯಾಯ ಧೋರಣೆ ಹಾಗೂ ನೀತಿಗಳಿಗಾಗಿ ಒತ್ತಾಯಿಸಿ ನಡೆದ ಎಡಪಕ್ಷಗಳ ರಾಜಕೀಯ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಈ ದೇಶದ ಬಂಡವಾಳಶಾಹಿ ಮತ್ತು ಕಾರ್ಪೋರೇಟ್ ಜಗತ್ತಿನ ಅಣತೆಯಂತೆ ನಡೆವ ಪಕ್ಷಗಳಾಗಿದ್ದು, ಮಾಧ್ಯಮಗಳ ಮೂಲಕ ಕಾಂಗ್ರೆಸ್‌ಗೆ ಪರ್ಯಾಯ ಬಿಜೆಪಿ ಮತ್ತು ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಅಂತ ದೇಶದ ಜನತೆಯ ಮುಂದೆ ಇವರು ಇಡಲು ಹೊರಟಿದ್ದಾರೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.  
ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್. ಹಡಪದ ಮಾತನಾಡಿದರು. ಬಿ.ಎಸ್. ಸೊಪ್ಪಿನ ಅಧ್ಯಕ್ಷತೆ ವಹಿಸಿದ್ದರು. ಮಹಾಗುಂಡಪ್ಪ ಅಂಗಡಿ ಸ್ವಾಗತಿಸಿದರು. ಬಸವರಾಜ ಮಂತೂರ ವಂದಿಸಿದರು. ಮಹೇಶ ಹಿರೇಮಠ ನಿರೂಪಿಸಿದರು.
ಪರ್ಯಾಯ ಧೋರಣೆಗಳು: ಭೂ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವುದು. ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ಹಂಚುವುದು ಮತ್ತು ಪ್ರತಿ ಭೂ ರಹಿತ ಕುಟುಂಬಕ್ಕೆ ನಿವೇಶನವನ್ನು ಒದಗಿಸುವುದು. ಬಲವಂತದ ಭೂಸ್ವಾಧೀನಕ್ಕೆ ಅಂತ್ಯ ಹಾಡುವುದು. ಸ್ವಾಮಿನಾಥನ್ ಆಯೋಗದ ವರದಿಗೆ ಅನುಗುಣವಾಗಿ ರೈತರಿಗೆ ಬೆಂಬಲ ಬೆಲೆ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುವುದು.
 ಮೂಲಸೌಕರ್ಯ ಕ್ಷೇತ್ರಕ್ಕೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ಹೆಚ್ಚೆಚ್ಚು ಉದ್ಯೋಗಾವಕಾಶಗಳ ಸೃಷ್ಟಿಗಾಗಿ ಕೈಗಾರಿಕೆಗಳನ್ನು ಸ್ಥಾಪಿಸುವುದು. ಗಣಿಗಾರಿಕೆ ಮತ್ತು ತೈಲ ಸಂಪನ್ಮೂಲವನ್ನು ರಾಷ್ಟ್ರೀಕರಣಗೊಳಿಸುವುದು. ಸಾರ್ವಜನಿಕ ಕ್ಷೇತ್ರದ ಷೇರುಗಳ ಹಿಂಪಡೆಯುವಿಕೆಯನ್ನು ನಿಲ್ಲಿಸುವುದು.
ತೆರಿಗೆ ಸಂಗ್ರಹದ ದೋಷಗಳನ್ನು ಸರಿಪಡಿಸುವುದು ಮತ್ತು ನ್ಯಾಯಯುತ ತೆರಿಗೆಗಳನ್ನು ಸಮರ್ಪಕವಾಗಿ ಸಂಗ್ರಹವಾಗುವಂತೆ ನೋಡಿಕೊಳ್ಳುವುದು, ದೇಶದೊಳಗೆ ಜೂಜುಕೋರ ಹಣಕಾಸಿನ ಹರಿದಾಟವನ್ನು ನಿಯಂತ್ರಿಸುವುದು, ಹಣಕಾಸು ವಲಯವನ್ನು ಮುಕ್ತಗೊಳಿಸುವುದನ್ನು ನಿಲ್ಲಿಸುವುದು, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡದಿರುವುದು.
ಸಾರ್ವತ್ರಿಕ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರುವುದು. ದೇಶದ ಎಲ್ಲ ಕುಟುಂಬಗಳಿಗೆ 1 ಕೆ.ಜಿ.ಗೆ 2 ರುಪಾಯಿ ಮೀರದ ದರದಲ್ಲಿ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯವನ್ನು ನೀಡುವುದು.
ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸುವುದು. ಪ್ರಭುತ್ವ ಮತ್ತು ಧರ್ಮವನ್ನು ಪ್ರತ್ಯೇಕಿಸುವುದು. ಜಾತ್ಯತೀತತೆಯ ಮೂಲಭೂತ ತತ್ವವಾಗಿ ಅದನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡುವುದು. ಕೋಮುವಾದಿ ಶಕ್ತಿಗಳನ್ನು ಮಟ್ಟಹಾಕಲು ದೃಢವಾದ ಕ್ರಮಗಳನ್ನು ಕೈಗೊಳ್ಳುವುದು. ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಅನುದಾನವನ್ನು ನೀಡುವುದು. ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಖಾಸಗೀಕರಣವನ್ನು ನಿಲ್ಲಿಸುವುದು. ಶಿಕ್ಷಣದ ಹಕ್ಕಿನ ಕಾಯ್ದೆಯ ಜಾರಿಯನ್ನು ಖಚಿತಪಡಿಸುವುದು.
ಉನ್ನತ ವಲಯಗಳಲ್ಲಿ ಭ್ರಷ್ಟಾಚಾರವನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದು. ತನಿಖೆಯನ್ನು ನಡೆಸಲು ಸ್ವತಂತ್ರ ಅಧಿಕಾರ ಹೊಂದಿರುವ ಲೋಕಪಾಲ ಮಸೂದೆಯನ್ನು ಅಂಗೀಕರಿಸುವುದು, ಚುನಾವಣಾ ಸುಧಾರಣೆಗಳನ್ನು ತರುವುದು. ಎಲ್ಲ ಸ್ತರಗಳಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವುದು. ಸಂಸತ್ತು ಮತ್ತು ಶಾಸಕಾಂಗಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವುದು, ದಲಿತರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಖಾಸಗಿ ವಲಯದಲ್ಲೂ ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ನೀಡುವುದು. ಅಲ್ಪಸಂಖ್ಯಾತರ ಮೀಸಲಾತಿ ಕುರಿತ ರಂಗನಾಥ ಮಿಶ್ರಾ ಆಯೋಗದ ವರದಿಯನ್ನು ಜಾರಿಗೊಳಿಸುವುದು, ಆದಿವಾಸಿಗಳ 5 ನೇ ಮತ್ತು 6 ನೇ ಶೆಡ್ಯೂಲ್ ಹಕ್ಕುಗಳನ್ನು ರಕ್ಷಿಸುವುದು. ಕಾರ್ಮಿಕ ವರ್ಗದ ಹಕ್ಕುಗಳನ್ನು ರಕ್ಷಿಸುವುದು.
ಕನಿಷ್ಠ ಕೂಲಿಯನ್ನು ಮತ್ತು ಸಾಮಾಜಿಕ ಭದ್ರತಾ ಕ್ರಮಗಳನ್ನು ಜಾರಿಗೊಳಿಸುವುದು. ಗುತ್ತಿಗೆ ಆಧಾರಿತ ಹಾಗೂ ತಾತ್ಕಾಲಿಕ ನೇಮಕಾತಿ ಪದ್ಧತಿಯನ್ನು ಅಂತ್ಯಗೊಳಿಸುವುದು. ಸ್ವತಂತ್ರ ವಿದೇಶಾಂಗ ನೀತಿಯನ್ನು ಅಂಗೀಕರಿಸುವುದು. ಮುಂತಾದ ಧೋರಣೆಗಳ ಬಗ್ಗೆ ಚರ್ಚಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.