ಜಿಲ್ಲೆ ರೈತರಿಗೆ ಅತಿವೃಷ್ಟಿ ಬರೆ
ಕನ್ನಡಪ್ರಭ ವಾರ್ತೆ, ಗದಗ, ಸೆ. 23
ರೈತನ ಕಷ್ಟಗಳಿಗೆ ಮಿತಿಯೇ ಇಲ್ಲ. ಮಳೆ ಬಂದರೂ, ಬಾರದಿದ್ದರೂ ತೊಂದರೆ ಅನುಭವಿಸುವುದು ರೈತನೇ. ಇದಕ್ಕೆ ನಿದರ್ಶನ ಎಂಬಂತೆ ಕಳೆದ 2-3 ವರ್ಷಗಳಿಂದ ಜಿಲ್ಲೆಯಲ್ಲಿ ಉಂಟಾದ ಬರದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ, ಈಗ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳೆಲ್ಲ ನೀರಲ್ಲಿ ಸಿಲುಕಿ ಕೊಳೆತು ಹೋಗುತ್ತಿವೆ. ಇನ್ನು ರೈತರು ಸಂಚರಿಸುವ ರಸ್ತೆ, ಬದು, ವಡ್ಡುಗಳೆಲ್ಲ ಮಳೆಯಿಂದಾಗಿ ಕೊಚ್ಚಿ ಹೋಗಿವೆ.
ಆಗಸ್ಟ್ 30ರಿಂದ ಪ್ರಾರಂಭವಾದ ಹುಬ್ಬ ಮಳೆಯು ಬಹುತೇಕ ಜಿಲ್ಲೆಯಾದ್ಯಂತ ಉತ್ತಮ ಆರಂಭವನ್ನು ತೋರಿಸಿತ್ತು. ಇದನ್ನೇ ನಂಬಿಕೊಂಡ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಕೈಗೊಂಡಿದ್ದರು. ನಂತರ ಸೆಪ್ಟೆಂಬರ್ 13ರಿಂದ ಪ್ರಾರಂಭವಾದ ಉತ್ತರಿ ಮಳೆಯು ಜಿಲ್ಲೆಯಾದ್ಯಂತ ಎಡಬಿಡದೇ ಸುರಿದಿದ್ದರಿಂದ ರೈತರ ಹೊಲಗಳಲ್ಲಿ ನೀರು ನಿಂತು ಬೆಳೆಗಳೆಲ್ಲ ಹಾಳಾಗಿವೆ.
ವಿವಿಧೆಡೆ ಕೆಲ ಹೊಲಗಳಲ್ಲಿನ ಬದು, ಒಡ್ಡುಗಳು ಸಂಪೂರ್ಣ ಹಾಳಾಗಿವೆ. ಅಲ್ಲದೇ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ ಸೇತುವೆಗಳು, ಸಿಡಿಗಳು ಮಳೆಯ ಹೊಡೆತಕ್ಕೆ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿವೆ.
ಕೊಚ್ಚಿಹೋದ ಫಲವತ್ತಾದ ಮಣ್ಣು: 2-3 ವರ್ಷಗಳಿಂದ ಜಿಲ್ಲೆಯಲ್ಲಿ ಸಮರ್ಪಕವಾದ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇನ್ನು ರೈತರು ಮಳೆಯಾಗದೇ ಇದ್ದರೂ ತಮ್ಮ ಹೊಲಗಳಿಗೆ ಅವಶ್ಯಕವಾಗಿ ಬೇಕಾದ ರಸಗೊಬ್ಬರಗಳನ್ನು ಹಾಕಿ ಹೊಲವನ್ನು ಉತ್ತಮವಾಗಿಟ್ಟುಕೊಂಡಿದ್ದರು. ಆದರೆ ಈಚೆಗೆ ಸುರಿದ ಮಳೆಯಿಂದಾಗಿ ಹೊಲಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ, ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಈಗಾಗಲೇ ಜಿಲ್ಲೆಯಲ್ಲಿ ನಿರಂತರ ಬರಗಾಲದಿಂದ ತೊಂದರೆ ಅನುಭವಿಸಿದ್ದ ರೈತರು ಸಾವಿರಾರು ರು. ಖರ್ಚು ಮಾಡಿ ಬದು, ಒಡ್ಡುಗಳನ್ನು ನಿರ್ಮಿಸಿಕೊಂಡಿದ್ದರು. ಆದರೆ, ಮಳೆಯಿಂದಾಗಿ ಬದು, ಒಡ್ಡುಗಳು ಸಂಪೂರ್ಣ ಹಾಳಾಗಿದ್ದು, ಮತ್ತೆ ಸಾವಿರಾರು ರು. ಖರ್ಚು ಮಾಡಿ ಬದು, ಒಡ್ಡು ನಿರ್ಮಿಸಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮುಂಬರುವ ಮಳೆಯಿಂದ ಹೆಚ್ಚಿನ ಸಂಕಷ್ಟವನ್ನು ಅನುಭವಿಸುವ ಪ್ರಸಂಗ ತಲೆದೋರಲಿದೆ.
ರು. 5 ಕೋಟಿ ಬೆಳೆಹಾನಿ
ಜಿಲ್ಲೆಯಲ್ಲಿ ಮಳೆಯಿಂದಾಗಿ ಆಗಿರುವ ಬೆಳೆಹಾನಿಯ ಕುರಿತು ಜಿಲ್ಲಾಡಳಿತವು ತುರ್ತು ಸಮೀಕ್ಷೆ ನಡೆಸಿದ್ದು, ಈಗಾಗಲೇ ಸುಮಾರು 5 ಕೋಟಿಗೂ ಅಧಿಕ ಬೆಳೆಹಾನಿ ಸಂಭವಿಸಿದೆ ಎಂದು ಈಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಜರುಗಿದ ತುರ್ತು ಸಭೆಯಲ್ಲಿ ಬೆಳೆಹಾನಿಯ ಕುರಿತು ಚರ್ಚಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಇದು ತುರ್ತು ಸಮೀಕ್ಷೆಯಾಗಿದ್ದು, ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದ್ದು, ಈ ಕುರಿತು ಕೂಡಲೇ ಸಮಗ್ರ ವರದಿ ನೀಡುವಂತೆ ಸಚಿವ ಎಚ್.ಕೆ. ಪಾಟೀಲ, ಕೃಷಿ, ಕಂದಾಯ, ಅಂಕಿ-ಸಂಖ್ಯೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
-ಅಜೀಜಅಹ್ಮದ ಬಳಗಾನೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

